ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಕ್ಷ್ಮ ಮತಗಟ್ಟೆ ವಿವರ ಕೇಳಿ ಶೋಭಾ ಪತ್ರ? ಸಿದ್ದರಾಮಯ್ಯ ಆಕ್ಷೇಪ, ಕ್ರಮಕ್ಕೆ ಆಗ್ರಹ

Published 27 ಏಪ್ರಿಲ್ 2023, 10:30 IST
Last Updated 27 ಏಪ್ರಿಲ್ 2023, 10:30 IST
ಅಕ್ಷರ ಗಾತ್ರ

ಬೆಂಗಳೂರು: ಸೂಕ್ಷ್ಮ ಮತಗಟ್ಟೆಗಳ ವಿವರ ಕೇಳಿ ಬಿಜೆಪಿಯ ಪದಾಧಿಕಾರಿಗಳು, ಅಭ್ಯರ್ಥಿಗಳಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬರೆದಿದ್ದಾರೆ ಎನ್ನಲಾದ ಪತ್ರವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಈ ಕುರಿತು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳ ವಿವರ ಸಲ್ಲಿಸುವಂತೆ ಬಿಜೆಪಿಯ ಜಿಲ್ಲಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟ್‌ಗಳಿಗೆ ಶೋಭಾ ಕರಂದ್ಲಾಜೆ ಅವರು ತಮ್ಮ ಲೆಟರ್‌ ಹೆಡ್‌ನಲ್ಲಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ದಿನಾಂಕ ಮತ್ತು ಸ್ಥಳದ ಉಲ್ಲೇಖವಿಲ್ಲದ ಪತ್ರದಲ್ಲಿ, ‘ಯಾವ ಯಾವ ಮತಗಟ್ಟೆಗಳನ್ನು ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಎಂದು ಘೋಷಿಸಬೇಕು, ಯಾವ ಭಾಗಗಳಲ್ಲಿ ಕೇಂದ್ರ ಸೇನಾಪಡೆಗಳು ಅಥವಾ ಅರೇ ಸೇನಾಪಡೆ ತುಕಡಿಗಳನ್ನು ನಿಯೋಜಿಸಬೇಕು, ಯಾವ ಯಾವ ಮತಗಟ್ಟೆಗಳಿಗೆ ವೆಬ್ ಕಾಸ್ಟಿಂಗ್ ಮತ್ತು ವಿಡಿಯೋ ರೆಕಾರ್ಡಿಂಗ್ ಸೇವೆ ಅಗತ್ಯವಿದೆ’ ಎಂಬ ಮಾಹಿತಿ ಕೇಳಲಾಗಿದೆ.

ಮಾಹಿತಿಯನ್ನು bjponline@gmail.com, bjplegalcell.2023@gmail.com ಈ ಮೇಲ್‌ಗೆ ಕಳುಹಿಸಲು ಕೋರಿರುವ ಅವರು, ತಡವಾದರೆ ಪಟ್ಟಿಯಲ್ಲಿ ಸೇರಿಸುವುದು ಕಷ್ಟ ಎಂದು ಎಚ್ಚರಿಸಿದ್ದಾರೆ.

ಮಾಹಿತಿ ಸಂಗ್ರಹಿಸುತ್ತಿರುವುದನ್ನು ಆಕ್ಷೇಪಿಸಿರುವ ಸಿದ್ದರಾಮಯ್ಯ, ‘ರಾಜ್ಯದಲ್ಲಿ ಚುನಾವಣೆ ನಡೆಸುತ್ತಿರುವುದು ಚುನಾವಣಾ ಆಯೋಗವೋ? ಭಾರತೀಯ ಜನತಾ ಪಕ್ಷವೋ? ಬಿಜೆಪಿ ಪದಾಧಿಕಾರಿಗಳು ನಿರ್ಧರಿಸಲಿರುವುದು ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನೋ? ಬಿಜೆಪಿ ಪರ ಮತ್ತು ವಿರೋಧಿ ಮತದಾರರು ಇರುವ ಮತಗಟ್ಟೆಗಳನ್ನೋ? ತಮ್ಮ ಪಕ್ಷದ ಪರವಾಗಿಲ್ಲದ ಮತದಾರರು ಇರುವ ಮತಗಟ್ಟೆಗಳಲ್ಲಿ‌ ಭದ್ರತೆಯ ನೆಪದಲ್ಲಿ ಕೇಂದ್ರ ಸೇನಾಪಡೆಗಳನ್ನು ನಿಯೋಜಿಸಿ ಮತದಾರರನ್ನು ಬೆದರಿಸಿ ಅವರು ಮತದಾನ ಮಾಡದಂತೆ ತಡೆಯುವುದು ಈ ಪತ್ರದ ದುರುದ್ದೇಶವಾಗಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಚುನಾವಣಾ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡುವ ಹೊಣೆ ಚುನಾವಣಾ ಆಯೋಗದಲ್ಲವೇ? ಇದನ್ನು ನಡೆಸಲು ರಾಜಕೀಯ ಪಕ್ಷಕ್ಕೆ ಅನುಮತಿ ಕೊಟ್ಟವರು ಯಾರು? ಕೇಂದ್ರ ಸಚಿವೆ ಶೋಭಾ ಅವರೇ ಈ ಪತ್ರ ಬರೆದಿರುವುದನ್ನು ನೋಡಿದರೆ ಕೇಂದ್ರ ಕೇಂದ್ರ ಸರ್ಕಾರವೇ ಈ ಅಕ್ರಮ ಚಟುವಟಿಕೆಯಲ್ಲಿ ಶಾಮೀಲಾಗಿರುವುದು ಸ್ಪಷ್ಟವಾಗಿದೆ’ ಎಂದು ಅವರು ಹೇಳಿದ್ದಾರೆ.

‘ಕೇಂದ್ರ ಚುನಾವಣಾ ಆಯುಕ್ತರು ತಕ್ಷಣ ಮಧ್ಯೆಪ್ರವೇಶಿಸಿ ಸಚಿವೆ ಶೋಭಾ ಅವರನ್ನು ವಿಚಾರಣೆಗೊಳಪಡಿಸಿ ಅವರು ಯಾವುದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಂತೆ ನಿಷೇಧಿಸಬೇಕು. ಅವರು ಪಕ್ಷದ ನಾಯಕರು ಮತ್ತು ಅಭ್ಯರ್ಥಿಗಳಿಂದ ಪಡೆದಿರುವ ಮಾಹಿತಿಯನ್ನು ವಶಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದ್ದಾರೆ.

ಶೋಭಾ ಕರಂದ್ಲಾಜೆ ಬರೆದಿದ್ದಾರೆ ಎನ್ನಲಾದ ಪತ್ರ

ಶೋಭಾ ಕರಂದ್ಲಾಜೆ ಪತ್ರ
ಶೋಭಾ ಕರಂದ್ಲಾಜೆ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT