ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್​ವೈ ಸರ್ಕಾರದ ಮಾದರಿಯಲ್ಲಿ ನೆರೆ ಸಂತ್ರಸ್ತರಿಗೆ ಪರಿಹಾರ: ಬೊಮ್ಮಾಯಿ

Last Updated 1 ಆಗಸ್ಟ್ 2021, 10:48 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಹದಿಂದ ಸಂತ್ರಸ್ತರಾದವರಿಗೆ ಯಡಿಯೂರಪ್ಪ ನೇತೃತ್ವದ ಸರ್ಕಾರದ ಅವಧಿಯಲ್ಲಿ ನೀಡುತ್ತಿದ್ದ ಮಾದರಿಯಲ್ಲಿಯೇ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕುರಿತು ಆರ್ಥಿಕ ಇಲಾಖೆಯ ಅಧಿಕಾರಿಗಳ ಜೊತೆ ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಸಭೆ ನಡೆಸಿದರು.ಬಳಿಕ ಮಾತನಾಡಿದ ಅವರು, ‘ನೆರೆ ಹಾನಿ ಸಮೀಕ್ಷೆಗೆ ರಾಜ್ಯಕ್ಕೆ ಕೇಂದ್ರ ತಂಡವನ್ನು ಕಳುಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆಪತ್ರ ಬರೆದಿದ್ದೇನೆ’ ಎಂದು ಹೇಳಿದರು.

‌ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಅಧಿಕಾರಿ ಐಎಸ್‌ಎನ್‌ ಪ್ರಸಾದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ನೆರೆ ಪರಿಹಾರ ಕಾರ್ಯಗಳಿಗೆ ಹಾಗೂ ಸಂತ್ರಸ್ತರಿಗೆ ನೆರವು ನೀಡಲು ಅಗತ್ಯ ಹಣಕಾಸು ಒದಗಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಬಳಿಕ ಮಾತನಾಡಿದ ಬೊಮ್ಮಾಯಿ, ‘ಮಳೆ– ಪ್ರವಾಹದಿಂದ 13 ಜಿಲ್ಲೆಗಳಲ್ಲಿ 466 ಗ್ರಾಮಗಳಲ್ಲಿ ಸಮಸ್ಯೆಯಾಗಿದೆ. 13 ಜನರು ಮೃತಪಟ್ಟಿದ್ದಾರೆ. ಒಬ್ಬರು ನಾಪತ್ತೆಯಾಗಿದ್ದಾರೆ. ರಸ್ತೆಗಳು, ಸೇತುವೆಗಳು ಹಾಳಾಗಿವೆ. ಸಂಪರ್ಕ ರಸ್ತೆ, ಸೇತುವೆಗಳನ್ನು ತಕ್ಷಣ ಸರಿಪಡಿಸಲು ಸೂಚನೆ ನೀಡಲಾಗಿದೆ. ರಾಜ್ಯ ಸರ್ಕಾರದಿಂದ ಅದಕ್ಕಾಗಿ ₹ 510 ಕೋಟಿ ನೀಡಲಾಗುತ್ತದೆ. ₹ 150 ಕೋಟಿ ಎನ್‌ಡಿಆರ್​​​ಎಫ್​​ ಅನುದಾನ ಬಳಕೆ ಮಾಡಲಾಗುವುದು. ₹ 700 ಕೋಟಿಗೂ ಹೆಚ್ಚು ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿದೆ’ ಎಂದರು.

‘ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ನೀಡುತ್ತಿದ್ದಂತೆ ಮನೆ ಕಳೆದುಕೊಂಡವರಿಗೆ ತಕ್ಷಣ ₹ 10 ಸಾವಿರ ಕೊಡಲು ಸೂಚನೆ ನೀಡಲಾಗಿದ್ದು, ಪೂರ್ಣ ಮನೆ ಬಿದ್ದವರಿಗೆ ₹ 5 ಲಕ್ಷ, ಭಾಗಶಃ ಬಿದ್ದವರಿಗೆ ₹ 3 ಲಕ್ಷ ಪರಿಹಾರ ನೀಡಲಾಗುವುದು’ ಎಂದ ಅವರು, ‘15 ದಿನಗಳ ಒಳಗೆ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು. ಈ ಬಗ್ಗೆ ವರದಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಪ್ರವಾಹದಿಂದ ಆಗಿರುವ ಹಾನಿ ಸಮೀಕ್ಷೆಗೆ ಕೇಂದ್ರ ತಂಡ ಕಳುಹಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೇನೆ. ಮುಂದಿನ ದೆಹಲಿ ಪ್ರವಾಸದ ವೇಳೆ ಭೇಟಿ ಮಾಡಿ ಮತ್ತೊಮ್ಮೆ ಪರಿಹಾರದ ಮನವಿ ಮಾಡುತ್ತೇನೆ’ ಎಂದರು.

ಹಿಂದಿನ ಪರಿಹಾರದ ಹಣವೇ ಕೊಟ್ಟಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಪ್ರವಾಹ ಬಂದಾಗ ಕೂಡಲೇ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ಹಿಂದೆ ಅವರು ಯಾವ ರೀತಿ ಮಾಡಿದ್ದಾರೆ ಎಂದು ಗೊತ್ತಿದೆ. ಹೀಗಾಗಿ, ಮುಖ್ಯಮಂತ್ರಿ ಆಗಿದ್ದವರು ಸ್ವಲ್ಪ ಅರ್ಥ ಮಾಡಿಕೊಂಡು ಮಾತಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT