ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಸ್‌ಎನ್ಎಲ್‌ಗೆ ಸರ್ಕಾರದ ಬಾಕಿ ₹36.29 ಕೋಟಿ!

ಹಣ ಪಾವತಿಗೆ ಸೂಚಿಸುವಂತೆ ಸಿಎಸ್‌ಗೆ ಪತ್ರ ಬರೆದ ಬಿಎಸ್‌ಎನ್‌ಎಲ್‌ ಸಿಜಿಎಂ
Published 6 ಜನವರಿ 2024, 0:30 IST
Last Updated 6 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಬಿಎಸ್‌ಎನ್‌ಎಲ್‌ಗೆ ಒಟ್ಟು ₹ 36.29 ಕೋಟಿ ಮೊತ್ತದ ಬಿಲ್‌ ಪಾವತಿಗೆ ಬಾಕಿ ಉಳಿಸಿಕೊಂಡಿದೆ.

ಈ ಪೈಕಿ, ₹ 21.74 ಕೋಟಿ 2023ರ ಮಾರ್ಚ್‌ವರೆಗಿನ ಬಾಕಿ. ₹ 14.55 ಕೋಟಿ ಪ್ರಸಕ್ತ ಸಾಲಿನ ಏಪ್ರಿಲ್‌ನಿಂದ ಅಕ್ಟೋಬರ್ ಅಂತ್ಯದವರೆಗಿನ ಅವಧಿಯ ಮೊತ್ತ.

ಬಾಕಿ ಬಿಲ್‌ ಪಾವತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಡಿ.‌ 26ರಂದು ಪತ್ರ ಬರೆದಿರುವ ಬಿಎಸ್‌ಎನ್‌ಎಲ್‌ ಕರ್ನಾಟಕ ವೃತ್ತದ ಮುಖ್ಯ ಪ್ರಧಾನ ವ್ಯವಸ್ಥಾಪಕ (ಸಿಜಿಎಂ) ಜಿ.ಆರ್‌. ರವಿ, ‘ಬಾಕಿ ಉಳಿಸಿಕೊಂಡಿರುವ ಬಿಲ್‌ಗಳನ್ನು ಆದ್ಯತೆಯ ಮೇಲೆ ಪರಿಗಣಿಸಿ, ಹಣ ಪಾವತಿಸುವಂತೆ ಎಲ್ಲ ಇಲಾಖೆ, ಸಂಸ್ಥೆ, ನಿಗಮ– ಮಂಡಳಿಗಳಿಗೆ ನಿರ್ದೇಶನ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.

ರಾಜ್ಯದಾದ್ಯಂತ ಸರ್ಕಾರದ ವಿವಿಧ ಇಲಾಖೆಗಳು ಬಿಎಸ್‌ಎನ್‌ಎಲ್‌ನಿಂದ ಸ್ಥಿರ ದೂರವಾಣಿ, ಬ್ರಾಂಡ್‌ ಬ್ಯಾಂಡ್‌, ಅಂತರ್ಜಾಲ ಸಂಪರ್ಕ ಕಲ್ಪಿಸುವ ಎಫ್‌ಟಿಟಿಎಚ್‌ (ಫೈಬರ್‌ ಟು ದಿ ಹೋಂ), ವಿಪಿಎನ್‌ (ವರ್ಚುವಲ್‌ ಪ್ರೈವೇಟ್‌ ನೆಟ್‌ವರ್ಕ್) ಮತ್ತು ಮೊಬೈಲ್‌ ಸಂಪರ್ಕ ಸೇವೆಯನ್ನು ಪಡೆಯುತ್ತಿವೆ.

‘ಡಿಜಿಟಲ್‌ ಇಂಡಿಯಾ’‌ ಯೋಜನೆಯಡಿ ಜನರಿಗೆ ಸೇವೆಗಳು ಮತ್ತು ಆನ್‌ಲೈನ್‌ ದೂರುಗಳನ್ನು ಸಲ್ಲಿಸಲು ಗ್ರಾಮ ಪಂಚಾಯಿತಿಗಳಲ್ಲಿ ಎಫ್‌ಟಿಟಿಎಚ್‌ ಮೂಲಕ ಇಂಟರ್‌ನೆಟ್‌ ಸಂಪರ್ಕ ಕಲ್ಪಿಸಲಾಗಿದೆ. ನಾಡಕಚೇರಿ, ಕೆ–ಸ್ವಾನ್ (ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆ), ಪೊಲೀಸ್‌ ಇಲಾಖೆಯಲ್ಲಿ ಸಿಸಿಟಿಎನ್‌ಎಸ್‌ (ಅಪರಾಧ ಮತ್ತು ಅಪರಾಧಿಯ ಜಾಡಿನ ಮೇಲೆ ಕಣ್ಣಿಡುವ ವ್ಯವಸ್ಥೆ) ಯೋಜನೆಗಳು ಬ್ರಾಂಡ್‌ ಬ್ಯಾಂಡ್‌ ಆಧಾರಿತ ವಿಪಿಎನ್‌ ಸೇವೆ ಮತ್ತು ಎಫ್‌ಟಿಟಿಎಚ್‌ ಸಂಪರ್ಕವನ್ನು ಅವಲಂಬಿಸಿದೆ.

‘ನಿರಂತರವಾಗಿ ಬಿಲ್‌ ಪಾವತಿ ಆಗದಿದ್ದರೂ, ಸರ್ಕಾರದ ವಿವಿಧ ಯೋಜನೆಗಳಿಗೆ ಡಿಜಿಟಲ್‌ ಸಂಪರ್ಕದ ಅಗತ್ಯ ಮತ್ತು ಅನಿವಾರ್ಯ ಮನಗಂಡು ತಡೆರಹಿತವಾಗಿ ಸೇವೆಯನ್ನು ನೀಡುತ್ತಲೇ ಬರಲಾಗಿದೆ. ಆದರೆ, ಬಿಲ್‌ ಪಾವತಿಗೆ ಉಳಿದಿರುವುದರಿಂದ ಗುಣಮಟ್ಟದ ಸೇವೆಯನ್ನು ನೀಡಲು ತುಂಬಾ ಕಷ್ಟವಾಗುತ್ತಿದೆ. ಕೆಲವು ಇಲಾಖೆಗಳು ದೊಡ್ಡ ಮೊತ್ತದ ಬಿಲ್‌ ಪಾವತಿಗೆ ಉಳಿಸಿಕೊಂಡಿವೆ. ಹಳೆ ಬಾಕಿ ಬಿಲ್‌ಗಳನ್ನು ತಕ್ಷಣ ಪಾವತಿಸಬೇಕು’ ಎಂದು ರವಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT