ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಚಾದ್ರಿ, ಅಂಜನಾದ್ರಿಯಲ್ಲಿ ರೋಪ್‌ವೇ: ಕರ್ನಾಟಕ ಸರ್ಕಾರ ನಿರ್ಧಾರ

ಕಾರ್ಯಸಾಧ್ಯತಾ ಅಧ್ಯಯನ ಪೂರ್ಣ *ಡಿ‍ಪಿಆರ್ ಸಿದ್ಧಪಡಿಸಲು ಒಪ್ಪಂದ
Published 28 ಏಪ್ರಿಲ್ 2023, 20:35 IST
Last Updated 28 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

ನವದೆಹಲಿ: ಜೋಗ ಜಲಪಾತ ಹಾಗೂ ನಂದಿ ಬೆಟ್ಟದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಕರ್ನಾಟಕ ಸರ್ಕಾರ, ಮುಂದಿನ ಹಂತದಲ್ಲಿ ಉಡುಪಿಯ ಕೊಡಚಾದ್ರಿ ಬೆಟ್ಟ ಹಾಗೂ ಕೊಪ್ಪಳದ ಅಂಜನಾದ್ರಿ ಬೆಟ್ಟದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ತೀರ್ಮಾನಿಸಿದೆ. 

ಈ ಸಂಬಂಧ ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವಾಲಯಕ್ಕೆ ಇತ್ತೀಚೆಗೆ ಪತ್ರ ಬರೆದಿರುವ ರಾಜ್ಯ ಪ್ರವಾಸೋದ್ಯಮ ಇಲಾಖೆ, ‘ಕೊಡಚಾದ್ರಿಯಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಕಾರ್ಯಸಾಧ್ಯತಾ ಅಧ್ಯಯನ ಪೂರ್ಣಗೊಳಿಸಲಾಗಿದೆ. ವಿಸ್ತೃತ ಯೋಜನಾ ವರದಿಗೆ ಸಿದ್ಧತೆ ನಡೆಸಲಾಗಿದೆ. ಅದೇ ರೀತಿ, ಅಂಜನಾದ್ರಿ ಬೆಟ್ಟದಲ್ಲಿ ಯೋಜನೆ ಅನುಷ್ಠಾನಕ್ಕೆ ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗಿದೆ’ ಎಂದು ತಿಳಿಸಿದೆ. ಪರ್ವತಮಾಲಾ ಯೋಜನೆಯಡಿ ರಾಜ್ಯದ 15 ಕಡೆಗಳಲ್ಲಿ ರೋಪ್‌ವೇಗಳ ನಿರ್ಮಾಣಕ್ಕೆ ಸರ್ಕಾರ ಪ್ರಸ್ತಾವ ಸಲ್ಲಿಸಿತ್ತು. ಚಾಮುಂಡಿಬೆಟ್ಟದ ಪ್ರಸ್ತಾವ ಕೈಬಿಟ್ಟಿರುವ ಸರ್ಕಾರ, ಉಳಿದ ನಾಲ್ಕು ಕಡೆಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಈಗ ಹೆಚ್ಚಿನ ಒಲವು ತೋರಿಲ್ಲ. 

ಕಳೆದ ವರ್ಷದ ಕೇಂದ್ರ ಬಜೆಟ್‌ನಲ್ಲಿ ಪರ್ವತಮಾಲಾ ಯೋಜನೆಯನ್ನು ಪ್ರಕಟಿಸಲಾಗಿತ್ತು. ಈ ಯೋಜನೆಯ ಆರಂಭವಾದರೆ ಗುಡ್ಡಗಾಡು ಪ್ರದೇಶಗಳಿಗೆ ಜನರ ಸುಲಲಿತ ಪ್ರಯಾಣಕ್ಕೆ ಅನುಕೂಲವಾಗಲಿದೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಪ್ರತಿಪಾದಿಸಿದ್ದ ಹೆದ್ದಾರಿ ಸಚಿವಾಲಯ, ರೋಪ್‌ವೇ ಯೋಜನೆಗಳಿಗಾಗಿ ಸಾಮಾನ್ಯ ಕಾರ್ಯಾಚರಣೆಯ ವಿಧಾನ ಅಭಿವೃದ್ಧಿಪಡಿಸುವಂತೆ ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. 

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸಚಿವಾಲಯದ ಕಾರ್ಯದರ್ಶಿ ಗಿರಿಧರ್‌ ಅರಮನೆ 2022ರ ಫೆಬ್ರುವರಿಯಲ್ಲಿ ಪತ್ರ ಬರೆದು ಈ ಯೋಜನೆಯ ಪ್ರಸ್ತಾವ ಸಲ್ಲಿಸುವಂತೆ ತಿಳಿಸಿದ್ದರು. ಈ ಯೋಜನೆಗೆ ಅನುಷ್ಠಾನಕ್ಕೆ ನೋಡಲ್‌ ಅಧಿಕಾರಿಗಳ ನೇಮಿಸುವಂತೆಯೂ ಹೇಳಿದ್ದರು. 

ರಾಜ್ಯದ 15 ಕಡೆಗಳಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಿದ್ದು, ಕಾರ್ಯಸಾಧ್ಯತಾ ಅಧ್ಯಯನ ನಡೆಸಲಾಗುತ್ತದೆ ಎಂದು ಕರ್ನಾಟಕದ ಮೂಲಸೌಕರ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್‌) ಅವರು ಹೆದ್ದಾರಿ ಸಚಿವಾಲಯಕ್ಕೆ 2022ರ ಮಾರ್ಚ್‌ನಲ್ಲಿ ಪತ್ರ ಬರೆದಿದ್ದರು. 

ಆಗಸ್ಟ್‌ 2ರಂದು ಸಚಿವಾಲಯಕ್ಕೆ ಮತ್ತೆ ಪತ್ರ ಬರೆದಿದ್ದ ಎಸಿಎಸ್‌, ‘ಪ್ರವಾಸೋದ್ಯಮ ಇಲಾಖೆಯ ಮೂಲಕ ಈ ಯೋಜನೆ ಅನುಷ್ಠಾನ ಮಾಡಲಾಗುತ್ತದೆ. ಕೊಡಚಾದ್ರಿ ಹಾಗೂ ಅಂಜನಾದ್ರಿ ಬೆಟ್ಟದಲ್ಲಿ ರೋಪ್‌ವೇ ನಿರ್ಮಾಣಕ್ಕೆ ಮುನ್ನ ಐಡೆಕ್‌ ಸಂಸ್ಥೆಯು ಕಾರ್ಯಸಾಧ್ಯತಾ ಅಧ್ಯಯನ ನಡೆಸಲಿದೆ. ಬಳಿಕ ಯೋಜನೆ ಅನುಷ್ಠಾನಕ್ಕೆ ನ್ಯಾಷನಲ್‌ ಹೈವೇ ಲಾಜಿಸ್ಟಿಕ್ಸ್‌ ಮ್ಯಾನೇಜ್‌ಮೆಂಟ್‌ ಲಿಮಿಟೆಡ್‌ (ಎನ್‌ಎಚ್ಎಲ್‌ಎಂಎಲ್‌) ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ’ ಎಂದು ತಿಳಿಸಿದ್ದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗೆ ಈ ವರ್ಷದ ಜನವರಿಯಲ್ಲಿ ಪತ್ರ ಬರೆದಿದ್ದ ಎನ್‌ಎಚ್ಎಲ್‌ಎಂಎಲ್‌ನ ಹಿರಿಯ ವ್ಯವಸ್ಥಾಪಕರು, ‘ರೋಪ್‌ವೇಗಳ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸಂಸ್ಥೆಯ ಅಗತ್ಯ ನೆರವು ನೀಡಲಿದೆ. ಹೆಚ್ಚಿನ ಆದ್ಯತೆಯ ಎರಡು ಯೋಜನೆಗಳನ್ನು ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಅವುಗಳ ಪಟ್ಟಿ ನೀಡಬೇಕು’ ಎಂದು ವಿನಂತಿಸಿದ್ದರು. ಜತೆಗೆ, ಯೋಜನೆ ಅನುಷ್ಠಾನಕ್ಕೆ ಸಂಸ್ಥೆ ಹಾಗೂ ಪ್ರವಾಸೋದ್ಯಮ ಇಲಾಖೆ ಫೆಬ್ರುವರಿಯಲ್ಲಿ ಕರಡು ಒಪ್ಪಂದ ಮಾಡಿಕೊಂಡಿದ್ದವು. ಇದರ ಬೆನ್ನಲ್ಲೇ, ಪ್ರವಾಸೋದ್ಯಮ ಇಲಾಖೆಯು ಆದ್ಯತೆಯ ಯೋಜನೆಗಳ ಪಟ್ಟಿಯನ್ನು ಸಚಿವಾಲಯಕ್ಕೆ ಕಳುಹಿಸಿ ಕೊಟ್ಟಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT