ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ನಾಯಕರ ಸಂಸ್ಥೆಗಳಲ್ಲೂ ಎಸ್‌ಇಪಿ ಅಳವಡಿಸಲಿ: ಬಿ.ಸಿ.ನಾಗೇಶ್ ಒತ್ತಾಯ

Published 9 ಅಕ್ಟೋಬರ್ 2023, 17:18 IST
Last Updated 9 ಅಕ್ಟೋಬರ್ 2023, 17:18 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರ ಎನ್‌ಇಪಿ ರದ್ದುಪಡಿಸಿ, ಜಾರಿಗೊಳಿಸಲು ಹೊರಟಿರುವ ರಾಜ್ಯ ಶಿಕ್ಷಣ ನೀತಿಯನ್ನು (ಎಸ್‌ಇಪಿ) ಸಚಿವರು, ಕಾಂಗ್ರೆಸ್ ಶಾಸಕರು ಹಾಗೂ ಅವರ ಪಕ್ಷದ ಇತರೆ ನಾಯಕರ ಒಡೆತನದ ಶಿಕ್ಷಣ ಸಂಸ್ಥೆಗಳಲ್ಲೂ ಅಳವಡಿಸಿಕೊಳ್ಳಬೇಕು ಎಂದು ಮಾಜಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಒತ್ತಾಯಿಸಿದರು.

ಪೀಪಲ್ಸ್‌ ಫೋರಂ ಆಫ್‌ ಕರ್ನಾಟಕ ಸಿದ್ಧಪಡಿಸಿರುವ ಪ್ರಸಕ್ತ ಶೈಕ್ಷಣಿಕ ವರ್ಷದ ಪಠ್ಯಗಳಲ್ಲಿನ ‘ಲೋಪಗಳ ಪಟ್ಟಿ’ ಬಿಡುಗಡೆ ಮಾಡಿ ಅವರು ಮಾತನಾಡಿದರು.

ರಾಜ್ಯದ ಬಹುತೇಕ ಖಾಸಗಿ ಶಾಲೆಗಳು ಸಿಬಿಎಸ್‌ಇ, ಐಸಿಎಸ್ಇ ಸೇರಿದಂತೆ ಕೇಂದ್ರ ಪಠ್ಯಕ್ರಮ ಅನುಸರಿಸುತ್ತಿವೆ. ಸಿಬಿಎಸ್‌ಇ, ಐಸಿಎಸ್‌ಇಗಳು ಸಹ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಳ್ಳುತ್ತಿವೆ. ರಾಜ್ಯ ಸರ್ಕಾರ ರೂಪಿಸಲು ಹೊರಟಿರುವ ಶಿಕ್ಷಣ ನೀತಿಯನ್ನು ಸರ್ಕಾರಿ ಶಾಲೆಗಳಲ್ಲಷ್ಟೇ ಜಾರಿಗೊಳಿಸಲು ಸಾಧ್ಯ. ಇಂದು ಸರ್ಕಾರಿ ಶಾಲೆಗಳಲ್ಲಿ ಬಡವರು, ಪರಿಶಿಷ್ಟ ಸಮುದಾಯಗಳ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದಾರೆ. ಅದೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ, ಎಸ್‌.ಎಸ್‌.ಮಲ್ಲಿಕಾರ್ಜುನ್‌ ಸೇರಿದಂತೆ ಬಹುತೇಕ ಸಚಿವರ ಒಡೆತನದ ಶಾಲೆಗಳಲ್ಲಿ ಓದುವ ಮಕ್ಕಳಿಗೂ ರಾಜ್ಯ ಶಿಕ್ಷಣ ನೀತಿ ಪರಿಚಯಿಸಬೇಕು. ಮಕ್ಕಳ ನಡುವಿನ ತಾರತಮ್ಯ ನಿವಾರಿಸಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ರಾಜಕೀಯ ಬೆರೆಸಬಾರದು. ಪಠ್ಯಚೌಕಟ್ಟು, ಪಠ್ಯಪುಸ್ತಕಗಳು ಚುನಾವಣಾ ಪ್ರಣಾಳಿಕೆಯ ವಿಷಯಗಳಾಗಬಾರದು. ರಾಜಕಾರಣಿಗಳೇ ರೂಪಿಸಿದ ಪ್ರಣಾಳಿಕೆಯಲ್ಲಿ ವಿಷಯ ಪ್ರಸ್ತಾಪಿಸಿದ ಮಾತ್ರಕ್ಕೆ ವಿವೇಚನೆ ಇಲ್ಲದೆ ಎನ್‌ಇಪಿ ರದ್ದುಪಡಿಸುವುದು, ಪಾಠಗಳನ್ನು ಕಿತ್ತುಬಿಸಾಡುವುದು ಸರಿಯಲ್ಲ. ಇದು ಮಕ್ಕಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಬಗೆದ ದ್ರೋಹ ಎಂದು ದೂರಿದರು.

ಹಿಂದಿನ ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಸರ್ಕಾರಿ ಶಾಲೆಗಳಲ್ಲಿ 2.75 ಲಕ್ಷ ಮಕ್ಕಳು ಕಡಿಮೆಯಾಗಿದ್ದಾರೆ. ಆ ಮಕ್ಕಳು ಎಲ್ಲಿ ಹೋದರು ಎನ್ನುವ ಮಾಹಿತಿಯೇ ಸರ್ಕಾರದ ಬಳಿ ಇಲ್ಲ. ಇಂತಹ ಸರ್ಕಾರದಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್‌ ಸದಸ್ಯರಾದ ಅ.ದೇವೇಗೌಡ, ಚಿದಾನಂದ ಗೌಡ, ಪೀಪಲ್ಸ್‌ ಫೋರಂ ಅಧ್ಯಕ್ಷ ರಾಮಚಂದ್ರ ಶೆಟ್ಟಿ, ಕಾರ್ಯದರ್ಶಿ ಆನಂದಮೂರ್ತಿ ಇದ್ದರು.

ಮಧು ಬಂಗಾರಪ್ಪಗೆ ‘ಗೊಬೆಲ್ಸ್‌’ ಪದ ಬಳಕೆ 

ರಾಜ್ಯ ಸರ್ಕಾರ ಅಳವಡಿಸಿದ ಪಾಠಗಳಲ್ಲಿ ಇರುವ ಲೋಪಗಳನ್ನು ಪೀಪಲ್ಸ್‌ ಫೋರಂ ಆಫ್‌ ಕರ್ನಾಟಕ ಪಟ್ಟಿ ಮಾಡಿದೆ. ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಗೊಬೆಲ್ಸ್ (ಜರ್ಮಿನಿಯ ಹಿಟ್ಲರ್‌ನ ಪ್ರಚಾರ ಸಚಿವ) ಎಂದು ಕರೆದಿದೆ. ಮುಸ್ಲಿಂ ಭಾತೃತ್ವದ ಪ್ರತಿಪಾದನೆ ಮಕ್ಕಳು ಭವಿಷ್ಯದಲ್ಲಿ ಸೈನ್ಯ ಸೇರಲು ನಿರುತ್ಸಾಹ ಮೂಡಿಸುವುದು ಭಾರತದ ಬಗ್ಗೆ ನೀರಸ ಕಥಾವಸ್ತು ಇರುವ ಪಾಠ ಅಳವಡಿಸಿರುವುದು ಆರ್ಯರನ್ನು ವಿದೇಶಿಯರಂತೆ ಬಿಂಬಿಸಿರುವುದು. ಸಭಾ ಸಮಿತಿಯ ಪ್ರಾಮುಖ್ಯತೆ ಇಲ್ಲವೆಂದು ನಂಬಿಸಿರುವುದು ಸರಸ್ವತಿ ನದಿಯ ತಪ್ಪು ವ್ಯಾಖ್ಯಾನ ವೇದಗಳ ವಿಭಜನೆ ಸೇರಿದಂತೆ ಹಲವು ತಪ್ಪು ಸೇರಿಸಲಾಗಿದೆ ಎಂದು ಪಟ್ಟಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT