ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌರಿಂಗ್‌ನಲ್ಲಿ ಪರೀಕ್ಷೆ: ಎಸ್‌ಐಟಿ ಕಚೇರಿಯಲ್ಲಿ ರಾತ್ರಿ ಕಳೆದ ರೇವಣ್ಣ

ವಾರಂಟ್ ಪಡೆದು ಎಚ್‌.ಡಿ.ರೇವಣ್ಣ ಬಂಧಿಸಿದ್ದ ಎಸ್ಐಟಿ ಅಧಿಕಾರಿಗಳು * ಊಟ ತಂದುಕೊಟ್ಟ ಸಿಬ್ಬಂದಿ
Published 4 ಮೇ 2024, 22:41 IST
Last Updated 4 ಮೇ 2024, 22:41 IST
ಅಕ್ಷರ ಗಾತ್ರ

ಬೆಂಗಳೂರು: ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಬಂಧಿಸಿರುವ ಜೆಡಿಎಸ್ ಶಾಸಕ ಎಚ್‌.ಡಿ.ರೇವಣ್ಣ ಅವರನ್ನು ಬೌರಿಂಗ್ ಆಸ್ಪತ್ರೆಗೆ ಶನಿವಾರ ರಾತ್ರಿಯೇ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.

ಕೆ.ಆರ್.ನಗರದಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ರೇವಣ್ಣ ಅವರ ಪತ್ತೆಗೆ ಎಸ್‌ಐಟಿ ಅಧಿಕಾರಿಗಳು ವಿಶೇಷ ತಂಡ ರಚಿಸಿದ್ದರು. ಪದ್ಮನಾಭನಗರದಲ್ಲಿರುವ ಎಚ್‌.ಡಿ.ದೇವೇಗೌಡ ಮನೆ, ಬಿಡದಿಯಲ್ಲಿರುವ ತೋಟದ ಮನೆ ಹಾಗೂ ಇತರೆಡೆಯು ಶೋಧ ನಡೆಸಲು ಅಧಿಕಾರಿಗಳು ನ್ಯಾಯಾಲಯದಿಂದ ವಾರಂಟ್ ಸಹ ಪಡೆದಿದ್ದರು.

ಮೂರು ಸ್ಥಳಗಳಿಗೂ ಏಕಕಾಲದಲ್ಲಿ ಭೇಟಿ ನೀಡಿದ್ದ ಅಧಿಕಾರಿಗಳ ತಂಡ, ಶೋಧ ನಡೆಸಿದರು. ಪದ್ಮನಾಭನಗರದಲ್ಲಿರುವ ಮನೆಯಲ್ಲಿಯೇ ರೇವಣ್ಣ ಸಿಕ್ಕಿಬಿದ್ದರು. ಅವರಿಗೆ ವಾರಂಟ್‌ ತೋರಿಸಿದ ಅಧಿಕಾರಿಗಳು, ವಶಕ್ಕೆ ಪಡೆದು ಅರಮನೆ ರಸ್ತೆಯ ಕಾರ್ಲ್‌ಟನ್‌ ಕಟ್ಟಡದಲ್ಲಿರುವ ಕಚೇರಿಗೆ ಕರೆತಂದರು. ಕೆಲ ನಿಮಿಷ ಕಚೇರಿಯಲ್ಲಿ ವಿಚಾರಣೆ ನಡೆಸಿ, ಕಾನೂನು ಪ್ರಕ್ರಿಯೆ ನಡೆಸಿದರು.

ವೈದ್ಯರಿಂದ ತಪಾಸಣೆ: 65 ವರ್ಷ ವಯಸ್ಸಿನ ರೇವಣ್ಣ ಅವರನ್ನು ಬಿಗಿ ಭದ್ರತೆಯಲ್ಲಿ ಬೌರಿಂಗ್ ಆಸ್ಪತ್ರೆಗೆ ಕರೆದೊಯ್ದಿದ್ದ ಅಧಿಕಾರಿಗಳು, ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ರೇವಣ್ಣ ಅವರ ರಕ್ತದೊತ್ತಡ ಹಾಗೂ ಇತರೆ ಆರೋಗ್ಯದ ಬಗ್ಗೆ ತಪಾಸಣೆ ನಡೆಸಲಾಯಿತು.

ಅರ್ಧ ಗಂಟೆಯೂ ಹೆಚ್ಚು ಕಾಲ ರೇವಣ್ಣ ಹಾಗೂ ಅಧಿಕಾರಿಗಳು ಆಸ್ಪತ್ರೆಯಲ್ಲಿದ್ದರು. ವೈದ್ಯಕೀಯ ತಪಾಸಣೆ ಪೂರ್ಣಗೊಂಡ ನಂತರ ವೈದ್ಯರಿಂದ ವರದಿ ಪಡೆದ ಪೊಲೀಸರು, ರೇವಣ್ಣ ಅವರನ್ನು ಪುನಃ ಕಚೇರಿಗೆ ಕರೆತಂದರು.

ರೇವಣ್ಣ ಅವರಿಗೆ ರಾತ್ರಿ ಎಸ್‌ಐಟಿ ಸಿಬ್ಬಂದಿಯೇ ಊಟ ತಂದು ಕೊಟ್ಟರು. ಭಾನುವಾರ ರಾತ್ರಿ ಕಚೇರಿಯಲ್ಲಿಯೇ ರೇವಣ್ಣ ಅವರನ್ನು ಇರಿಸಲಾಯಿತು.

‘ಅಪಹರಣ ಹಾಗೂ ಅಕ್ರಮ ಬಂಧನ ಪ್ರಕರಣದಲ್ಲಿ ರೇವಣ್ಣ ಅವರನ್ನು ಬಂಧಿಸಲಾಗಿದೆ. ಸಂತ್ರಸ್ತೆ ಅಪಹರಣದ ಬಗ್ಗೆ ಅವರಿಂದ ಪ್ರಾಥಮಿಕ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರೇವಣ್ಣ ಅವರನ್ನು ನ್ಯಾಯಾಧೀಶರ ಎದುರು ಭಾನುವಾರ ಬೆಳಿಗ್ಗೆ ಹಾಜರುಪಡಿಸಿದ ಸಂದರ್ಭದಲ್ಲಿ, ಪ್ರಕರಣದ ಮಾಹಿತಿಯನ್ನು ನ್ಯಾಯಾಧೀಶರ ಗಮನಕ್ಕೆ ತರಲಾಗುವುದು’ ಎಂದು ಎಸ್ಐಟಿ ಮೂಲಗಳು ಹೇಳಿವೆ.

‘ಇದೊಂದು ಗಂಭೀರ ಪ್ರಕರಣ. ಸಾಕಷ್ಟು ಸಂತ್ರಸ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ. ಜೊತೆಗೆ, ಅಪಹರಣ ಮಾಡಿದ್ದ ಸಂತ್ರಸ್ತೆ ಮೇಲೆ ಹಲ್ಲೆ ಮಾಡಿರುವುದು ಕಂಡುಬಂದಿದೆ. ರೇವಣ್ಣ ಸೇರಿದಂತೆ ಹಲವರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ಎಲ್ಲರನ್ನೂ ಪತ್ತೆ ಮಾಡಲು ರೇವಣ್ಣ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕು. ಹೀಗಾಗಿ, ಅವರನ್ನು ಕಸ್ಟಡಿಗೆ ನೀಡುವಂತೆ ನ್ಯಾಯಾಲಯವನ್ನು ಕೋರಲಾಗುವುದು’ ಎಂದು ಮೂಲಗಳು ತಿಳಿಸಿವೆ.

ಕಾರ್ಲ್‌ಟನ್‌ ಕಟ್ಟಡದ ಬಳಿ ಬಿಗಿ ಭದ್ರತೆ

ರೇವಣ್ಣ ಬಂಧನ ಹಿನ್ನೆಲೆಯಲ್ಲಿ ಎಸ್‌ಐಟಿ ಕಚೇರಿ ಇರುವ ಅರಮನೆ ರಸ್ತೆಯ ಕಾರ್ಲ್‌ಟನ್‌ ಕಟ್ಟಡದ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಹೈಗ್ರೌಂಡ್ಸ್ ಠಾಣೆ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆಗೆ ನಿಯೋಜಿಸಲಾಗಿತ್ತು. ಕೆಎಸ್‌ಆರ್‌ಪಿ ತುಕಡಿಯನ್ನು ಭದ್ರತೆಗೆ ಬಳಸಿಕೊಳ್ಳಲಾಗಿತ್ತು. ಕಾರ್ಲ್‌ಟನ್ ಕಟ್ಟಡದ ಪ್ರವೇಶ ದ್ವಾರದಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಿ ಬ್ಯಾರಿಕೇಡ್‌ಗಳನ್ನು ನಿಲ್ಲಿಸಲಾಗಿತ್ತು. ‘ರೇವಣ್ಣ ಬಂಧನದಿಂದಾಗಿ ಅವರು ಬೆಂಬಲಿಗರು ಕಾರ್ಲ್‌ಟನ್‌ ಕಟ್ಟಡದ ಬಳಿ ಪ್ರತಿಭಟಿಸುವ ಸೂಚನೆ ಇತ್ತು. ಮುಂಜಾಗ್ರತೆಯಾ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಭಾನುವಾರವೂ ಭದ್ರತೆ ಮುಂದುವರಿಯಲಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT