ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಷ್ಟಮಠಗಳ ವಿರುದ್ಧ ಸ್ಫೋಟಕ ಆಡಿಯೊ ಬಹಿರಂಗ

ಶಿರೂರು ಶ್ರೀಗಳು ಸಾಯುವ ಮುನ್ನ ಮಾತನಾಡಿದ್ದಾರೆ ಎನ್ನಲಾದ ಧ್ವನಿಮುದ್ರಿಕೆ ಬಿಡುಗಡೆ
Last Updated 21 ಜುಲೈ 2018, 18:04 IST
ಅಕ್ಷರ ಗಾತ್ರ

ಬೆಂಗಳೂರು: ಅನುಮಾನಾಸ್ಪದವಾಗಿ ಗುರುವಾರ ಮೃತಪಟ್ಟಿದ್ದ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅದಕ್ಕೂ ನಾಲ್ಕು ದಿನಗಳ ಮೊದಲು ಉಡುಪಿಯ ಅಷ್ಟಮಠಗಳ ಬಗ್ಗೆ ಮಾತನಾಡಿದ್ದರು ಎನ್ನಲಾದ ಧ್ವನಿಮುದ್ರಿಕೆಯನ್ನು ಸ್ಥಳೀಯ ಸುದ್ದಿವಾಹಿನಿ ಮುಕ್ತ ಟಿವಿ ವರದಿ ಮಾಡಿದೆ.

‘ಅಷ್ಟಮಠಗಳ ಇತರ ಯತಿಗಳು ತಮ್ಮ ವಿರುದ್ಧ ಸಂಚು ಹೂಡಿದ್ದರು. ಅದಕ್ಕಾಗಿ ಖಾಸಗಿ ಸುದ್ದಿವಾಹಿನಿಯವರಿಗೆ ದುಡ್ಡುಕೊಟ್ಟು ನನ್ನ ವಿರುದ್ಧ ಪಿತೂರಿ ಮಾಡಿದ್ದರು. ಈ ಹಿಂದೆಯೂ ಮಠದ ಕೆಲವು ಸ್ವಾಮಿಗಳನ್ನು ‘ಜೀವಂತಶವ’ವಗಳನ್ನಾಗಿ ಮಾಡಲಾಗಿತ್ತು. ಈಗ ನನ್ನನ್ನು ಮುಗಿಸಲು ಮುಂದಾಗಿದ್ದಾರೆ. ಇದನ್ನೆಲ್ಲ ನಾನು ಲಕ್ಷ್ಯಕ್ಕೆ ತೆಗೆದುಕೊಳ್ಳುವುದಿಲ್ಲ. ಇವರ ಎಲ್ಲ ಬಂಡವಾಳ ಬಯಲು ಮಾಡುತ್ತೇನೆ’ ಎಂದು ಶಿರೂರು ಶ್ರೀಗಳು ಹೇಳಿರುವುದು ಧ್ವನಿಮುದ್ರಿಕೆಯಲ್ಲಿದೆ.

ಶಿರೂರು ಶ್ರೀಗಳು ಹೇಳಿದ್ದು...: ‘ದ್ವಂದ್ವ ಮಠಗಳು ಎನ್ನುವುದಕ್ಕೆ ಆಧಾರವೇ ಇಲ್ಲ. ನಿಜವಾಗಿ ಸಾಧನೆ ಮಾಡಿದ್ದು ಪುತ್ತಿಗೆ ಶ್ರೀಗಳು. ಅವರು ಗ್ರೇಟ್. ವಿದೇಶಕ್ಕೆ ಹೋಗಿ ಕ್ರೈಸ್ತ ದೇವಾಲಯವನ್ನು ಕೃಷ್ಣ ದೇವಾಲಯ ಎಂದು ಮಾಡಿದರು. ಇವರ ಹಣೆಬರಹದಲ್ಲಿ ಅದು ಸಾಧ್ಯವಿಲ್ಲ. ಅದಕ್ಕೆ ಅವರ ವಿರುದ್ಧ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಹೆಚ್ಚು ಮಾತನಾಡಿದರೆ ನಿಮ್ಮ ಗುರುಗಳ ಎಲ್ಲ ಗುಟ್ಟು ಹೊರಹಾಕಲಿದ್ದೇನೆ ಎಂದು ಹೇಳಿದ್ದೆ. ಕೃಷ್ಣಾಪುರ ಮಠದ ಹಿರಿಯ ಯತಿಗಳು ಆರು ಹೆಣ್ಣುಮಕ್ಕಳ ಅಪ್ಪ.

ನಾನು ಒಂದು ಧರ್ಮದಲ್ಲಿದ್ದವನು, ತಪ್ಪು ಮಾಡಿರುವುದು ನಿಜ. ಆದರೆ, ಇವರೆಲ್ಲ ಮಾಡಿರುವ ತಪ್ಪುಗಳ ಮುಂದೆ ನನ್ನದು ಏನೇನೂ ಅಲ್ಲ. ಸೆಕ್ಸ್‌ ಎಂಬುದು ಅಷ್ಟ ಮಠಗಳಲ್ಲಿ ಹಿಂದೆಯೂ ಇತ್ತು. ಇನ್ನು ಮುಂದೆ ಕೂಡ ಇರುತ್ತದೆ. ಪುತ್ತಿಗೆ ಮಠದ ಶತಾಯುಷಿ ಸುಧೀದ್ರತೀರ್ಥರಿಗೆ ಅಕ್ಕಯ್ಯ ಎಂಬ ಮಹಿಳೆ ಜತೆ ಸಂಬಂಧವಿತ್ತು. ತನ್ನ ಮಗನಿಗೇ ಅವರು ದೀಕ್ಷೆ ಕೊಟ್ಟಿದ್ದರು. ಇದರ ವಿರುದ್ಧ ಏಳು ಜನ ಸ್ವಾಮೀಜಿಗಳು ಮದ್ರಾಸ್ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಸುದೀಂಧ್ರ ತೀರ್ಥರಿಗೇ ಜಯವಾಯಿತು. ಅವರ ಮಗ ಪರ್ಯಾಯವನ್ನೂ ಪೂರೈಸಿದ್ದರು. ಅವರು ವಿಧಿವಶರಾಗಿ ಅವರ ವೃಂದಾವನವೂ ಉಡುಪಿಯಲ್ಲಿದೆ. ಈಗ ಅದನ್ನು ಸಣ್ಣ ವೃಂದಾವನ ಎನ್ನುತ್ತಾರೆ. ಅವರೆಷ್ಟು ಜನ ಸರಿ ಇದ್ದಾರೆ? ಪ್ರಾಣದೇವರ ಮುಂದೆ ಬಂದು ಹೇಳಲಿ.

ಅಜ್ಜನಿಗೂ ಮೂವರು ಮಕ್ಕಳಿದ್ದಾರೆ. ಒಬ್ಬರು ಡಾ. ಉಷಾ ಅಂತ, ಚೆನ್ನೈನಲ್ಲಿ ವೈದ್ಯರಾಗಿದ್ದಾರೆ. ತಮಿಳುನಾಡಿನ ಮಹಿಳೆ ಜತೆ ಪ್ರೇಮ ಹೊಂದಿದ್ದರು. ಆ ಮಹಿಳೆ ಇತ್ತೀಚೆಗೆ ತೀರಿಕೊಂಡರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಆ ಮಹಿಳೆಗೂ ಮೂವರು ಮಕ್ಕಳಿದ್ದರು. ನಿಮಗೆ ತೊಂದರೆಯಾದರೆ ನಿಮ್ಮ ಜತೆ ಬರುತ್ತೇವೆ ಎಂದು ಅವರು ಹೇಳಿದ್ದರು. ಡಿಎನ್‌ಎ ಪರೀಕ್ಷೆಗೂ ಸಿದ್ಧ ಎಂದು ಉಷಾ ಅವರು ಹೇಳಿದ್ದರು. ಅವರಿಗೆಲ್ಲ ಮಠಕ್ಕೆ ಪ್ರವೇಶವಿಲ್ಲ, ಪಾಪ. ಸ್ವಾಮೀಜಿಗಳ ಶಾಸ್ತ್ರಪ್ರಕಾರ ಕುದುರೆ ಮೇಲೆ ಕುಳಿತುಕೊಳ್ಳುವಂತಿಲ್ಲ. ಆದರೆ, ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತೆ ಮಾಡಲಾಗುತ್ತಿದೆ.

ನಾನು ಅವರನ್ನು ನಂಬಿ ಪಟ್ಟದ ದೇವರನ್ನು ಕೊಟ್ಟಿದೆ. ಆದರೆ, ವಿಶ್ವಾಸಘಾತಕತನ ಮಾಡಿದರು. ನಾನು ಸನ್ಯಾಸ ತ್ಯಜಿಸಬೇಕು ಎನ್ನಲು ಇವರು ಯಾರು? ಒಂದು ವಿಷಯ ನೆನಪಿರಲಿ. ದಾಖಲೆಗಳನ್ನು ತೆಗೆದುನೋಡಿ. ನಿರಂತರ 47 ವರ್ಷ ಕೃಷ್ಣನ ಪೂಜೆ ಮಾಡಿದ್ದು ನಾನು ಮಾತ್ರ. ವಿಶ್ವೇಶ ತೀರ್ಥರೂ ಅಷ್ಟು ಪೂಜೆ ಮಾಡಿಲ್ಲ. ಆಗ ತಪ್ಪು ಸಿಗಲಿಲ್ಲ. ಈಗ ನಾನು ದೂರವಾದೆನೇ? ಚುನಾವಣೆಗೆ ನಿಲ್ಲುತ್ತೇನೆ ಎಂದ ಮಾತ್ರಕ್ಕೆ ನಾನು ಬೇಡವಾದೆನೇ?

ಪ್ರತಿಯೊಂದಕ್ಕೂ ಅವರಿಗೆ ಬೇಕಾಗಿದ್ದವನು ನಾನು ಗೊತ್ತೇ... ಖಾಸಗಿ ವಾಹಿನಿಯನಿಗೆ ಕೊಟ್ಟರಲ್ಲ ದುಡ್ಡು. ನಾವೆಲ್ಲ ಅನಾಥರು ಅಷ್ಟೆ. ನಾವೆಲ್ಲ ಪ್ರೀತಿಯಲ್ಲಿರಬೇಕಾದವರು. ಸಹೋದರರಂತೆ ಇರಬೇಕಾದವರು. ಆದರೆ, ಆ ಭಾವನೆಯೇ ಅವರಲ್ಲಿಲ್ಲ.

ಮಠದ ಒಂದು ಇತಿಹಾಸ ಹೇಳುತ್ತೇನೆ. ಅದಮಾರು ಮಠದ ವಿಭುದೇಶ ತೀರ್ಥರಿಗೆ ಕೊಂಕಣಿ ಮಹಿಳೆಯೊಬ್ಬರ ಜತೆ ಸಂಪರ್ಕವಿತ್ತು. ಅದರಲ್ಲಿ ಎರಡು ಮಕ್ಕಳಿದ್ದರು. ಅವರ ಗುರುಗಳಾಗಿದ್ದ ವಿಭುದಪ್ರಿಯರಿಗೆ ರಾಜವಾಡೆ ಎಂಬ ಮಹಿಳೆಯ ಸಂಪರ್ಕವಿತ್ತು. ಅವರ ಹಿಂದಿನವರಾದ ವಿಭುದಮಾನ್ಯರನ್ನು ಹೆಣ್ಣಿನ ವಿಚಾರದಲ್ಲಿ ಕೊಲೆ ಮಾಡಲಾಗಿದೆ.

ಇನ್ನು ಪಲಿಮಾರು ಮಠದ ರಘುವಲ್ಲಭರು ನನ್ನ ಅಣ್ಣನ ಪತ್ನಿಯ ಸಹೋದರ. ಅವರನ್ನು 1970ರಲ್ಲಿ ₹5 ಲಕ್ಷ ಕೊಟ್ಟು ಪೀಠದಿಂದ ಎಬ್ಬಿಸಲಾಯಿತು. ಬಳಿಕ ಅಜ್ಜ ತನ್ನ ಗುರುಗಳಾದ ಬಂಡಾರಕೇರಿ ಮಠದ ವಿದ್ಯಾಮಾನ್ಯರನ್ನು ಪಲಿಮಾರು ಮಠಕ್ಕೆ ತಂದು ಕೂರಿಸಿದರು. ಇದು ನನ್ನ ಗುರುದಕ್ಷಿಣೆ ಎಂದು ಬೀಗಿದರು. ಇದು ಅಜ್ಜ ಮಾಡಿದ ಮೊದಲ ಜೀವಂತ ಕೊಲೆ. ರಘುವಲ್ಲಭವರು ವಿದೇಶಕ್ಕೆ ಹೋಗಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

ವಿಶ್ವ ವಿಜಯರನ್ನು ಉದ್ದೇಶಪೂರ್ವಕವಾಗಿ ವಿದೇಶಕ್ಕೆ ಕಳುಹಿಸಿ ಬಂದ ಬಳಿಕ ವಿದೇಶ ಪ್ರಯಾಣ ಮಾಡಿದ ಕಾರಣಕ್ಕೆ ಪೀಠದಿಂದ ಹೊರಹಾಕಲಾಯಿತು. ಇದು ಎರಡನೇ ಜೀವಂತ ಕೊಲೆ.

ಪುತ್ತಿಗೆಯವರದ್ದು ಅಜ್ಜ ಮಾಡಿದ ಮೂರನೇ ಜೀವಂತ ಕೊಲೆ. ಆಚೆ ವ್ಯಾಸರಾಯ ಮಠದ ಸ್ವಾಮಿಗಳನ್ನು ತೆಗೆದುಹಾಕಿದರು. ಇವರನ್ನು ನೇಮಕ ಮಾಡಿದ್ದು ಪುಷ್ಕರಾಚಾರ್ಯ ಎಂಬುವವರು. ಅವರನ್ನೂ ತೆಗದುಹಾಕಿದರು. ಪ್ರಹ್ಲಾದಾಚಾರ್ಯ ಎಂಬುವವರಿಗೂ ಸಮಸ್ಯೆ ಮಾಡಿದರು. ಈಗ ನನ್ನನ್ನು ಮುಗಿಸಲು ಮುಂದಾಗಿದ್ದಾರೆ. ಇದನ್ನೆಲ್ಲ ನಾನು ಲಕ್ಷ್ಯಕ್ಕೆ ತೆಗೆದುಕೊಳ್ಳುವುದಿಲ್ಲ. ಇವರ ಎಲ್ಲ ಬಂಡವಾಳ ಬಯಲು ಮಾಡುತ್ತೇನೆ’ ಎಂದು ಶಿರೂರು ಶ್ರೀ ಹೇಳಿರುವುದು ಧ್ವನಿಮುದ್ರಿಕೆಯಲ್ಲಿದೆ.

‘ನನಗೆ ವಿಶ್ವಾಸಘಾತ’

‘ನಾನು ಅವರನ್ನು ನಂಬಿ ಪಟ್ಟದ ದೇವರನ್ನು ಕೊಟ್ಟಿದ್ದೆ. ಆದರೆ, ವಿಶ್ವಾಸಘಾತಕತನ ಮಾಡಿದರು. ನಾನು ಸನ್ಯಾಸ ತ್ಯಜಿಸಬೇಕು ಎನ್ನಲು ಇವರು ಯಾರು? ಒಂದು ವಿಷಯ ನೆನಪಿರಲಿ. ದಾಖಲೆಗಳನ್ನು ತೆಗೆದುನೋಡಿ. ನಿರಂತರ 47 ವರ್ಷ ಕೃಷ್ಣನ ಪೂಜೆ ಮಾಡಿದ್ದು ನಾನು ಮಾತ್ರ. ವಿಶ್ವೇಶ ತೀರ್ಥರೂ ಅಷ್ಟು ಪೂಜೆ ಮಾಡಿಲ್ಲ. ಆಗ ತಪ್ಪು ಸಿಗಲಿಲ್ಲ. ಈಗ ನಾನು ದೂರವಾದೆನೇ? ಚುನಾವಣೆಗೆ ನಿಲ್ಲುತ್ತೇನೆ ಎಂದ ಮಾತ್ರಕ್ಕೆ ನಾನು ಬೇಡವಾದೆನೇ?’ ಎಂಬ ವಿಚಾರ ಧ್ವನಿಮುದ್ರಿಕೆಯಲ್ಲಿದೆ.

ಇನ್ನಷ್ಟು...

ಶಿರೂರು ಶ್ರೀ ಪ್ರಕರಣ: ಮಹಿಳೆ ಪಾತ್ರ ಶಂಕೆ

ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ: ಎಸ್‌ಪಿ ನಿಂಬರಗಿ ಸ್ಪಷ್ಟನೆ

ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರ ನಿಧನದ ನಂತರ, ಅವರು ಧರಿಸುತ್ತಿದ್ದ ಆಭರಣಗಳು ಏನಾದವು ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಈ ಹೊತ್ತಿನಲ್ಲೇ, ಮಹಿಳೆಯೊಬ್ಬರು ಶಿರೂರು ಶ್ರೀಗಳು ಧರಿಸುತ್ತಿದ್ದ ಮಾದರಿ ಕೈ ಕಡಗಗಳನ್ನು ಹಾಕಿಕೊಂಡಿರುವ ಭಾವಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ದೊಡ್ಡ ಗಾತ್ರದ ಬಂಗಾರದ ಕೈ ಕಡಗಗಳನ್ನು ಹಾಕಿಕೊಂಡಿರುವ ಮಹಿಳೆ, ಶಿರೂರು ಸ್ವಾಮೀಜಿ ಅವರಿಗೆ ಆಪ್ತರು ಎನ್ನಲಾಗಿದೆ. ನಾಲ್ಕು ವರ್ಷಗಳ ಹಿಂದೆ ಸ್ವಾಮೀಜಿಗೆ ಪರಿಚಿತರಾಗಿದ್ದ ಮಹಿಳೆ, ಸ್ವಾಮೀಜಿ ಅವರಿಗೆ ಫಲಾಹಾರವನ್ನು ಮೂಲಮಠಕ್ಕೆ ತಂದು ಕೊಡುತ್ತಿದ್ದರು ಎನ್ನಲಾಗಿದೆ. ಈಚೆಗೆ ಮಠದ ಮೇಲೆಯೂ ಹೆಚ್ಚು ಪ್ರಭಾವ ಹೊಂದಿದ್ದರು ಎಂಬ ಮಾತು ಕೇಳಿ ಬರುತ್ತಿವೆ.‌

ಮಠದ ಆಪ್ತರೊಬ್ಬರ ಮೂಲಕ ಸ್ವಾಮೀಜಿಗೆ ಪರಿಚಯವಾಗಿದ್ದ ಮಹಿಳೆಗೆ ಸ್ವಾಮೀಜಿಯೇ ಕಾರು ಕೊಡಿಸಿದ್ದರು. ಸ್ವತಃ ಕಾರು ಚಲಾಯಿಸಿಕೊಂಡು ಮೂಲ ಮಠಕ್ಕೆ ಬಂದು ಸ್ವಾಮೀಜಿ ಅವರನ್ನು ಭೇಟಿ ಮಾಡಿ ಹೋಗುತ್ತಿರುವುದನ್ನು ನೋಡಿರುವುದಾಗಿ ಸ್ಥಳೀಯರು ಹೇಳುತ್ತಾರೆ.

ಈ ಬೆಳವಣಿಗೆಗಳ ಮಧ್ಯೆಯೇ ಶಿರೂರು ಸ್ವಾಮೀಜಿ ಅವರಿಗೆ ಆಪ್ತರಾಗಿದ್ದ ಮಹಿಳೆಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಆದರೆ, ಈ ವಿಚಾರವಾಗಿ ‘ಪ್ರಜಾವಾಣಿ’ ಜತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಮಹಿಳೆ ವಶಕ್ಕೆ ಪಡೆಯಲಾಗಿದೆ ಎಂಬುದು ಸುಳ್ಳು ಸುದ್ದಿ. ಪ್ರಕರಣದಲ್ಲಿ ಇದುವರೆಗೂ ಯಾರನ್ನೂ ವಶಕ್ಕೆ ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.‌

ಮೂಲಮಠವನ್ನು ಸುಪರ್ದಿಗೆ ತೆಗೆದುಕೊಂಡು, ಶಿರೂರು ಶ್ರೀಗಳ ಸಾವಿನ ಕುರಿತು ತನಿಖೆ ನಡಸಲಾಗುತ್ತಿದೆ. ಪ್ರಕರಣ ತನಿಖಾ ಹಂತದಲ್ಲಿದ್ದು, ಹೆಚ್ಚಿನ ಮಾಹಿತಿ ಬಹಿರಂಗಪಡಿಸುವಂತಿಲ್ಲ. ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆಯಷ್ಟೆ. ಯಾರನ್ನೂ ಬಂಧಿಸಿಲ್ಲ ಎಂದು ಎಸ್‌ಪಿ ತಿಳಿಸಿದರು.

‘ತನಿಖೆ ಚುರುಕು‘

ಶಿರೂರು ಶ್ರೀಗಳ ಸಾವಿನ ತನಿಖೆ ಚುರುಕುಗೊಳಿಸಿರುವ ಪೊಲೀಸರು ಮಠದಲ್ಲಿದ್ದ ನಾಲ್ವರು ಸಿಬ್ಬಂದಿ ಹಾಗೂ ಕೆಲವು ಆಪ್ತರನ್ನು ಕರೆಸಿ ವಿಚಾರಣೆಗೊಳಪಡಿಸಿದ್ದಾರೆ ಎನ್ನಲಾಗಿದೆ. ಮಠದಲ್ಲಿ ವಿಶೇಷ ಕಾರ್ಯಕ್ರಮಗಳಿದ್ದಾಗ, ಅತಿಥಿಗಳು ಬಂದಾಗ ಅಡುಗೆ ಮಾಡಲು ಬರುತ್ತಿದ್ದ ಬಾಣಸಿಗನನ್ನೂ ವಿಚಾರಣೆಗೊಳಪಡಿಸಲಾಗಿದೆ. ಇದೇ 16ರಂದು ರಾತ್ರಿ ಶ್ರೀಗಳು ಸೇವಿಸಿದ್ದ ಆಹಾರ ವಿಷಾಹಾರವಾಗಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

‘ಆಭರಣ ಪ್ರಿಯ ಶಿರೂರು ಶ್ರೀ’

ಶಿರೂರು ಶ್ರೀಗಳಿಗೆ ಇದ್ದ ಭಿನ್ನ ಆಸಕ್ತಿಗಳಲ್ಲಿ ಆಭರಣ ಧರಿಸುವುದೂ ಒಂದಾಗಿತ್ತು. ಶ್ರೀಗಳ ಬಳಿ ದಪ್ಪನಾದ ಚಿನ್ನದ ಕೈಕಡಗಗಳು, ದೇವರ ಮುಖವರ್ಣಿಕೆ ಇರುವ ಪದಕದ ಹಾರಗಳು, ತುಳಸಿಮಣಿ ಸರ, ಉಂಗುರಗಳಿದ್ದವು. ವಿಶೇಷವಾಗಿ ದೇವರ ಪೂಜೆ ಮಾಡುವಾಗ ಮೈತುಂಬ ಬಂಗಾರ ಹಾಕಿಕೊಳ್ಳುತ್ತಿದ್ದರು ಎನ್ನುತ್ತದೆ ಅವರ ಆಪ್ತವಲಯ.

ಬಂಗಾರದ ಜತೆಗೆ ಕಾರು ಚಲಾಯಿಸುವ ಹವ್ಯಾಸವವನ್ನು ಬೆಳೆಸಿಕೊಂಡಿದ್ದ ಶ್ರೀಗಳು, ಗೋವಾ ರಾಜ್ಯದ ನೋಂದಣಿ ಸಂಖ್ಯೆಯ ದುಬಾರಿ ಬೆಲೆಯ ಪಜೆರೊ ಕಾರನ್ನು ಇಟ್ಟುಕೊಂಡಿದ್ದರು. ಸ್ವತಃ ತಾವೇ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದರು. ಅನಾರೋಗ್ಯಕ್ಕೀಡಾದ ದಿನವೂ ಅವರೇ ಕಾರು ಚಲಾಯಿಸಿಕೊಂಡು ಹೋಗಿದ್ದರು ಎನ್ನುತ್ತಾರೆ ಆಪ್ತರು.

‘ಪೇಜಾವರ ಶ್ರೀಗಳ ಹೇಳಿಕೆ ವಿವಾದ‌’

ಶುಕ್ರವಾರ ಪೇಜಾವರ ಶ್ರೀಗಳು ಸುದ್ದಿಗೋಷ್ಠಿ ಕರೆದು, ಶಿರೂರು ಶ್ರೀಗಳ ಸಾವಿಗೆ ಮಹಿಳೆಯರ ನಡುವಿನ ಜಗಳವೂ ಕಾರಣ ಇರುವ ಊಹಾಪೋಹಗಳಿವೆ ಎಂಬ ಗಂಭೀರ ಆರೋಪ ಮಾಡಿದ್ದರು. ಶಿರೂರು ಶ್ರೀಗಳಿಗೆ ಮೊದಲು ಮಹಿಳೆಯೊಬ್ಬರ ಜತೆ ಸ್ನೇಹವಿತ್ತು. ಈಗ ಮತ್ತೊಬ್ಬರು ಬಂದು ಸೇರಿಕೊಂಡಿದ್ದಾರೆ. ಅವರಿಬ್ಬರ ನಡುವಿನ ಜಗಳದಿಂದ ಸಾವು ಸಂಭವಿಸಿರಬಹುದು ಎಂಬ ಊಹಾಪೋಹಗಳಿರುವುದಾಗಿ ಹೇಳಿಕೆ ನೀಡಿದ್ದರು. ಇದು ವಿವಾದವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.

ವೈದ್ಯರ ಮಾತು ಅಲಕ್ಷ್ಯ ಮಾಡಿದ್ದು ಸಾವಿಗೆ ಕಾರಣವಾ?

ಉಡುಪಿ:ಶಿರೂರು ಲಕ್ಷ್ಮೀವರ ತೀರ್ಥ ಶ್ರೀಗಳಿಗೆ ಮದ್ಯಪಾನದ ಚಟವಿದ್ದ ಕಾರಣ ಲಿವರ್ ಸಮಸ್ಯೆ ಎದುರಾಗಿತ್ತು. ವೈದ್ಯರ ಎಚ್ಚರಿಕೆಯನ್ನು ನಿರ್ಲಕ್ಷ್ಯ ಮಾಡಿ ಅವರು ಸಾವು ತಂದುಕೊಂಡರು ಎಂದು ಶಿರೂರು ಶ್ರೀಗಳ ಆಪ್ತ ಆಡಿದ್ದೆನ್ನಲಾದ ಆಡಿಯೊ ಬಹಿರಂಗವಾಗಿದೆ.

‘ಹಿಂದೊಮ್ಮೆ ಶಿರೂರು ಶ್ರೀಗಳನ್ನು ಹೈಟೆಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. 2 ತಿಂಗಳು ಚಿಕಿತ್ಸೆ ಪಡೆದುಕೊಂಡಿದ್ದರು. ಪ್ರತಿನಿತ್ಯ ₹ 9 ಸಾವಿರ ಬೆಲೆ ಇಂಜೆಕ್ಷನ್‌ ಕೊಡಬೇಕಿತ್ತು. ಆಗ ಹೇಗೋ ಹುಷಾರಾದರು. ಆಗ ಸ್ವತಃ ವೈದ್ಯರೇ ನನ್ನನ್ನು ಕರೆದು, ಶಿರೂರು ಶ್ರೀಗಳಿಗೆ ಆರೋಗ್ಯದ ಬಗ್ಗೆ ಎಚ್ಚರವಾಗಿರುವಂತೆ ತಿಳಿಸಲು ಹೇಳಿದ್ದರು’ ಎಂದು ಆಡಿಯೊ ಧ್ವನಿ ಕೇಳಿಸಿದೆ.

‘ಪಥ್ಯ ಅನುಸರಿಸಿದರೆ ಇನ್ನೂ ಹೆಚ್ಚು ಕಾಲ ಬದುಕಬಹುದು. ಇಲ್ಲವಾದರೆ, 6 ತಿಂಗಳಿಗೆ ಸತ್ತು ಹೋಗ್ತಾರೆ ಎಂದು ಎಚ್ಚರಿಸಿದ್ದರು. ಕೊನೆಗೆ ವೈದ್ಯರು ಹೇಳಿದ ಹಾಗೆಯೇ ಆಯಿತು’ ಎಂದು ಹೇಳಿರುವ ಆಡಿಯೊ ವಾಟ್ಸ್‌ಆ್ಯಪ್‌ಗಳಲ್ಲಿ ಹರಿದಾಡುತ್ತಿದೆ.‌

ಈ ಆಡಿಯೊದ ಸತ್ಯಾಸತ್ಯತೆ ಸಾಬೀತಾಗಿಲ್ಲ. ಆಡಿಯೊದಲ್ಲಿರುವುದು ಶಿರೂರು ಶ್ರೀಗಳ ಶಿಷ್ಯನಾ ಅಥವಾ ಬೇರೆಯವರಾ ಎಂಬುದೂ ಖಚಿತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT