ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರುವೆ: ವೈಎಸ್‌ವಿ ದತ್ತ

Published : 14 ಡಿಸೆಂಬರ್ 2022, 10:35 IST
ಫಾಲೋ ಮಾಡಿ
Comments

ಚಿಕ್ಕಮಗಳೂರು: ‘ಕಾಂಗ್ರೆಸ್‌ ಸೇರುವುದು ಖಚಿತ, ಯಾವತ್ತು ಎಂಬುದು ಇನ್ನು ನಿಗದಿಯಾಗಿಲ್ಲ’ ಎಂದು ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತ ಸ್ಪಷ್ಟಪಡಿಸಿದರು.


ಬುಧವಾರ ‘ಪ್ರಜಾವಾಣಿ’ಯೊಂದಿಗೆ ದೂರವಾಣಿಯಲ್ಲಿ ಅವರು ಮಾತನಾಡಿ, ‘ನನಗೀಗ 70 ವರ್ಷ ವಯಸ್ಸಾಗಿದೆ. ಬಹುಶಃ ನನಗಿದು ಸಾರ್ವಜನಿಕವಾಗಿ ಕೊನೆಯ ಪರೀಕ್ಷೆ. ಟಿಕೆಟ್‌ ಆಕಾಂಕ್ಷಿಯಾಗಿ ಕಾಂಗ್ರೆಸ್‌ ಸೇರುತ್ತಿಲ್ಲ. ಟಿಕೆಟ್‌ ನೀಡಬೇಕು ಎಂದು ಷರತ್ತನ್ನು ವಿಧಿಸಿಲ್ಲ’ ಎಂದು ತಿಳಿಸಿದರು.


‘ನಾನು ಕಾಂಗ್ರೆಸ್‌ ಸೇರಬೇಕು ಎಂಬುದು ಜೆಡಿಎಸ್‌ ಪಕ್ಷದ ಬಹುತೇಕ ಕಾರ್ಯಕರ್ತರು, ಪಕ್ಷಾತೀತವಾಗಿರುವ ನನ್ನ ಅಭಿಮಾನಿಗಳ ಅಭಿಪ್ರಾಯ. ಕ್ಷೇತ್ರದ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಒಂಟಿಯಾಗಿ ತೀರ್ಮಾನ ತೆಗೆದುಕೊಳ್ಳುವುದಷ್ಟು ಜಾತಿ ಬಲ ಮತ್ತು ಜನ ಶಕ್ತಿ ನನಗೆ ಇಲ್ಲ. ನನಗಿರುವ ಜನ ಸಂಪರ್ಕ, ಪ್ರೀತಿ ಆಧರಿಸಿ ಈ ನಿರ್ಧಾರಕ್ಕೆ ಮುಂದಾಗಿದ್ದೇನೆ’ ಎಂದು ವಿವರಿಸಿದರು.


‘ನನ್ನ ಜತೆಗಿರುವ ಕಾರ್ಯಕರ್ತರು ಅತಂತ್ರರಾಗಬಾರದು ಎಂದು ಕಾಂಗ್ರೆಸ್‌ ಸೇರಲು ಮುಂದಾಗಿದ್ದೇನೆ. ನಾನು ಮನೆ ಸೇರಿದಾಗ ಕಾರ್ಯಕರ್ತರು ದತ್ತಣ್ಣ ನಡುನೀರಿನಲ್ಲಿ ಕೈಬಿಟ್ಟರು ಎಂದು ಹೇಳಬಾರದು. ಅವರಿಗೊಂದು ನೆಲೆ ಕಲ್ಪಿಸಿ, ರಾಜಕೀಯದಿಂದ ನಿವೃತ್ತಿಯಾಗಬೇಕು ಎಂಬ ದೃಷ್ಟಿಯಿಂದ ಈ ಹೆಜ್ಜೆ ಇಟ್ಟಿದ್ದೇನೆ’ ಎಂದರು.


‘ಇದೇ 17ರಂದು ಸೇರುತ್ತಾರೆ ಎಂಬ ಯಾರೊ ತಪ್ಪು ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್‌ ಸೇರುವುದು ಯಾವತ್ತು ಎಂಬುದು ತೀರ್ಮಾನವಾಗಿಲ್ಲ. 17ರಂದು ಬೆಳ್ತಂಗಂಡಿಯಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಇದೆ, ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕೃತಿ ಬಿಡುಗಡೆಗೊಳಿಸುತ್ತಾರೆ, ಪುಸ್ತಕ ಕುರಿತು ನಾನು ಮಾತನಾಡುತ್ತೇನೆ. ಪುಸ್ತಕ ಬಿಡುಗಡೆ ಆಹ್ವಾನ ಪತ್ರಿಕೆಯಲ್ಲಿ ನಮ್ಮಿಬ್ಬರ ಹೆಸರು ಇರುವುದರಿಂದ ಎಲ್ಲರೂ ಅವತ್ತು ಸೇರುತ್ತೇನೆ ಎಂದುಕೊಂಡಿರಬಹುದು. ಅದೊಂದು ಸಾಹಿತ್ಯಕ ಕಾರ್ಯಕ್ರಮ, ಅವತ್ತು ಕಾಂಗ್ರೆಸ್‌ ಸೇರಲ್ಲ. ಯಾವತ್ತು ಸೇರುತ್ತೇನೆ ಎಂಬುದನ್ನು ಶೀಘ್ರದಲ್ಲಿ ತಿಳಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.


‘ಜನತಾ ಪರಿವಾರದಲ್ಲಿ 50 ವರ್ಷಗಳಿಂದ ಎಚ್‌.ಡಿ.ದೇವೇಗೌಡ ಅವರ ಆತ್ಮೀಯವಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ನಮ್ಮಿಬ್ಬರದು ಪಕ್ಷಕ್ಕೆ ಮೀರಿದ ಭಾವನಾತ್ಮಕ ಸಂಬಂಧ. ದೇವೇಗೌಡ ಅವರ ಬಗ್ಗೆ ಪೂಜ್ಯ ಭಾವನೆ ಇದೆ, ಒಂದು ರೀತಿ ತಂದೆ ಮತ್ತು ಮಗನ ಸಂಬಂಧ ನಮ್ಮದು. ಬದುಕಿರುವವರೆಗೂ ಅವರೊಟ್ಟಿಗೇ ಇರುತ್ತೇನೆ ಎಂದು ಹಲವು ಬಾರಿ ಹೇಳಿರುವುದು ನಿಜ. ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳು ಕಾಂಗ್ರೆಸ್‌ ಕಡೆಗೆ ಮುಖಮಾಡುವಂತೆ ಮಾಡಿವೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT