ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ತರಬೇತುದಾರರ ಸೇವೆ ಕಾಯಂಗೆ ಹಿಂದೇಟು

ಪರಿಷತ್‌ನಲ್ಲಿ ಪಕ್ಷಭೇಧ ಮರೆತು ಆಕ್ರೋಶ
Last Updated 13 ಫೆಬ್ರುವರಿ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕ್ರೀಡಾ ಪ್ರಾಧಿಕಾರದ ಕ್ರೀಡಾ ತರಬೇತುದಾರರ ಸೇವೆಯನ್ನು ಕಾಯಂಗೊಳಿಸುವ ಪ್ರಸ್ತಾಪ ಜಾರಿಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್‌ ನೀಡಿದ ಹೇಳಿಕೆಗೆ ವಿಧಾನ ಪರಿಷತ್ತಿನಲ್ಲಿ ಸದಸ್ಯರು ಪಕ್ಷಭೇದ ಮರೆತು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಎಸ್‌.ವಿ.ಸಂಕನೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಕ್ರೀಡಾ ಪ್ರಾಧಿಕಾರವು 1996ರಲ್ಲಿ ತರಬೇತುದಾರರಿಗೆ ವೇತನ ಶ್ರೇಣಿ ನಿಗದಿಪಡಿಸಿದಾಗ ಸರ್ಕಾರದಿಂದ ಅನುಮೋದನೆ ಪಡೆದಿರಲಿಲ್ಲ. ಹಾಗಾಗಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತರಬೇತುದಾರರ ಸೇವೆಯನ್ನು ಕ್ರಮಬದ್ಧಗೊಳಿಸಿದ್ದು ಸರ್ಕಾರದ ನೀತಿಗೆ ಅನುಗುಣವಾಗಿಲ್ಲ’ ಎಂದು ತಿಳಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಕನೂರ, ‘ತರಬೇತುದಾರರ ಸೇವೆಯನ್ನು ಕ್ರಬದ್ಧಗೊಳಿಸುವುದಾಗಿ ಈ ಹಿಂದಿನ ಕ್ರೀಡಾ ಸಚಿವರು ಈ ಸದನದಲ್ಲಿ ಭರವಸೆ ನೀಡಿದ್ದರು. ಈ ಸಂಬಂಧ ಪ್ರಾಧಿಕಾರದ ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರುವುದಾಗಿಯೂ ಹೇಳಿದ್ದರು. ಈಗ ಅಧಿಕಾರಿಗಳು ನಿಮ್ಮ ದಾರಿ ತಪ್ಪಿಸಿ ಈ ರಿತಿ ಹೇಳಿಕೆ ಕೊಡಿಸಿದ್ದಾರೆ’ ಎಂದರು.

ಬಿಜೆಪಿಯ ಅರುಣ್‌ ಶಹಾಪುರ್‌, ‘ಈ ವಿಚಾರ ಭರವಸೆಗಳ ಸಮಿತಿಯಲ್ಲೂ ಚರ್ಚೆಯಾಗಿದೆ. ಪ್ರಾಧಿಕಾರದಲ್ಲಿ ನಿಯೋಜನೆ ಮೇರೆಗೆ ಇರುವ ಅಧಿಕಾರಿಯೊಬ್ಬರಿಂದಾಗಿ ಈ ರೀತಿ ಆಗುತ್ತಿದೆ. ವೃಂದ ಮತ್ತು ನೇಮಕಾತಿ ನಿಯಮಕ್ಕೆ ಹಣಕಾಸು ಇಲಾಖೆಯಿಂದ ಅನುಮೋದ ಸಿಗಬಾರದು ಎಂಬ ಉದ್ದೇಶದಿಂದಲೇ ಪ್ರಾಧಿಕಾರವು ಅಗತ್ಯಕ್ಕಿಂತ ಹೆಚ್ಚು ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವವನ್ನು ನಿಯಮದ ಕರಡಿನಲ್ಲಿ ಸೇರಿಸಿದೆ’ ಎಂದು ಆರೋಪಿಸಿದರು.

‘ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಯ ಕರಡನ್ನು ಈಗಾಗಲೇ ಆರ್ಥಿಕ ಇಲಾಖೆ, ಕಾನೂನು ಇಲಾಖೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗಳಿಗೆ ಕಳುಹಿಸಿದ್ದೇವೆ. ತರಬೇತುದಾರರ ಸೇವೆಯನ್ನು ಕಾಯಂಗೊಳಿಸುವ ಬಗ್ಗೆ ಸದಸ್ಯರ ಜೊತೆ ಸಮಗ್ರವಾಗಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದು ರಹೀಂ ಖಾನ್‌ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT