ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತ ಕೋರ್ಸ್‌ಗೆ ಹೆಚ್ಚಿದ ಬೇಡಿಕೆ

ಅಧ್ಯಯನಕ್ಕೆ ಒಲವು ತೋರಿದ ವಿದೇಶಿ ವಿದ್ಯಾರ್ಥಿಗಳು
Last Updated 18 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಂಪ್ಯೂಟರ್‌ಗೆ ಸಂಸ್ಕೃತ ಭಾಷೆಯನ್ನು ಅಳವಡಿಸುವ ಕ್ರಮವನ್ನು ಹೇಳಿಕೊಡುವ ಸಂಸ್ಕೃತ ವಿಶ್ವವಿದ್ಯಾಲಯದ ನೂತನ ಡಿಪ್ಲೊಮಾ ಕೋರ್ಸ್‌ಗೆ ವಿದೇಶದ ವಿದ್ಯಾರ್ಥಿಗಳಿಂದಲೂ ಬೇಡಿಕೆ ಬರುತ್ತಿದೆ.

‘ಈಗಾಗಲೇ 30 ವಿದ್ಯಾರ್ಥಿಗಳು ಈ ವಿಭಾಗದಲ್ಲಿ ಡಿಪ್ಲೊಮಾ ಕಲಿಯುತ್ತಿದ್ದಾರೆ. ಇವರಲ್ಲಿ ನಾಲ್ವರು ವಿದೇಶಿಯರೂ ಇದ್ದಾರೆ. ಇನ್ನೂ ಅರ್ಜಿಗಳು ಬರುತ್ತಲೇ ಇವೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಪದ್ಮಾ ಶೇಖರ್‌ ಹೇಳಿದರು. ‘ಬೆಳಿಗ್ಗೆ ಅಥವಾ ಸಂಜೆ ತರಗತಿಗಳನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಆದ್ದರಿಂದ ಎಂಜಿನಿಯರ್‌ಗಳು ಆಸಕ್ತಿ ತೋರಿದ್ದಾರೆ’ ಎಂದು ಮಾಹಿತಿ ನೀಡಿದರು.

ಈ ವರ್ಷದಿಂದ ಸರ್ಟಿಫಿಕೇಟ್‌ ಕೋರ್ಸ್‌ ಕೂಡ ಆರಂಭಿಸಲಾಗಿದೆ. ವಯೋ‌ಮಿತಿ ಇಲ್ಲದೆ ಯಾರು ಬೇಕಾದರೂ ಈ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು. 2010ರಲ್ಲಿಯೇ ಆರಂಭವಾದ ವಿಶ್ವವಿದ್ಯಾಲಯ, ಸೌಲಭ್ಯಗಳ ಕೊರತೆಯಿಂದ ಸಾಕಷ್ಟು ಹಿಂದೆ ಉಳಿದಿತ್ತು. ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಕೆಲವು ಮಹತ್ವದ ಬದಲಾವಣೆಗಳು ಆಗುತ್ತಿವೆ.

‘ವಿಶ್ವವಿದ್ಯಾಲಯಕ್ಕೆ ಯುಜಿಸಿ ನೆರವು ಪಡೆಯಬೇಕಾದರೆ 12ಬಿ ಪ್ರಮಾಣಪತ್ರ ಪಡೆಯಬೇಕು. ಇದಕ್ಕೆ ಐದು ವಿಭಾಗಗಳು ಇರುವುದು ಕಡ್ಡಾಯವಾಗಿತ್ತು. ಈ ವರ್ಷ ಆರಂಭವಾದ ಕೋರ್ಸ್‌ ಸೇರಿ ಈಗ ಆರು ವಿಭಾಗಗಳನ್ನು ಆರಂಭಿಸಲಾಗಿದೆ. ಆದ್ದರಿಂದ ಕೇಂದ್ರದ ನೆರವು ಸಿಗುವ ನಿರೀಕ್ಷೆ ಇದೆ’ ಎಂದು ಕುಲಪತಿ ಮಾಹಿತಿ ನೀಡಿದರು.

‘ಇಷ್ಟು ವರ್ಷ ಸಂಸ್ಕೃತ ಅಂದರೆ ಒಂದು ವರ್ಗಕ್ಕೆ ಸೀಮಿತ ಎನ್ನುವ ಭಾವನೆ ಇತ್ತು. ಈಗ ಹಾಗಿಲ್ಲ. ನಮ್ಮ ವಿಶ್ವವಿದ್ಯಾಲಯದ ಬಹುತೇಕ ವಿಭಾಗಗಳಿಗೆ ಬೇರೆ ವರ್ಗದ ಶಿಕ್ಷಕರನ್ನೂ ನೇಮಕ ಮಾಡಿಕೊಳ್ಳುತ್ತಿದ್ದೇವೆ. ಮೈಸೂರಿನ ಚಾಮರಾಜೇಂದ್ರ ಕಾಲೇಜಿನಲ್ಲಿ 40 ದಲಿತ ವಿದ್ಯಾ
ರ್ಥಿಗಳು ಇದ್ದಾರೆ’ ಎಂದು ಹೇಳಿದರು.

ಚಾಮರಾಜಪೇಟೆಯಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ಆಡಳಿತ ಕಟ್ಟಡವನ್ನು ಬುಧವಾರ ಉದ್ಘಾಟಿಸಲಾಗುತ್ತದೆ. ಇದರಲ್ಲಿ ಒಂದು ಸೆಮಿನಾರ್‌ ಹಾಲ್‌ ಕೂಡ ಇದೆ. ಕೇವಲ ₹1.63 ಕೋಟಿ ವೆಚ್ಚದಲ್ಲಿ ಇದನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ವಸತಿ ನಿಲಯ ನಿರ್ಮಿಸಲೂ ಉದ್ದೇಶಿಸ‌ಲಾಗಿದೆ. ‘ನಮ್ಮ ವಿ.ವಿ ಹಿಂದೆ ಇರುವ ಬಿಸಿಎಂ ವಸತಿ ನಿಲಯದ ಒಳಚರಂಡಿಗೆ ನಮ್ಮ ಆವರಣದೊಳಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಇದು ನಮ್ಮ ಅಭಿವೃದ್ಧಿ ಕೆಲಸಗಳಿಗೆ ತಡೆಯಾಗಿದೆ. ಇದನ್ನು ತೆರವುಗೊಳಿಸಲು ಮನವಿ ಮಾಡಿದ್ದೇವೆ. ಆದರೆ ಆ ಕೆಲಸ ಇನ್ನೂ ಆಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ ಬಂದು ನೆಲೆಸಿ ಸಾವಿರ ವರ್ಷಗಳಾದ ನೆನಪಿಗೆ ವಿ.ವಿ ವತಿಯಿಂದ ಮೇಲುಕೋಟೆಯಲ್ಲಿಯೇ ಗ್ರಂಥಾಲಯ ಕಟ್ಟಲಾಗುತ್ತಿದೆ. ಸಹಸ್ರಮಾನೋತ್ಸವ ಭವನ ಕಟ್ಟಲು ಸರ್ಕಾರಕ್ಕೆ ₹ 4.5 ಕೋಟಿ ನೀಡುವಂತೆ ಮನವಿಯನ್ನೂ ಮಾಡಲಾ
ಗಿದೆ. ಮೈಸೂರಿನಲ್ಲಿ ಶೈವ ಸಂಶೋಧನಾ ಕೇಂದ್ರ ಸ್ಥಾಪನೆಗೆ ಕೂಡ ಹಣ ಬಿಡುಗಡೆ ಮಾಡಲಾಗಿದೆ’ ಎಂದು ಹೇಳಿದರು.

ಪದವಿಯಲ್ಲಿ ಸಂಸ್ಕೃತ ವಿಭಾಗದವರು ಕನ್ನಡ ಮತ್ತು ಇಂಗ್ಲಿಷ್‌ ಭಾಷೆ ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಇದರಿಂದ ಸಂಸ್ಕೃತದ ಉತ್ತಮ ಕೃತಿಗಳನ್ನು ಬೇರೆ ಭಾಷೆಗಳಿಗೆ ಭಾಷಾಂತರ ಮಾಡಲು ಅನುಕೂಲವಾಗಲಿದೆ.

100 ಎಕರೆ ಜಮೀನು ಮಂಜೂರು

ಮೂಲಸೌಕರ್ಯಗಳೊಂದಿಗೆ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಐದು ವರ್ಷದ ಹಿಂದೆ ಸರ್ಕಾರ, ಮಾಗಡಿ ತಾಲ್ಲೂಕಿನ ತಿಪ್ಪಸಂದ್ರ ಗ್ರಾಮದಲ್ಲಿ 100 ಎಕರೆ ಜಮೀನು ಮಂಜೂರು ಮಾಡಿದೆ.

‘ಈ ಸ್ಥಳ ನಗರದಿಂದ 67 ಕಿ.ಮೀ ದೂರದಲ್ಲಿ ಇರುವುದರಿಂದ ವಿ.ವಿಯನ್ನು ಸ್ಥಳಾಂತರಿಸಬೇಕಾದರೆ ಪೂರ್ಣ ಪ್ರಮಾಣದಲ್ಲಿ ಕೆಲಸ ಮುಗಿದ ಮೇಲೆಯೇ ಹೋಗಬೇಕು. ಇಲ್ಲದಿದ್ದರೆ ಪ್ರಯೋಜನವಿಲ್ಲ. ಒಟ್ಟಿಗೇ ಹಣ ಬಿಡುಗಡೆ ಮಾಡಿ ಕೆಲಸ ಮುಗಿಸುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ಹಾಗಾಗಿ, ಸದ್ಯದಲ್ಲಿ ಈಗ ಇರುವ ಕಡೆಯೇ ಕೊಠಡಿಗಳನ್ನು ಕಟ್ಟಲು ಶಂಕುಸ್ಥಾಪನೆ ಮಾಡುತ್ತಿದ್ದೇವೆ’ ಎಂದು ಪದ್ಮಾ ಶೇಖರ್‌ ಹೇಳಿದರು.

31: ಕಾಲೇಜುಗಳು ವಿ.ವಿ ವ್ಯಾಪ್ತಿಯಲ್ಲಿವೆ

556: ಪಾಠಶಾಲೆಗಳಿವೆ

19: ವೇದಪಾಠಶಾಲೆಗಳು

40 ಸಾವಿರ: ವಿದ್ಯಾರ್ಥಿಗಳು ಪ್ರತಿವರ್ಷ ಕಲಿಯುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT