ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಫಾರಿ ವಾಹನ ಹಂಚಿಕೆ ವಿವರ ಸಲ್ಲಿಸಿ: ಹೈಕೋರ್ಟ್‌

ಜಂಗಲ್‌ ಲಾಡ್ಜಸ್‌ ರೆಸಾರ್ಟ್‌ಗೆ ನಿರ್ದೇಶನ
Published 28 ಮೇ 2024, 23:35 IST
Last Updated 28 ಮೇ 2024, 23:35 IST
ಅಕ್ಷರ ಗಾತ್ರ

ಬೆಂಗಳೂರು: ‘ನಾಗರಹೊಳೆ, ಬಂಡೀಪುರ ಮತ್ತು ಕಬಿನಿ ರಾಷ್ಟ್ರೀಯ ಉದ್ಯಾನದ ಖಾಸಗಿ ರೆಸಾರ್ಟ್‌ಗಳಲ್ಲಿ ತಂಗುವ ಅತಿಥಿಗಳಿಗೆ ಒದಗಿಸಲಾಗುವ ಸಫಾರಿ ವಾಹನಗಳನ್ನು ಯಾವ ವಿಧಾನದಲ್ಲಿ ಹಂಚಿಕೆ ಮಾಡುತ್ತೀರಿ ಎಂಬ ಬಗ್ಗೆ ವಿವರಣೆ ಕೊಡಿ’ ಎಂದು ಹೈಕೋರ್ಟ್‌, ‘ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್‌’ಗೆ (ಜೆಎಲ್‌ಆರ್‌) ನಿರ್ದೇಶಿಸಿದೆ.

ಈ ಸಂಬಂಧ ನಾಗರಹೊಳೆ, ಬಂಡೀಪುರ ಮತ್ತು ಕಬಿನಿ ಅಭಯಾರಣ್ಯಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ರೆಸಾರ್ಟ್‌ಗಳನ್ನು ಪ್ರತಿನಿಧಿಸುವ, ‘ಕರ್ನಾಟಕ ಇಕೊ ಟೂರಿಸ್ಟ್‌ ರೆಸಾರ್ಟ್ಸ್‌ ಅಸೋಸಿಯೇಷನ್‌’ ಕಾರ್ಯದರ್ಶಿ ರೋಹನ್‌ ಮಿಶ್ರಾ ಸೇರಿದಂತೆ ಒಟ್ಟು ಒಂಬತ್ತು ಜನರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಹಾಗೂ ನ್ಯಾಯಮೂರ್ತಿ ಕೆ.ವಿ.ಅರವಿಂದ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

‘ರಾಷ್ಟ್ರೀಯ ಉದ್ಯಾನವನಗಳಲ್ಲಿ ಸಫಾರಿ ವಾಹನಗಳ ಹಂಚಿಕೆಗೆ ಸಂಬಂಧಿಸಿದಂತೆ ಇರುವ ನೀತಿ ಅಥವಾ ಮಾರ್ಗಸೂಚಿಗಳನ್ನು ಕೋರ್ಟ್‌ಗೆ ಒದಗಿಸಿ. ಈ ಕುರಿತಂತೆ ಪ್ರಮಾಣ ಪತ್ರ ಸಲ್ಲಿಸಿ’ ಎಂದು ಜೆಎಲ್‌ಆರ್‌ ಲಿಮಿಟೆಡ್‌ಗೆ ನಿರ್ದೇಶಿಸಿದ ನ್ಯಾಯಪೀಠ ವಿಚಾರಣೆಯನ್ನು ಜುಲೈ 1ಕ್ಕೆ ಮುಂದೂಡಿದೆ.

ಕೋರಿಕೆ ಏನು?: ‘ನಾಗರಹೊಳೆ, ಬಂಡೀಪುರ ಮತ್ತು ಕಬಿನಿ ರಾಷ್ಟ್ರೀಯ ಅಭಯಾರಣ್ಯಗಳ ರೆಸಾರ್ಟ್‌ಗಳಲ್ಲಿ ತಂಗುವ ಅತಿಥಿಗಳಲ್ಲಿ ಶೇ 50ರಷ್ಟು ಸಫಾರಿ ವಾಹನಗಳನ್ನು ಖಾಸಗಿ ರೆಸಾರ್ಟ್‌ಗಳಿಗೆ ಹಂಚಿಕೆ ಮಾಡಬೇಕು. ಆದರೆ, ಈ ಕುರಿತ ನಿರ್ಣಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಸಫಾರಿ ವಾಹನಗಳ ಹಂಚಿಕೆಯಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಹಾಗಾಗಿ, ಸಫಾರಿ ವಾಹನಗಳ ನ್ಯಾಯಸಮ್ಮತ ಹಂಚಿಕೆ ಮತ್ತು ಈಗಿರುವ ಸೌಲಭ್ಯಗಳನ್ನು ವಿಸ್ತರಿಸುವಾಗ ಯಾವುದೇ ತಾರತಮ್ಯ ಎಸಗದಂತೆ ನಿರ್ದೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

‘ಸಫಾರಿ ವಾಹನಗಳಿಗಾಗಿ ಕ್ಯಾಂಟರ್‌ ಮತ್ತು ಜೀಪ್‌ಗಳನ್ನು ಒದಗಿಸಲಾಗುತ್ತದೆ. ಖಾಸಗಿ ರೆಸಾರ್ಟ್‌ಗಳು ಆನ್‌ಲೈನ್‌ ಮೂಲಕ ಆಸನಗಳನ್ನು ಕಾಯ್ದಿರಿಸಬಹುದಾದರೂ, ಕಾಯ್ದಿರಿಸಿದವರಿಗೆ ಜೀಪ್ ಅಥವಾ ಕ್ಯಾಂಟರ್‌ಗಳಲ್ಲಿ ಯಾವುದನ್ನು ಒದಗಿಸಲಾಗುತ್ತದೆ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದಾಗ್ಯೂ, ಕ್ಯಾಂಟರ್‌ಗಳಲ್ಲಿ ಪ್ರಯಾಣಿಸಿದರೆ ಸಿಗುವ ಅನುಭವ ಜೀಪ್‌ಗಳಿಗೆ ಹೋಲಿಕೆ ಮಾಡಿದರೆ ಅತ್ಯಂತ ಕಡಿಮೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

‘ಸಫಾರಿ ವಾಹನಗಳನ್ನು ಹಂಚಿಕೆ ಮಾಡುವುದು ಮತ್ತು ಅತಿಥಿಗಳಿಗೆ ಅರಣ್ಯದ ಸಫಾರಿ ಮಾರ್ಗಗಳನ್ನು ನಿಗದಿ ಮಾಡುವುದರಲ್ಲಿ ಪೂರ್ವಗ್ರಹ ಪೀಡಿತ ಭಾವನೆ ಪ್ರದರ್ಶಿಸದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು ಮತ್ತು ಖಾಸಗಿಯವರಿಗೂ ಸಮಾನ ಅವಕಾಶ ಲಭ್ಯವಾಗುವಂತೆ ಮಾಡಬೇಕು’ ಎಂದು ಮಧ್ಯಂತರ ಮನವಿಯಲ್ಲಿ ಕೋರಲಾಗಿದೆ. ಖಾಸಗಿ ರೆಸಾರ್ಟ್‌ಗಳು ನಾಗರಹೊಳೆಯಲ್ಲಿ ಶೇ 71 ರಷ್ಟು ಮತ್ತು ಬಂಡೀಪುರ ರಾಷ್ಟ್ರೀಯ ಉದ್ಯಾನವನಗಳಲ್ಲಿ ಶೇ 83ರಷ್ಟು ಪ್ರಮಾಣದಲ್ಲಿ ಅತಿಥಿಗಳಿಗೆ ಸೇವೆ ಒದಗಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT