ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ, ಸಿ.ಎಂ ವಿರುದ್ಧ ‘ಶತ್ರು ಭೈರವಿ ಯಾಗ’ ಪ್ರಯೋಗ: ಡಿಸಿಎಂ

Published 30 ಮೇ 2024, 16:05 IST
Last Updated 30 ಮೇ 2024, 16:05 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇರಳದಲ್ಲಿ ತಂತ್ರಿಗಳನ್ನು ಬಳಸಿಕೊಂಡು ನನ್ನ ಹಾಗೂ ಮುಖ್ಯಮಂತ್ರಿ ವಿರುದ್ಧ ‘ಶತ್ರು ಭೈರವಿ ಯಾಗ’ ಪ್ರಯೋಗ ನಡೆಸಲಾಗುತ್ತಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ನಾವು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಂಬಿರುವ ಶಕ್ತಿ, ದೇವರು ಮತ್ತು ಜನರ ಆಶೀರ್ವಾದ ನಮ್ಮನ್ನು ಕಾಪಾಡಲಿದೆ’ ಎಂದರು.

‘ಕೇರಳದ ರಾಜರಾಜೇಶ್ವರಿ ದೇವಾಲಯದ ಆಸುಪಾಸಿನ ನಿರ್ಜನ ಪ್ರದೇಶದಲ್ಲಿ ಶತ್ರು ಸಂಹಾರ ಉದ್ದೇಶದ ‘ರಾಜಕಂಟಕ‘, ‘ಮಾರಣ ಮೋಹನ ಸ್ತಂಭನ’ ಯಾಗ ಪ್ರಯೋಗ ನಡೆಸಲಾಗುತ್ತಿದೆ. ಯಾರು ಈ ಯಾಗ ಮಾಡಿಸುತ್ತಿದ್ದಾರೆಂಬ ಮಾಹಿತಿಯನ್ನು ಈ ಯಾಗದಲ್ಲಿ ಪಾಲ್ಗೊಂಡವರು ತಿಳಿಸಿದ್ದಾರೆ’ ಎಂದರು.

‘ಅಘೋರಿಗಳ ಮೂಲಕ ಈ ಯಾಗ ನಡೆಯುತ್ತಿದೆ. ಕೆಂಪು ಬಣ್ಣದ 21 ಮೇಕೆ, ಮೂರು ಎಮ್ಮೆ, ಕಪ್ಪು ಬಣ್ಣದ 21 ಕುರಿ ಮತ್ತು ಐದು ಹಂದಿ ಹೀಗೆ ಪಂಚ ಬಲಿ ಮೂಲಕ ಈ ಮಾಂತ್ರಿಕ ಯಾಗ ನಡೆಯುತ್ತಿದೆ’ ಎಂದರು.

‘ಆದರೆ, ಈ ಯಾಗ ಪ್ರಯೋಗದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅವರವರ ನಂಬಿಕೆ ಅವರದು. ಹೀಗಾಗಿ ಇಂತಹ ಪ್ರಯತ್ನ ಮಾಡುತ್ತಾರೆ. ಅವರು ನಮ್ಮ ಮೇಲೆ ಏನೇ ಪ್ರಯೋಗ ಮಾಡಿದರೂ ನಾನು ನಂಬಿರುವ ಶಕ್ತಿ ನಮ್ಮನ್ನು ಕಾಪಾಡಲಿದೆ. ನಾನು ನಿತ್ಯ ಮನೆಯಿಂದ ಹೊರಡುವ ಮೊದಲು ದೇವರಿಗೆ ಒಂದು ನಿಮಿಷ ಕೈಮುಗಿದು ಪ್ರಾರ್ಥಿಸುತ್ತೇನೆ’ ಎಂದರು.

ಈ ಪ್ರಯೋಗ ಮಾಡಿಸುತ್ತಿರುವವರು ಬಿಜೆಪಿಯವರಾ ಅಥವಾ ಜೆಡಿಎಸ್‌ನವರಾ ಎಂದು ಕೇಳಿದಾಗ, ‘ಯಾರು ಮಾಡಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿದೆ. ನನ್ನ ಬಾಯಿಂದ ಹೇಳಿಸುವುದರ ಬದಲು, ಈ ಬಗ್ಗೆ ನೀವೇ ತನಿಖಾ ವರದಿ ಮಾಡಿ’ ಎಂದರು.

‘ನಿಮ್ಮನ್ನೇ ಏಕೆ ಗುರಿ ಮಾಡುತ್ತಾರೆ? ನೀವೂ ಪ್ರತಿಯಾಗಿ ಏನಾದರೂ ಮಾಡುತ್ತೀರಾ?’ ಎಂದು ಕೇಳಿದಾಗ, ‘ಯಾವಾಗಲೂ ರಾಜಕೀಯವಾಗಿ ಚಟುವಟಿಕೆಯಿಂದ ಇರುವವರು ವಿರೋಧಿಗಳ ಕೆಂಗಣ್ಣಿಗೆ ಗುರಿ ಆಗುತ್ತಾರೆ. ಅವರು ಮಾಡುವುದು ಮಾಡಲಿ, ನನ್ನ ಶಕ್ತಿ ನನ್ನ ರಕ್ಷಣೆಗಿದೆ. ನಾನು ಅಂತಹ ಯಾವುದೇ ಚಟುವಟಿಕೆ ಮಾಡುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT