‘ಯುದ್ಧಯು ಐಪಿಎಲ್ ಪಂದ್ಯವೇ?’
‘ಆಪರೇಷನ್ ಸಿಂಧೂರ’ದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಚರ್ಚೆ ನಡೆದಿತ್ತು. ‘ನಾವು ಪಾಕಿಸ್ತಾನವನ್ನು ನಾಶ ಮಾಡಿಬಿಡಬೇಕಿತ್ತು’ ಎಂದೆಲ್ಲಾ ವೀರಾವೇಶದ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಯಿತು. ಇಂಥ ಪೋಸ್ಟ್‌ಗಳನ್ನು ಹಂಚಿಕೊಂಡ ಯಾರಿಗೂ ಯುದ್ಧ ಎಂದರೇನು ಎನ್ನುವುದೇ ತಿಳಿದಿಲ್ಲ. ಯುದ್ಧದ ಪರಿಣಾಮಗಳ ಬಗ್ಗೆಯೂ ಅರಿವಿಲ್ಲ’ ಎಂದು ಫ್ಲೈಟ್ ಲೆಫ್ಟಿನೆಂಟ್ ಪೂರ್ಣಿಮಾ ಮಾಳಗಿಮನಿ ಬೇಸರ ವ್ಯಕ್ತಪಡಿಸಿದರು. ‘ಭಾರತದ ಗೆದ್ದುಬಿಟ್ಟಿತು ಎಂದು ಪೋಸ್ಟ್ ಹಂಚಿಕೊಳ್ಳುತ್ತಾರೆ. ಯುದ್ಧ ಎನ್ನುವುದು ಐಪಿಎಲ್ ಪಂದ್ಯವೇ? ಜನರು ಮನೆ ಕಳೆದುಕೊಳ್ಳುತ್ತಾರೆ. ಮಕ್ಕಳು ಅನಾಥರಾಗುತ್ತಾರೆ. ಯುದ್ಧದಲ್ಲಿ ಭಾಗವಹಿಸಿದವರೇ ಯುದ್ಧದ ಭೀಕರತೆಯ ಬಗ್ಗೆ ತಮ್ಮ ಅನುಭವಗಳನ್ನು ಬರೆಯುವಂತಾಗಬೇಕು. ಆ ಮೂಲಕ ಜನರಿಗೆ ಯುದ್ಧದ ಪರಿಣಾಮಗಳ ಬಗ್ಗೆ ಮಾಹಿತಿ ನೀಡಬೇಕು. ಏಕೆ ಯುದ್ಧವಾಗಬಾರದು ಎನ್ನುವುದನ್ನು ತಿಳಿಸಿಕೊಡಬೇಕು. ಸಾಹಿತ್ಯಕ್ಕೆ ಇಂಥದ್ದೊಂದು ಶಕ್ತಿ ಇದೆ’ ಎಂದರು.