ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೊಬೊಟಿಕ್ಸ್‌ ತರಬೇತಿ ಯೋಜನೆ ವಿಫಲ: ₹74 ಕೋಟಿ ವ್ಯರ್ಥ

Last Updated 25 ಅಕ್ಟೋಬರ್ 2022, 21:00 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಐಐಐಟಿ ಜತೆ ಸೇರಿ ಸ್ಥಾಪಿಸಿದ ಶ್ರೇಷ್ಠತಾ ಕೇಂದ್ರವು (ಸಿಒಇ) ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್‌ ವಿಷಯದಲ್ಲಿ ಪ್ರತಿ ವರ್ಷ 1,000ಪದವಿಪೂರ್ವ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಉದ್ಯೋಗಕ್ಕೆ ಅಣಿಗೊಳಿಸುವ ಮಹತ್ವದ ಉದ್ದೇಶವೇನೊ ಹೊಂದಿತ್ತು. ಆದರೆ ಈಡೇರಿಸುವಲ್ಲಿ ಮಾತ್ರ ಯಶಸ್ಸು ಸಾಧಿಸಿಲ್ಲ.

ಅಲ್ಲದೆ, ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಎಸ್‌ಎಂಇಗಳಿಗೆ (ಸಣ್ಣ ಮತ್ತು ಮಧ್ಯಮ ಉದ್ಯಮಗಳು) ತರಬೇತಿ ಪಡೆದ ಸಿಬ್ಬಂದಿ ಪೂರೈಸದ ಕಾರಣ ಶ್ರೇಷ್ಠತಾ ಕೇಂದ್ರದ ಮೂಲಕ ಕೌಶಲೀಕರಣಕ್ಕಾಗಿ ಮಾಡಿರುವ ₹74.04 ಕೋಟಿ ವೆಚ್ಚ ವ್ಯರ್ಥವಾಗಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ (ಸಿಎಜಿ)ವರದಿ ಹೇಳಿದೆ.

ವರದಿಯ ಪ್ರಕಾರ,2018–19, 2019–20 ರ ಅವಧಿಯಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿಲ್ಲ ಮತ್ತು ಆ ಕುರಿತ ಯಾವುದೇ ಮಾಹಿತಿಯನ್ನು ಸಿಎಜಿಗೆ ನೀಡಿಲ್ಲ. 2018 ರ ಫೆಬ್ರುವರಿಯಲ್ಲಿ ಬೆಂಗಳೂರಿನ ಐಐಐಟಿ ಸಹಯೋಗದಲ್ಲಿ ₹34.35 ಕೋಟಿ ವೆಚ್ಚದಲ್ಲಿ ಶ್ರೇಷ್ಠತಾ ಕೇಂದ್ರ ಸ್ಥಾಪಿಸಲು ಅನುಮೋದನೆ ನೀಡಲಾಗಿತ್ತು. ಆದರೆ, ಒಪ್ಪಂದಕ್ಕೆ ಸುಮಾರು 18 ತಿಂಗಳಷ್ಟು ತಡವಾಗಿ ಸಹಿ ಮಾಡಲಾಯಿತು.

ರಾಜ್ಯದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್‌ ಕ್ಷೇತ್ರಗಳಲ್ಲಿ ವಿಶ್ವ ದರ್ಜೆಯ ಸಂಶೋಧನಾ ಸಾಮರ್ಥ್ಯವನ್ನು ಸ್ಥಾಪಿಸುವುದುಶ್ರೇಷ್ಠತಾ ಕೇಂದ್ರದ ಪ್ರಾಥಮಿಕ ಕರ್ತವ್ಯ. ಐಐಐಟಿಯ ಮೆಷಿನ್‌ ಇಂಟೆಲಿಜೆನ್ಸ್‌ ರೊಬೊಟಿಕ್ಸ್‌ ಸಂಶೋಧನೆ ಸಂಸ್ಥೆ ನೆರವಿನಿಂದ ಒಟ್ಟು 92 ಸಂಶೋಧನಾ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ. 624 ಫಲಾನುಭವಿಗಳು ಜ್ಞಾನ ಪ್ರಸರಣ ಕಾರ್ಯಕ್ರಮಗಳಿಂದ ಪ್ರಯೋಜನ ಪಡೆದಿದ್ದಾರೆ ಎಂದು ಸಿಎಜಿ ಹೇಳಿದೆ.

ತಿಂಗಳಿಗೊಮ್ಮೆ ಎಲ್ಲ ಶ್ರೇಷ್ಠತಾ ಕೇಂದ್ರಗಳ ಮೇಲ್ವಿಚಾರಣೆ ನಡೆಸಬೇಕು ಎಂದು ಐಟಿ–ಬಿಟಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರು ಕರ್ನಾಟಕ ನಾವಿನ್ಯ ಮತ್ತು ತಂತ್ರಜ್ಞಾನ ಸೊಸೈಟಿಗೆ (ಕಿಟ್ಸ್‌) ನಿರ್ದೇಶನ ನೀಡಿದ್ದರೂ, ಮೇಲ್ವಿಚಾರಣೆ ನಡೆಸಲಿಲ್ಲ. ಇದರಿಂದ ಇಲಾಖೆಯು ಕೌಶಲೀಕರಣದಅನುಷ್ಠಾನವನ್ನು ನಿರ್ಲಕ್ಷಿಸಿದೆ ಮತ್ತು ಉದ್ದೇಶವನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಸಿಎಜಿ
ಅಭಿಪ್ರಾಯಪಟ್ಟಿದೆ.

ಸರ್ಕಾರದ ಉತ್ತರವೇನು?

‘ಎಂಎಸ್‌ಎಂಇ ವಲಯದ ಅಗತ್ಯವನ್ನು ಪೂರೈಸಲು ಶ್ರೇಷ್ಠತಾ ಕೇಂದ್ರಗಳನ್ನು ಕ್ರಿಯಾತ್ಮಕಗೊಳಿಸಿಲ್ಲ ಎಂಬ ವಾದ ಸರಿಯಲ್ಲ. ಎಂಎಸ್ಎಂಇ ವಲಯದ ಅಗತ್ಯವನ್ನು ಪೂರೈಸಲು ಶ್ರೇಷ್ಠತಾ ಕೇಂದ್ರಗಳನ್ನು ಕ್ರಿಯಾತ್ಮಕಗೊಳಿಸಲಾಗಿದೆ. ಹೀಗಾಗಿ ಕೌಶಲೀಕರಣಕ್ಕೆ ಮಾಡಿದ ₹74.04 ಕೋಟಿ ವೆಚ್ಚ ವ್ಯರ್ಥವಾಗಿಲ್ಲ,
ಡ್ಯಾಶ್‌ ಬೋರ್ಡ್‌ ಅಭಿವೃದ್ಧಿಪಡಿಸುತ್ತಿದ್ದು, ಶ್ರೇಷ್ಠತಾ ಕೇಂದ್ರಗಳನ್ನು ನಿಯಮಿತವಾಗಿ ಮೇಲ್ವಿಚಾರಣೆಗೆ ಒಳಪಡಿಸಲಾಗುತ್ತಿದೆ’ ಎಂದು ಐಟಿ–ಬಿಟಿ ಇಲಾಖೆ ಸಿಎಜಿಗೆ ಉತ್ತರ ನೀಡಿದೆ.

ಉತ್ತರದ ಬಗ್ಗೆ ತೃಪ್ತಿ ವ್ಯಕ್ತಪಡಿಸದ ಸಿಎಜಿ, ‘ಶ್ರೇಷ್ಠತಾ ಕೇಂದ್ರಗಳು ವೃತ್ತಿಪರರು, ಉದ್ಯೋಗ ಸಿದ್ಧ ವಿದ್ಯಾರ್ಥಿಗಳನ್ನು ಉದಯೋನ್ಮುಖ ತಂತ್ರಜ್ಞಾನಗಳಿಗೆ ಒದಗಿಸಲಿದೆ ಎಂದು ಹೇಳಿತ್ತು. ಆ ನಿರೀಕ್ಷೆ ಹುಸಿಯಾಗಿದೆ. ಡ್ಯಾಶ್‌ಬೋರ್ಡ್‌ ಅನ್ನು ಇನ್ನಷ್ಟೇ ಅಭಿವೃದ್ಧಿಪಡಿಸಬೇಕಿದೆ’ ಎಂದು ಹೇಳಿದೆ.

‘ವೆಬಿನಾರ್‌ಗಳು, ಕಾರ್ಯಾಗಾರಗಳು, ಒರಿಯೆಂಟೇಷನ್‌, ಪ್ರಾಥಮಿಕ ಹಂತ ಕೋರ್ಸ್‌ಗಳಂತಹ ಒಂದು ದಿನದ ಅಥವಾ ಅಲ್ಪಾವಧಿಯ ತರಬೇತಿಗಳಿಂದ ಉದ್ದೇಶ ಈಡೇರುವುದಿಲ್ಲ’ ಎಂದೂ ಅಭಿಪ್ರಾಯ ವ್ಯಕ್ತಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT