ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಧಾನುಕರಣೆಯಿಂದ ಮೂಲಕ್ಕೆ ಹಿಂತಿರುಗುವಿಕೆ’

ಭಾರತೀಯ ವಿಕಾಸ ಸಂಗಮದ ಸಂರಕ್ಷಕ ಬಸವರಾಜ ಪಾಟೀಲ ಸೇಡಂ ಅಭಿಮತ
Last Updated 23 ಡಿಸೆಂಬರ್ 2018, 19:51 IST
ಅಕ್ಷರ ಗಾತ್ರ

ವಿಜಯಪುರ:‘ಭಾರತ ವಿಕಾಸ ಸಂಗಮವು ಸಾಂಪ್ರದಾಯಿಕ ಸಂಘಟನೆಗಳಿಗಿಂತ ವಿಭಿನ್ನವಾಗಿದೆ. ಸಮಾಜದ ಸಹಕಾರ, ಪ್ರಕೃತಿ ಆಧಾರಿತ ವಿಕಾಸದ ರಚನಾತ್ಮಕ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿಗಳ, ಸಂಘಟನೆಗಳ ವೇದಿಕೆಯಾಗಿದೆ’ ಎನ್ನುತ್ತಾರೆ ಸಂಘಟನೆಯ ಸಂರಕ್ಷಕ ಬಸವರಾಜ ಪಾಟೀಲ ಸೇಡಂ.

ಸಂಘಟನೆಯ ವತಿಯಿಂದ ವಿಜಯಪುರ ತಾಲ್ಲೂಕಿನ ಕಗ್ಗೋಡದಲ್ಲಿ ಸೋಮವಾರದಿಂದ ಆರಂಭಗೊಳ್ಳಲಿರುವ ಭಾರತೀಯ ಸಂಸ್ಕೃತಿ ಉತ್ಸವ–5ರ ಅಂತಿಮ ಹಂತದ ಸಿದ್ಧತೆಗಳು, ಸರಣಿ ಪೂರ್ವಭಾವಿ ಸಭೆಗಳ ನಡುವೆಯೇ ಭಾನುವಾರ ‘ಪ್ರಜಾವಾಣಿ’ ಜತೆ ಉತ್ಸವದ ಆಶಯಗಳನ್ನು ಹಂಚಿಕೊಂಡರು.

* ಉತ್ಸವದ ಆಶಯ ಏನು ?

ಸ್ವಾತಂತ್ರ್ಯ ನಂತರ ವಿದೇಶಿ ಅಂಧಾನುಕರಣೆಗೆ ನಮ್ಮ ದೇಶ ಹೆಚ್ಚಾಗಿ ಜಾರುತ್ತಿದೆ. ನಾವು ನಮ್ಮ ಮೂಲಕ್ಕೆ ಶೀಘ್ರದಲ್ಲೇ ಹಿಂತಿರುಗಬೇಕಿದೆ. ಈ ನಿಟ್ಟಿನಲ್ಲಿ ಮೂರು ವರ್ಷಕ್ಕೊಮ್ಮೆ ಭಾರತ ವಿಕಾಸ ಸಂಗಮದ ವತಿಯಿಂದ ‘ಭಾರತೀಯ ಸಂಸ್ಕೃತಿ ಉತ್ಸವ’ ಆಯೋಜಿಸುತ್ತಿದ್ದೇವೆ.

ನಮ್ಮ ಈಗಿನ ಜಿಡಿಪಿಯ ಮಾನದಂಡ ಬದಲಾಗಬೇಕಿದೆ. ಕಾರು, ಟಿವಿ, ಮೊಬೈಲ್‌ ಆಧಾರಿತ ಜಿಡಿಪಿ ಬೇಕಿಲ್ಲ. ಬಡವರ ಬದುಕಿನ ಆಧಾರಿತ ಜಿಡಿಪಿ ಬೇಕಿದೆ. ಬ್ಯಾಂಕ್‌ಗಳಲ್ಲಿ ಕಾರು ಖರೀದಿಗೆ ಸಾಲ ಸಿಗುತ್ತದೆ. ಬಡವನೊಬ್ಬ ದುಡಿದು ಬದುಕು ಕಟ್ಟಿಕೊಳ್ಳಲು ಸಾಲ ಸಿಗುತ್ತಿಲ್ಲ.

ವಿದೇಶಿಯ ಅಂಧಾನುಕರಣೆ ನಮ್ಮನ್ನು ಅಧಃಪತನಕ್ಕೆ ತಳ್ಳಿದೆ. ಇದರಿಂದ ಹೊರಬರಲು ಸ್ಥಳೀಯ ಉತ್ಪನ್ನಕ್ಕೆ ಸ್ಥಳೀಯವಾಗಿಯೇ ಮಾರುಕಟ್ಟೆ ಸಿಗಬೇಕು. ಬಹುಮುಖಿ ಕೃಷಿ ಕಾಯಕಕ್ಕೆ ಒತ್ತು ನೀಡಬೇಕು. ನಮ್ಮ ನಿತ್ಯ ಬಳಕೆ ವಸ್ತುಗಳ ಸುತ್ತವೇ 800 ವಿವಿಧ ಉದ್ಯೋಗ ಸೃಷ್ಟಿಯಾಗುತ್ತವೆ. ಬೃಹತ್ ಉದ್ಯಮ ನಮಗೆ ಬೇಕಿಲ್ಲ. ಈ ದಿಸೆಯಲ್ಲಿ ಉತ್ಸವ ಆಯೋಜಿಸಲಾಗುತ್ತಿದೆ.

* ಯಶಸ್ಸು ಸಿಕ್ಕಿದೆಯಾ ?

ಕಲಬುರ್ಗಿಯಲ್ಲಿ ಭಾರತ ವಿಕಾಸ ಸಂಗಮದ ನೇತೃತ್ವದಲ್ಲಿ 12000 ಶೌಚಾಲಯಗಳನ್ನು ₨ 10 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದೆವು. ತಲಾ ಒಂದು ಶೌಚಾಲಯದ ನಿರ್ಮಾಣಕ್ಕೆ ₨ 8000 ಖರ್ಚಾಯಿತು. ಈ ಹಿಂದಿನ ಕೇಂದ್ರದ ಯುಪಿಎ ಸರ್ಕಾರದ ಸಚಿವ ಜೈರಾಂ ರಮೇಶ್‌ ಇದನ್ನು ನೋಡಿದರು. ಆಗ ಕೇಂದ್ರ ಸರ್ಕಾರ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ₨ 3600 ಕೊಡುತ್ತಿತ್ತು.

ಕಲಬುರ್ಗಿಯಲ್ಲಿನ ಬೆಳವಣಿಗೆ ನಂತರ ₹ 10000 ಕೊಡಲು ಮುಂದಾಯ್ತು. ರಾಜ್ಯಗಳು ಸಹಕಾರ ನೀಡಿದವು. ಮೋದಿ ಸರ್ಕಾರ ಈ ಯೋಜನೆಯನ್ನೇ ಮುಂದುವರೆಸಿ ದೇಶದಲ್ಲಿ 6 ಕೋಟಿ ಶೌಚಾಲಯ ನಿರ್ಮಿಸಿದೆ. ಇದು ಬದಲಾವಣೆಯಲ್ಲವೇ ?

2015ರಲ್ಲಿ ಕನ್ಹೇರಿಯಲ್ಲಿ ಉತ್ಸವ ನಡೆದಾಗ ಒಂದು ಎಕರೆಯಲ್ಲಿ 110 ಬೆಳೆ ಬೆಳೆದು ಪ್ರದರ್ಶಿಸಿದ್ದೆವು. ಈ ಮಾದರಿಯನ್ನೇ ಕೇಂದ್ರ ಸರ್ಕಾರ ಇದೀಗ ನೂರು ಕಡೆ ಪ್ರಯೋಗಿಸುತ್ತಿದೆ. ಈ ಮಾದರಿಯನ್ನು ಹಲ ರೈತರು ಅನುಕರಿಸಿ ಸ್ವಾವಲಂಬಿಗಳಾಗಿದ್ದಾರೆ. ಇದಕ್ಕಿಂತ ಯಶಸ್ಸು ಇನ್ನೇನು ಬೇಕಿದೆ.

* ಜನರ ಸ್ಪಂದನೆ ಹೇಗಿದೆ ?

ರಾಷ್ಟ್ರಪಿತನ ಸ್ವರಾಜ್ಯ ಪರಿಕಲ್ಪನೆಯನ್ನು ತಮ್ಮ ತಮ್ಮ ಭಾಗದಲ್ಲಿ ಅನುಷ್ಠಾನಗೊಳಿಸಲು ಶ್ರಮಿಸುತ್ತಿರುವ ದೇಶದ ವಿವಿಧೆಡೆಯ ಸ್ವರಾಜ್ಯ ಪ್ರತಿಪಾದಕರಿಗೆ ವೇದಿಕೆ ದೊರೆತಿದೆ. ಇಂಥ ಉತ್ಸವಗಳಲ್ಲಿ ಅವರೆಲ್ಲಾ ಭಾಗಿಯಾಗಿ ತಮ್ಮ ಚಿಂತನೆ, ದೂರದೃಷ್ಟಿಯ ಆಲೋಚನೆ ಹಂಚಿಕೊಳ್ಳುತ್ತಾರೆ. ಈ ಉತ್ಸವದಲ್ಲಿ ಇಂಥ 600 ಮಂದಿ ಭಾಗಿಯಾಗಲಿದ್ದಾರೆ.

ಕನ್ಹೇರಿ ಉತ್ಸವಕ್ಕೆ 16 ಲಕ್ಷ ಜನ ಸೇರಿದ್ದರು. ಈಗ 20 ಲಕ್ಷ ಜನರು ಭಾಗಿಯಾಗುವ ನಿರೀಕ್ಷೆಯಿದೆ. ವರ್ಷದಿಂದ ವರ್ಷಕ್ಕೆ ಸ್ವದೇಶಿ, ದೇಶಿ ಸಂಸ್ಕೃತಿಯತ್ತ ಒಲವು ಬೆಳೆಸಿಕೊಳ್ಳುವವರ ಸಂಖ್ಯೆ ಹಂತ ಹಂತವಾಗಿ ಹೆಚ್ಚುತ್ತಿದೆ.

* ಸರ್ಕಾರಗಳ ಪಾತ್ರ ಏನಿರಬೇಕು ?

ಸರ್ಕಾರಗಳು ಮೊದಲು ತಮ್ಮ ನಿಲುವು ಬದಲಿಸಿಕೊಳ್ಳಬೇಕಿದೆ. ತಾಯಿ ಗರ್ಭದಿಂದ ಭೂ ತಾಯಿ ಗರ್ಭ ಸೇರುವ ತನಕ ಉಚಿತ ಯೋಜನೆ ಜಾರಿಗೊಳಿಸುವುದನ್ನು ಕೈ ಬಿಡಬೇಕು. ಅರ್ಹರಿಗಷ್ಟೇ ಈ ಯೋಜನೆಗಳಿರಬೇಕು. ಆದರೆ ಸದ್ಯದ ಸ್ಥಿತಿ ಆಗಿಲ್ಲ. ಎಲ್ಲರೂ ಉಚಿತಕ್ಕೆ ಮುಗಿ ಬೀಳುವವರೇ ಆಗಿದ್ದಾರೆ.

ಸರ್ಕಾರ ಸಾಮೂಹಿಕವಾಗಿ ನೆರವು ನೀಡಬೇಕು ಎಂದರೇ ಪ್ರಾಕೃತಿಕ ವಿಕೋಪಗಳಾದ ಭೂಕಂಪ, ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿದಾಗ ಮಾತ್ರ ಜನರ ಸಹಾಯಕ್ಕೆ ಮುಂದಾಗಬೇಕು. ಉಳಿದಂತೆ ದೈನಂದಿನ ಸಂಸಾರದ ಬದುಕಿಗೆ ಪ್ರವೇಶಿಸಬಾರದು. ಆಡಳಿತ ನಡೆಸಲಷ್ಟೇ ಒತ್ತು ನೀಡಬೇಕು.

* ಒಂದು ಕೋಮಿಗೆ ಸೀಮಿತ ಎಂಬ ಆರೋಪವಿದೆಯಲ್ಲಾ?

ಮೊದಲು ನೀವು ಇಂಥ ಪ್ರಶ್ನೆಯನ್ನೇ ಕೇಳಬಾರದು. ಪ್ರತಿಯೊಂದಕ್ಕೂ ವಿರೋಧ ಸಹಜ. ಅಪಸ್ವರ ವ್ಯಕ್ತಪಡಿಸುವವರು ಅದಕ್ಕೂ ಮೊದಲು ಉತ್ಸವದಲ್ಲಿ ಭಾಗಿಯಾಗಿ ಇಲ್ಲಿನ ಚಿತ್ರಣ ಗಮನಿಸಲಿ. ಆಮಂತ್ರಣ ಪತ್ರಿಕೆ ನೋಡಲಿ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಯಾವುದಕ್ಕೂ ಅಡ್ಡಿಯಾಗಿಲ್ಲ. ತಮ್ಮ ವಿರೋಧಿಗಳಿಗೂ ಸಮಿತಿಗಳಲ್ಲಿ ಸ್ಥಾನ ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT