ಬೆಂಗಳೂರು: ಗಂಧದ ಮರ ಕಳವು ಮಾಡಿದ್ದ ಆರೋಪದಡಿ ಬಡಗಿಯೊಬ್ಬರಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ 5 ವರ್ಷಗಳ ಜೈಲು ಶಿಕ್ಷೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್, ₹1 ಲಕ್ಷ ದಂಡ ವಿಧಿಸಿದೆ.

ವಿಚಾರಣಾ ನ್ಯಾಯಾಲಯ ವಿಧಿಸಿದ್ಧ ದಂಡದ ಪ್ರಮಾಣ ಹೆಚ್ಚಿಸುವಂತೆ ಕೋರಿ ರಾಜ್ಯ ಸರ್ಕಾರ ಮತ್ತು ಶಿಕ್ಷೆ ರದ್ದು ಕೋರಿ ಮಂಡ್ಯ ಜಿಲ್ಲೆ ಬಳ್ಳೇನಹಳ್ಳಿಯ ಆರೋಪಿ ದೇವರಾಜಾಚಾರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ ಅವರಿದ್ದ ಏಕಸದಸ್ಯ ನ್ಯಾಯಪೀಠ ಸರ್ಕಾರದ ಮೇಲ್ಮನವಿ ಎತ್ತಿಹಿಡಿದಿದೆ. ಅಂತೆಯೇ, ಆರೋಪಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿ ಆದೇಶಿಸಿದೆ.

'ಗಂಧದ ಮರ ಕಳವು ಆರೋಪ ಹಾಗೂ ಅದನ್ನು ಅಕ್ರಮವಾಗಿ ಸಂಗ್ರಹಿಸುವ ಸಂಬಂಧ ಮೊದಲ ಬಾರಿ ಆರೋಪ ಸಾಬೀತಾದಲ್ಲಿ 5 ವರ್ಷಗಳಿಗಿಂತಲೂ ಕಡಿಮೆ ಅವಧಿಯ ಶಿಕ್ಷೆ ಇರಬಾರದು ಮತ್ತು ₹50 ಸಾವಿರಕ್ಕಿಂತಲೂ ಕಡಿಮೆ ದಂಡ ಇರಬಾರದು ಎಂದು ಅರಣ್ಯ ಸಂರಕ್ಷಣಾ ಕಾಯ್ದೆ-1963ರ ಕಲಂ 86 ಮತ್ತು 87ರಲ್ಲಿ ತಿಳಿಸಲಾಗಿದೆ. ಆದರೆ, ವಿಚಾರಣಾ ನ್ಯಾಯಾಲಯ ಈ ಪ್ರಕರಣದಲ್ಲಿ ಕಲಂ 86ರ ಅನ್ವಯ 5 ವರ್ಷಗಳ ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿದೆ. ಆದರೆ, ಕಲಂ 87ರಲ್ಲಿ ತಿಳಿಸಿರುವಂತೆ ಯಾವುದೇ ದಂಡ ವಿಧಿಸಿಲ್ಲ. ಆದ್ದರಿಂದ, ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಕಾಯಂಗೊಳಿಸಲಾಗುತ್ತಿದ್ದು, ದಂಡದ ಮೊತ್ತವನ್ನು ಹೆಚ್ಚಳ ಮಾಡಲಾಗುತ್ತಿದೆ' ಎಂದು ಆದೇಶದಲ್ಲಿ ವಿವರಿಸಿದೆ.

ರಾಜ್ಯ ಪ್ರಾಸಿಕ್ಯೂಷನ್ ಪರ ಹೈಕೋರ್ಟ್ ವಕೀಲ ರಂಗಸ್ವಾಮಿ ಆರ್. ದೊಡ್ಡಮೋಳೆ ಮಂಡಿಸಿದ್ದ ವಾದ ಮನ್ನಿಸಿದ ನ್ಯಾಯಪೀಠ, ಅರಣ್ಯ ಸಂರಕ್ಷಣಾ ಕಾಯ್ದೆಯ ಕಲಂ 86 ಮತ್ತು 87ರ ಅಡಿಯಲ್ಲಿನ ಶಿಕ್ಷೆಯನ್ನು ಎತ್ತಿಹಿಡಿದಿದೆ. ಎರಡೂ ಆರೋಪಗಳಿಗೆ ತಲಾ ₹50 ಸಾವಿರದಂತೆ ₹1 ಲಕ್ಷ ಮೊತ್ತದ ದಂಡ ವಿಧಿಸಿದೆ.

ಪ್ರಕರಣವೇನು?: ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನಲ್ಲಿ (ಆರ್ಪಿಎಫ್) ಕರ್ತವ್ಯ ನಿರ್ವಹಿಸುತ್ತಿದ್ದ ಸಿ.ಎಲ್. ಜಾನ್ 2006ರ ಮೇ 28ರ ರಾತ್ರಿ ಎಂದಿನಂತೆ ಗಸ್ತು ತಿರುಗುತ್ತಿದ್ದರು. ಬೆಳಗಿನ ಜಾವ 4.30ರ ಸಂದರ್ಭದಲ್ಲಿ ಮೈಸೂರಿನ ರೈಲ್ವೆ ಆಸ್ಪತ್ರೆಯ ಬಳಿ ಕೆಲವರು ಓಡಾಡುತ್ತಿರುವುದು ಅವರ ಗಮನಕ್ಕೆ ಬಂದಿತ್ತು. ಅವರನ್ನು ಬೆನ್ನಟ್ಟಿದ್ದ ಜಾನ್, ಒಬ್ಬರನ್ನು ಹಿಡಿದು ಸ್ಥಳೀಯ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅಲ್ಲಿ ಶ್ರೀಗಂಧದ ಮರ ಕಡಿದದ್ದು ಮತ್ತು ಅದರ ಕೊಂಬೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದುದು ಕಂಡು ಬಂದಿತ್ತು. ಈ ಸಂಬಂಧ ಮೈಸೂರಿನ ಆಶೋಕಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.

ಈ ಸಂಬಂಧ ಅರಣ್ಯ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ವಿವಿಧ ಕಲಂಗಳ ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿದಾರರನ್ನು ಶಿಕ್ಷೆಗೆ ಗುರಿಪಡಿಸಿ ಉಳಿದ ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆರೋಪಿಗೆ ಅರಣ್ಯ ಕಾಯ್ದೆ ಉಲ್ಲಂಘನೆ ಅಪರಾಧಕ್ಕಾಗಿ ₹5 ವರ್ಷಗಳ ಸಾದಾ ಜೈಲು ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿತ್ತು. ಐಪಿಸಿ ಅಡಿಯಲ್ಲಿ 2 ವರ್ಷಗಳ ಸಾಧಾರಣ ಜೈಲು ಶಿಕ್ಷೆ ಮತ್ತು ₹1 ಸಾವಿರ ಮೊತ್ತದ ದಂಡ ವಿಧಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಆರೋಪಿ ಹೈಕೋರ್ಟ್ಗೆ ಕ್ರಿಮಿನಲ್ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.