ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜಿ ವಜಾಗೊಳಿಸಿದ ‘ಸುಪ್ರೀಂ’

ಆರ್‌ಎಸ್‌ಎಸ್‌ ಸ್ವಯಂ ಸೇವಕ ರುದ್ರೇಶ್ ಹತ್ಯೆ ಪ್ರಕರಣ
Last Updated 1 ಜುಲೈ 2019, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣದಿಂದ ನನ್ನನ್ನು ಕೈಬಿಡಬೇಕು’ ಎಂದು ಕೋರಿದ್ದ ಆರೋಪಿ ಅಸೀಂ ಶರೀಫ್ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿದೆ.

ಈ ಕುರಿತ ವಿಶೇಷ ಮೇಲ್ಮನವಿಯನ್ನು ನ್ಯಾಯಮೂರ್ತಿ ಎ.ಎಂ.ಖನ್ವಿಲ್ಕರ್‌ ಹಾಗೂ ನ್ಯಾಯಮೂರ್ತಿ ಅಜಯ್‌ ರಸ್ತೋಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿ, ‘ಅಧೀನ ನ್ಯಾಯಾಲಯಗಳ ಆದೇಶದಲ್ಲಿ ಯಾವುದೇ ತಪ್ಪಿಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

‘ಪ್ರಕರಣದಿಂದ ಕೈಬಿಡುವಂತೆ ಕೋರಿದ್ದ ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಅಸೀಂ ಶರೀಫ್‌ ಮನವಿಯನ್ನು ಎನ್‌ಐಎ ವಿಶೇಷ ನ್ಯಾಯಾಲಯ ಮತ್ತು ಹೈಕೋರ್ಟ್ ತಿರಸ್ಕರಿಸಿತ್ತು. ಈಗ ಈ ಆದೇಶವನ್ನು ಸುಪ್ರೀಂ ಕೋರ್ಟ್‌ ಕೂಡಾ ಎತ್ತಿ ಹಿಡಿದಿದೆ.

ಪ್ರತಿಕ್ರಿಯೆ: ‘ಸುಪ್ರಿಂ ಕೋರ್ಟ್‌ ನೀಡಿರುವ ಈ ತೀರ್ಪಿನಿಂದಾಗಿ ಅರೋಪಿಗಳ ವಿಚಾರಣೆಗೆ ಇದ್ದ ಅಡೆತಡೆ ನಿವಾರಣೆಯಾದಂತಾಗಿದೆ’ ಎಂದು ಎನ್‌ಐಎ ಪರ ವಕೀಲ ಪಿ.ಪ್ರಸನ್ನ ಕುಮಾರ್‌ ಪ್ರತಿಕ್ರಿಯಿಸಿದ್ದಾರೆ.

ಪ್ರಕರಣವೇನು?: ಶಿವಾಜಿ ನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿನ ಶ್ರೀನಿವಾಸ ಮೆಡಿಕಲ್‌ ಸ್ಟೋರ್ ಎದುರು ತನ್ನ ಸ್ನೇಹಿತರ ಜತೆ ಗಣವೇಷಧಾರಿಯಾಗಿ ನಿಂತಿದ್ದ ರುದ್ರೇಶ್‌ ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರು ಆಸಾಮಿಗಳು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಘಟನೆ 2016ರ ಅಕ್ಟೋಬರ್ 16ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಡೆದಿತ್ತು. ಅಂದು ಆ ಪ್ರದೇಶದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ಇತ್ತು.

ಪ್ರಕರಣದ ಆರೋಪಿಯಾಗಿರುವ ಅಸೀಂ ಶರೀಫ್‌ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಪ್ರಕರಣದಲ್ಲಿ, ಅಸೀಮ್‌ ಶರೀಫ್, ಇರ್ಫಾನ್ ಪಾಷಾ, ವಸೀಂ ಅಹಮದ್, ಮಹಮ್ಮದ್‌ ಸಾದಿಕ್‌ ಅಲಿಯಾಸ್ ಮಜಹರ್ ಮತ್ತು ಮಹಮ್ಮದ್ ಮುಬೀಬುಲ್ಲಾ ಅಲಿಯಾಸ್ ಮೌಲಾ ಆರೋಪಿಗಳಾಗಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT