‘ಸರ್ಕಾರದಿಂದಲೇ ಪ್ರಚೋದನೆ’
ಹಿಂದೂ ಧರ್ಮೀಯರು ಅನ್ಯಧರ್ಮಕ್ಕೆ ಮತಾಂತರವಾಗಬೇಕು ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರವು ಪ್ರಚೋದಿಸುತ್ತಿದೆ. ಕಾಂಗ್ರೆಸ್ ಸರ್ಕಾರವು ಈವರೆಗೆ ಹಿಂದೂ ಧರ್ಮದ ಅವಹೇಳನ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ವಿರುದ್ಧದ ಅಪಪ್ರಚಾರಕ್ಕೆ ಕುಮ್ಮಕ್ಕು ನೀಡುತ್ತಿತ್ತು. ಈಗ ಒಂದು ಹೆಜ್ಜೆ ಮುಂದೆ ಹೋಗಿ, ಮತಾಂತರಕ್ಕೆ ಪ್ರಚೋದಿಸುತ್ತಿದೆ. ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಜಾತಿಗಳ ಪಟ್ಟಿಯಲ್ಲಿ, ಹಿಂದೂ ಜಾತಿಗಳ ಜತೆಗೆ ‘ಕ್ರಿಶ್ಚಿಯನ್’ ಎಂದು ಸೇರಿಸಿದೆ. ಈ ಪ್ರಮಾದವನ್ನು ಸರಿಪಡಿಸುವಂತೆ ಬಿಜೆಪಿ ಒತ್ತಾಯಿಸಿತ್ತು. ಅದನ್ನು ಮಾಡುವ ಬದಲಿಗೆ, ಮತಾಂತರವನ್ನು ಬೆಂಬಲಿಸುವ ಮೂಲಕ ತಾವು ಹಿಂದೂ ವಿರೋಧಿ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಸಾಮಾಜಿಕ ಸಮೀಕ್ಷೆಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಛಿದ್ರಗೊಳಿಸುವ ಹುನ್ನಾರ, ರಹಸ್ಯ ಕಾರ್ಯಸೂಚಿ ಕಾಂಗ್ರೆಸ್‌ಗೆ ಇದ್ದಂತಿದೆ.– ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ
‘ಸಂವಿಧಾನ ಬಾಹಿರ’
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಕುರ್ಚಿ ಗಟ್ಟಿಮಾಡಿಕೊಳ್ಳುವ ಸಲುವಾಗಿ ಜಾತೀವಾರು ಸಮೀಕ್ಷೆ ನಡೆಸುತ್ತಿದ್ದಾರೆ. ಇದರಿಂದ ಜನರಿಗೆ ಯಾವ ಉಪಯೋಗವೂ ಆಗುವುದಿಲ್ಲ. ಸಂವಿಧಾನದಲ್ಲಿ ಆರು ಧರ್ಮಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಸಮೀಕ್ಷೆಯಲ್ಲೂ ಅಷ್ಟೇ ಧರ್ಮಗಳ ಹೆಸರು ಇರಬೇಕಿತ್ತು. ಆದರೆ ಈ ಸರ್ಕಾರ ಮತಾಂತರಗೊಂಡ ಕ್ರೈಸ್ತರು ಎಂಬ ಹೊಸ ಕಾಲಂ ಅನ್ನು ಸೃಷ್ಟಿಸಿದ್ದಾರೆ. ಇದು ಸಂವಿಧಾನಬಾಹಿರ. ಇದು ರಾಜಕೀಯ ಪ್ರೇರಿತ. ಕ್ರೈಸ್ತ ಧರ್ಮಕ್ಕೂ ಮತಾಂತರ ನಡೆದಿರುತ್ತದೆ, ಅಲ್ಲಿಂದ ಬೇರೆ ಧರ್ಮಕ್ಕೂ ಮತಾಂತರವಾಗಿರುತ್ತದೆ. ಆದರೆ ಸಿದ್ದರಾಮಯ್ಯ ಅವರು ಕ್ರೈಸ್ತ ಧರ್ಮಕ್ಕಾದ ಮತಾಂತರಕ್ಕೆ ಮಾತ್ರ ಮನ್ನಣೆ ನೀಡಿದ್ದಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಲ್ಲಿದೆ ಎಂಬುದನ್ನು ಕಡೆಗಣಿಸಿ, ಮತಾಂತರ ಜನರ ಹಕ್ಕು ಎಂದಿದ್ದಾರೆ. ಸರ್ಕಾರದ ಈ ನಡೆ ರಾಜಕೀಯ ಪ್ರೇರಿತವಾದುದು.– ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದ
‘ಬೊಟ್ಟು ಮಾಡುವ ನೈತಿಕತೆ ಸಿದ್ದರಾಮಯ್ಯಗಿಲ್ಲ’
ಹಿಂದೂ ಸಮಾಜದಲ್ಲಿ ಅಸ್ಪೃಶ್ಯತೆ, ಅಸಮಾನತೆ ಇದೆ ಎನ್ನುವ ಏಕೈಕ ಕಾರಣ ಕೊಟ್ಟು ಲಕ್ಷಾಂತರ ಸಂಖ್ಯೆಯಲ್ಲಿ ಹಿಂದೂಗಳನ್ನು ಮತಾಂತರ ಮಾಡಿ, ಏಸು ಕ್ರಿಸ್ತನ ಎದುರು ಸಮಾನವಾಗಿ ನಿಲ್ಲಿಸುತ್ತೇವೆ ಎಂದಿದ್ದರು. ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ ಎಂದಿದ್ದರು. ಆದರೆ ಹಿಂದೂ ಸಮಾಜದೊಳಗಿರುವ ಅಷ್ಟೂ ಜಾತಿಗಳ ಹೆಸರಿನ ಹಿಂದೆ ಕ್ರೈಸ್ತ/ಕ್ರಿಶ್ಚಿಯನ್ ಎಂದು ಸೇರಿಸಿದ್ದು ಏಕೆ? ಕ್ರೈಸ್ತ ಧರ್ಮದಲ್ಲೂ ಹಿಂದೂ ಸಮಾಜಕ್ಕೆ ಸಮಾನಾಂತರವಾದ ಜಾತಿ ವ್ಯವಸ್ಥೆ ನಿರ್ಮಾಣ ಮಾಡಲು ಹೊರಟಿದ್ದೀರಾ? ಆ ಜನರು ಯಾವ ಉದ್ದೇಶದಿಂದ ಮತಾಂತರವಾದರೋ, ಆ ಉದ್ದೇಶಕ್ಕೆ ವಿರುದ್ಧವಾದ ನಿಲುವನ್ನು ಸರ್ಕಾರ ತೆಳೆದಿದೆ. ಇಂತಹ ಟೊಳ್ಳುವಾದ ಮುಂದಿಡುತ್ತಿರುವ ಸಿದ್ದರಾಮಯ್ಯ ಅವರಿಗೆ, ಹಿಂದೂ ಸಮಾಜದಲ್ಲಿ ಅಸಮಾನತೆ ಇದೆ ಎಂದು ಬೊಟ್ಟು ಮಾಡುವ ನೈತಿಕತೆ ಇಲ್ಲ.– ಸಿ.ಟಿ.ರವಿ, ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.