ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್‌–ರೇವಣ್ಣ ಅರ್ಜಿ ವಿಚಾರಣೆ ಮುಂದೂಡಿಕೆ

Published : 8 ಆಗಸ್ಟ್ 2024, 14:33 IST
Last Updated : 8 ಆಗಸ್ಟ್ 2024, 14:33 IST
ಫಾಲೋ ಮಾಡಿ
Comments

ಬೆಂಗಳೂರು: ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ನಿಯಮಿತ ಮತ್ತು ನಿರೀಕ್ಷಣಾ ಜಾಮೀನು ಅರ್ಜಿಗಳಿಗೆ ಆಕ್ಷೇಪಣೆ ಸಲ್ಲಿಸಲು ರಾಜ್ಯ ಸರ್ಕಾರ ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಹೈಕೋರ್ಟ್ ವಿಚಾರಣೆ ಮುಂದೂಡಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಮತ್ತು ಬೆಂಗಳೂರು ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಎಸ್ಐಟಿ ಪರ ಹಾಜರಾಗಿದ್ದ ವಿಶೇಷ ಪ್ರಾಸಿಕ್ಯೂಟರ್ ಹಿರಿಯ ವಕೀಲ ರವಿವರ್ಮ ಕುಮಾರ್, ‘ಆಕ್ಷೇಪಣೆ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಬೇಕು’ ಎಂದು ಕೋರಿದರು.

ಎಚ್‌.ಡಿ.ರೇವಣ್ಣ ಅರ್ಜಿ: 

ಪುತ್ರ ಪ್ರಜ್ವಲ್‌ ಅವರನ್ನು ರಕ್ಷಿಸುವ ದಿಸೆಯಲ್ಲಿ ಅತ್ಯಾಚಾರ ಆರೋಪ ಮಾಡಿದ್ದ ಮನೆಕೆಲಸದ ಮಹಿಳೆಯನ್ನು ಅಪಹರಣ ಮಾಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ಶಾಸಕ ಎಚ್.ಡಿ.ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನೂ ಇದೇ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಎಚ್‌.ಡಿ.ರೇವಣ್ಣ ಪರ ವಕೀಲ ಜಿ.ಅರುಣ್, ‘ಎಸ್‌ಐಟಿ, ಸಂಬಂಧಿಸಿದ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆದರೆ, ನಮಗಿನ್ನೂ ಅದರ ದೃಢೀಕೃತ ಪ್ರತಿ ದೊರತಿಲ್ಲ. ಆದ್ದರಿಂದ, ವಿಚಾರಣೆ ಮುಂದೂಡಬೇಕು’ ಎಂದು ಮನವಿ ಮಾಡಿದರು. ಎರಡೂ ಪ್ರಕರಣಗಳಲ್ಲಿ ಕೋರಿಕೆ ಮನ್ನಿಸಿದ ನ್ಯಾಯಪೀಠ ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT