ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್ಸಿಎಸ್ಪಿ/ಟಿಎಸ್ಪಿ ಅನುದಾನ ‘ಗ್ಯಾರಂಟಿ’ಗಳಿಗೆ ವರ್ಗಾವಣೆ; ಬಿಜೆಪಿ ಪ್ರತಿಭಟನೆ

Published : 23 ಫೆಬ್ರುವರಿ 2024, 12:33 IST
Last Updated : 23 ಫೆಬ್ರುವರಿ 2024, 12:33 IST
ಫಾಲೋ ಮಾಡಿ
Comments

ಬೀದರ್‌: ಎಸ್ಸಿಎಸ್ಪಿ ಹಾಗೂ ಟಿಎಸ್ಪಿಯ ₹ 11,144 ಕೋಟಿ ಅನುದಾನವನ್ನು ‘ಗ್ಯಾರಂಟಿ’ ಯೋಜನೆಗಳಿಗೆ ವರ್ಗಾಯಿಸಿರುವುದನ್ನು ವಿರೋಧಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಹಾಕಿದರು. ‘ದಲಿತರ ವಿರೋಧಿ ಸರ್ಕಾರಕ್ಕೆ ದಿಕ್ಕಾರ’ ಎಂದು ಕೂಗಿದರು. ಆನಂತರ ಪ್ರಮುಖ ಮಾರ್ಗಗಳ ಮೂಲಕ ಜಿಲ್ಲಾಧಿಕಾರಿ ಕಚೇರಿ ವರೆಗೆ ರ್‍ಯಾಲಿ ನಡೆಸಿ, ಮನವಿ ಪತ್ರ ಸಲ್ಲಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು ಒಂಬತ್ತು ತಿಂಗಳಾಗಿವೆ. ದಲಿತರ ಬಗೆಗೆ ಮಾತಿನಲ್ಲಿ ಮಾತ್ರ ಕಾಳಜಿ ತೋರಿಸಿ ಆ ಸಮುದಾಯವನ್ನು ವಂಚಿಸುವ ಕೆಲಸ ಮಾಡುತ್ತಿದೆ. ಗ್ಯಾರಂಟಿಗಳ ಜಾರಿಗೆ ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನು ಬಳಸಿಕೊಳ್ಳುತ್ತಿದೆ. ಇವರ ಡೋಂಗಿ ದಲಿತ ಕಾಳಜಿ ಬಯಲಾಗಿದೆ. ದಲಿತರ ಹಿತ ರಕ್ಷಿಸಬೇಕಿದ್ದ ಸಮಾಜ ಕಲ್ಯಾಣ ಸಚಿವ ಎಚ್‌.ಸಿ. ಮಹದೇವಪ್ಪ ಪಕ್ಷದ ಹಿತ ಕಾಪಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರವು ಅಲ್ಪಸಂಖ್ಯಾತರ ಕಲ್ಯಾಣಕ್ಕೆ ₹ 10 ಸಾವಿರ ಕೋಟಿ ಅನುದಾನ ನೀಡಿದೆ. ಅದಕ್ಕೆ ‘ಗ್ಯಾರಂಟಿ’ಗಳು ಅಡ್ಡ ಬಂದಿಲ್ಲ. ಆದರೆ, ದಲಿತರಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿಗೆ ವರ್ಗಾಯಿಸಿದೆ. ದಲಿತರ ಹಿತಾಸಕ್ತಿಗಿಂತ ಓಟ್‌ ಬ್ಯಾಂಕ್‌ ರಾಜಕಾರಣ ಬಹಳ ಮುಖ್ಯವಾಗಿದೆ. ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಮೀಸಲಿಟ್ಟಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ಸಮುದಾಯದ ವಿದ್ಯಾರ್ಥಿಗಳನ್ನು ವಂಚಿಸಲಾಗುತ್ತಿದೆ. ಎಂಟು ತಿಂಗಳಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದವರ ಗೃಹ ನಿರ್ಮಾಣ ಯೋಜನೆ ಸ್ಥಗಿತಗೊಂಡಿದೆ. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ನೂರಾರು ಮನೆಗಳನ್ನು ಹಂಚುತ್ತಿದ್ದರೆ, ರಾಜ್ಯ ಸರ್ಕಾರ ಕೋಮಾ ಸ್ಥಿತಿಗೆ ತಲುಪಿದೆ ಎಂದು ವ್ಯಂಗ್ಯವಾಡಿದರು.

ರೈತ ನಿಧಿ ಯೋಜನೆಯಡಿ ದಲಿತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವು ಸ್ಥಗಿತಗೊಂಡಿದೆ. ಕಿಸಾನ್‌ ಸಮ್ಮಾನ್‌ ಯೋಜನೆಗೆ ಹೆಚ್ಚುವರಿಯಾಗಿ ನೀಡುತ್ತಿದ್ದ ₹ 4 ಸಾವಿರಕ್ಕೆ ಕತ್ತರಿ ಹಾಕಲಾಗಿದೆ. ಎಸ್ಸಿ/ಎಸ್ಟಿ ಜನರಲ್ಲಿ ಉದ್ಯಮಶೀಲತೆ ಹೆಚ್ಚಿಸುವ ಯೋಜನೆಗೆ ಪ್ರೋತ್ಸಾಹ ನೀಡುತ್ತಿಲ್ಲ. ದಲಿತ ಉದ್ಯಮಿದಾರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜ್ಯದಲ್ಲಿ ಸಂವಿಧಾನ ಜಾಥಾ ಮಾಡುತ್ತಿರುವ ರಾಜ್ಯ ಸರ್ಕಾರ ಅದರ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ದಲಿತರ ಪಾಲಿನ ಅನುದಾನ ಕಡಿತ ಮಾಡಿ ಅವರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಸಂವಿಧಾನ ಬದ್ಧತೆ ಪ್ರಚಾರಕ್ಕೆ ಸೀಮಿತವಾಗಿದ್ದು, ಆಚರಣೆಯಲ್ಲಿ ಶೂನ್ಯವಾಗಿದೆ. ಸರ್ಕಾರದ ದಲಿತ ವಿರೋಧಿ ನೀತಿ ಖಂಡನಾರ್ಹವಾದುದು ಎಂದು ತಿಳಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಪ್ರಮುಖರಾದ ಕಿರಣ ಪಾಟೀಲ ಹಕ್ಯಾಳ, ಮಹೇಶ ಪಾಲಂ, ಬಾಬುವಾಲಿ, ಸುಭಾಷ ಮಡಿವಾಳ, ರಾಜೇಂದ್ರ ಬಿ. ಪೂಜಾರಿ, ಬಾಬುರಾವ, ಪ್ರಭುಶೆಟ್ಟಿ, ಗುಂಡಪ್ಪ ಮೇತ್ರೆ ಮೊದಲಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT