ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21 ಲಕ್ಷ ಹೆಕ್ಟೇರ್‌ ಪಾಳು ಭೂಮಿ ಬಳಕೆಗೆ ‘ಭೂ ಗುತ್ತಿಗೆ ಕಾನೂನು’

Published 2 ಮಾರ್ಚ್ 2024, 16:06 IST
Last Updated 2 ಮಾರ್ಚ್ 2024, 16:06 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ 21 ಲಕ್ಷ ಹೆಕ್ಟೇರ್‌ ಪಾಳು ಭೂಮಿಯನ್ನು ಉಳುಮೆಗೆ ಬಳಸಿಕೊಳ್ಳಲು ಅನುಕೂಲವಾಗುವಂತೆ ‘ಭೂ ಗುತ್ತಿಗೆ ಕಾನೂನು’ ಜಾರಿಗೊಳಿಸಲು ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ಅಧ್ಯಕ್ಷತೆಯ ಎರಡನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆ.

ಆಯೋಗ ತನ್ನ 7ನೇ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶನಿವಾರ ಸಲ್ಲಿಸಿತು. 

ಕೃಷಿ ಭೂಮಿಯನ್ನು ಕೃಷಿ ಉದ್ದೇಶಗಳಿಗೆ ಗುತ್ತಿಗೆ ನೀಡುವುದನ್ನು ಕರ್ನಾಟಕ ಭೂ ಸುಧಾರಣಾ ಕಾಯ್ದೆ–1961 ನಿರ್ಬಂಧಿಸುತ್ತದೆ. ಹಿಡುವಳಿದಾರರನ್ನು ಒಕ್ಕಲೆಬ್ಬಿಸುವುದರ ವಿರುದ್ಧ ರಕ್ಷಣೆ ನೀಡುತ್ತದೆ. ಇದು ಉತ್ತಮ ಕಾನೂನಾದರೂ ಕೃಷಿ ಕ್ಷೇತ್ರದ ಹೂಡಿಕೆಗೆ ಅಡ್ಡಿಯಾಗಿದೆ. ಕೃಷಿ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಗೇಣಿದಾರ ರೈತರು ಕೃಷಿ ಭೂಮಿಯ ಮೇಲೆ ಹಕ್ಕುಗಳನ್ನು ಪಡೆಯುತ್ತಾರೆ ಎಂಬ ಕಾರಣದಿಂದ ಬಹುತೇಕ ಭೂ ಮಾಲೀಕರು ಗುತ್ತಿಗೆ ನೀಡದೇ ಭೂಮಿಯನ್ನು ಪಾಳು ಬಿಟ್ಟಿದ್ದಾರೆ. ಇದರಿಂದ ವಾರ್ಷಿಕ ₹8 ಸಾವಿರ ಕೋಟಿ ಬೆಳೆ ನಷ್ಟವಾಗುತ್ತಿದೆ ಎಂದು ಮಾಹಿತಿ ನೀಡಿದೆ.

‘ಕರ್ನಾಟಕ ಬೆಳೆ ಉತ್ಪಾದನೆ ಮತ್ತು ಭೂ ಪುನಶ್ಚೇತನ ಮಸೂದೆ’ಯನ್ನು ಕಂದಾಯ ಇಲಾಖೆ ಸಿದ್ಧಪಡಿಸಿ, ಹೊಸ ಭೂ ಗುತ್ತಿಗೆ ಕಾನೂನು ಜಾರಿಗೊಳಿಸಿದರೆ ಭೂ ಮಾಲೀಕರ ಒಪ್ಪಂದಕ್ಕೆ ಒಳಪಟ್ಟು ಪಾಳು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸಬಹುದು. ಇದು ಸಮಾಜದ ದುರ್ಬಲ ವರ್ಗಗಳಲ್ಲಿ ಭೂ ಬಳಕೆಯ ಬದಲಾವಣೆಗೆ ದಾರಿಯಾಗುತ್ತದೆ. ಆಹಾರ ಉತ್ಪಾದನೆಯಲ್ಲೂ ಗಣನೀಯ ಹೆಚ್ಚಳವಾಗುತ್ತದೆ ಎಂದಿದೆ.

ಇ–ಆಫೀಸ್‌ ಬಳಕೆಯಿಂದ ಅಬಕಾರಿ ಇಲಾಖೆಯಲ್ಲಿ ವ್ಯರ್ಥವಾಗುತ್ತಿರುವ ದ್ವಿತೀಯ, ಪ್ರಥಮ ದರ್ಜೆ ಸಹಾಯಕರನ್ನು ಅಬಕಾರಿ ಕಾನ್‌ಸ್ಟೆಬಲ್‌ಗಳಾಗಿ ಪರಿವರ್ತಿಸಬೇಕು, ಕುಟುಂಬ ಕಲ್ಯಾಣ ವಂತಿಗೆಯನ್ನು ತಿಂಗಳಿಗೆ ₹1 ಸಾವಿರ ನಿಗದಿ ಮಾಡಬೇಕು. ವಿಳಂಬವಾಗುವ ಜನನ–ಮರಣ ಪ್ರಮಾಣಪತ್ರ ನೀಡುವ ಹೊಣೆಗಾರಿಕೆ ಆರೋಗ್ಯ ಇಲಾಖೆ, ಯೋಜನಾ ಇಲಾಖೆಗೆ ವಹಿಸಬೇಕು. ಗಡಿನಾಡು ಅಭಿವೃದ್ಧಿ ಪ್ರಾಧಿಕಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಯೋಜನಾ ಇಲಾಖೆಗೆ ವರ್ಗಾಯಿಸಬೇಕು. ಸ್ಥಳೀಯ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿ ಮತ್ತು ಪುರಸಭೆ ಪರಂಪರೆ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗಳನ್ನು ರಚಿಸಬೇಕು ಎಂದು ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT