ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ | ಮೇವು ಕೊರತೆ: ಕರು ಸಹಿತ ಹಸುಗಳ ಮಾರಾಟ

Published 1 ಮೇ 2024, 23:39 IST
Last Updated 1 ಮೇ 2024, 23:39 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಬರದ ಬೇಗೆ ತೀವ್ರವಾಗಿದ್ದು, ಹಸು, ಕರು, ಆಡು ಕುರಿಗಳಿಗೆ ಮೇವು ಸಂಗ್ರಹಿಸುವುದೇ ಸಾಕಣೆದಾರರಿಗೆ ಸವಾಲಾಗಿ ಪರಿಣಮಿಸಿದೆ. 

ಜಾನುವಾರುಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಮೇವು ಸಂಗ್ರಹಿಸಲು ಸಾಧ್ಯವಾಗದೆ ಹೈನುಗಾರರು ಜಾನುವಾರುಗಳನ್ನು ಮಾರಾಟ ಮಾಡಲು ಆರಂಭಿಸಿದ್ದಾರೆ.

ತಾಲ್ಲೂಕಿನ ತೆರಕಣಾಂಬಿ ಹಾಗೂ ಬೇಗೂರಿನಲ್ಲಿ ನಡೆಯುವ ಜಾನುವಾರುಗಳ ಸಂತೆಗೆ ಮಾರಾಟಕ್ಕಾಗಿ ಜಾನುವಾರುಗಳನ್ನು ತರುವವರ ಸಂಖ್ಯೆ ಹೆಚ್ಚಾಗಿದೆ.

‘ಸಾಮಾನ್ಯವಾಗಿ ರೈತರು ಈ ಸಂತೆಗಳಿಗೆ ಹಾಲು ಕರೆಯುವುದನ್ನು ನಿಲ್ಲಿಸಿರುವ, ವಯಸ್ಸಾದ ಜಾನುವಾರುಗಳನ್ನು ತರುತ್ತಾರೆ. ಆದರೆ, ಈ ಬಾರಿ ಕರು ಸಮೇತ ಹಾಲು ನೀಡುವ ಹಸುಗಳನ್ನೂ ತರುತ್ತಿದ್ದಾರೆ’ ಎಂದು ಹೇಳುತ್ತಾರೆ ದಲ್ಲಾಳಿಗಳು. 

ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಹಲವು ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ನಡೆಸುತ್ತಾರೆ. ಕೆಲವರು ಹೈನುಗಾರಿಕೆಯನ್ನಷ್ಟೇ ಕಸುಬನ್ನಾಗಿ ಮಾಡಿಕೊಂಡಿದ್ದಾರೆ. ಜಮೀನು, ಕೊಳವೆ ಬಾವಿ ಇದ್ದವರು ಮೇವನ್ನು ಬೆಳೆಸಿದ್ದಾರೆ. ಆದರೆ ಸ್ವಂತ ಭೂಮಿ ಇಲ್ಲದೆ ಜಾನುವಾರು ಸಾಕಾಣೆ ಮಾಡುವವರು ಹೆಚ್ಚು ಕಷ್ಟಪಡುತ್ತಿದ್ದಾರೆ. 

ಐದಾರು ಕಿ.ಮೀ.ವರೆಗೆ ಕಾಲ್ನಡಿಗೆಯಲ್ಲಿ ಕ್ರಮಿಸಿ, ಜಾನುವಾರುಗಳನ್ನು ಸಾಕದ ಕೃಷಿಕರ ಜಮೀನುಗಳಿಂದ ಮೇವು ತರಬೇಕಿದೆ. ಇಲ್ಲವಾದರೆ ಹಣಕೊಟ್ಟು ಮೇವು ಖರೀದಿಸಬೇಕಾದ ಪರಿಸ್ಥಿತಿ ಇದೆ. ಹಿಂದೆಲ್ಲ ಉಚಿತವಾಗಿ ಸಿಗುತ್ತಿದ್ದ ಕಬ್ಬಿನ ಸೋಗೆಗೂ ಈಗ ಹಣ ನೀಡಬೇಕಾಗಿದೆ. 

‘ಬರಗಾಲದಿಂದಾಗಿ ದನ–ಕರುಗಳನ್ನು ಸಾಕುವುದು ತೀರಾ ಕಷ್ಟವಾಗುತ್ತಿದೆ. ನಮಗೆ ಸ್ವಂತ  ಭೂಮಿ ಇಲ್ಲ. ಬೇರೆಯವರ ಜಮೀನಿನ ಮೇವು ನಂಬಿ ಜಾನುವಾರು ಸಾಕಾಣಿಕೆ ಮಾಡುತ್ತಿದ್ದೇವೆ. ಈ ವರ್ಷ ಮೇವಿನ ಕೊರತೆಯಿಂದ ಕೆಲವು ಹಸುಗಳನ್ನು ಅನಿವಾರ್ಯವಾಗಿ ಮಾರಾಟ ಮಾಡಿದ್ದೇವೆ’ ಎಂದು ತಾಲ್ಲೂಕಿನ ಮೇಲುಕಾಮನಹಳ್ಳಿಯ ಕೃಷ್ಣಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. 

ಮೇವಿನ ಕೊರತೆ ಗಮನಕ್ಕೆ ಬರುತ್ತಲೇ ಪಶುಪಾಲನಾ ಇಲಾಖೆಯು ಎರಡು ದಿನಗಳ ಕಾಲ ಎಪಿಎಂಸಿಯಲ್ಲಿ ಮೇವು ವಿತರಣೆ ಮಾಡಿತ್ತು. ಆದರೆ, ಅದು ಸಾಕಾಗಿಲ್ಲ. 

ಈ ಬಗ್ಗೆ ಪ್ರತಿಕ್ರಿಯಿಸಿದ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್‌ ಕುಮಾರ್‌, ‘ಮೇವಿನ ಕೊರತೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ತಾಲ್ಲೂಕಿನಲ್ಲಿ ಎಷ್ಟು ಪ್ರಮಾಣದಲ್ಲಿ ಮೇವಿನ ಕೊರತೆ ಇದೆ ಎಂಬುದನ್ನು ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗಿದೆ’ ಎಂದರು. 

ಮೇವು ಕೇಂದ್ರ ತೆರೆಯಲು ಆಗ್ರಹ

‘ಗ್ರಾಮೀಣ ಪ್ರದೇಶಗಳಲ್ಲಿ ಹಸುಗಳನ್ನು ಸಾಕಲು ಸಾಧ್ಯವಾಗದೆ ಕೆಲವನ್ನು ಮಾರಾಟ ಮಾಡಿ ಸಿಕ್ಕಿದ ಹಣದಿಂದ  ಮೇವು ಖರೀದಿ ಮಾಡುತ್ತಿದ್ದಾರೆ. ತಾಲ್ಲೂಕಿನಲ್ಲಿ ಮೇವು ಕೇಂದ್ರ ತೆರೆಯದಿದ್ದಲ್ಲಿ ಹೈನುಗಾರಿಕೆ ನಂಬಿ ಜೀವನ ನಡೆಸುವವರು ಪಶುಪಾಲನೆ ಇಲಾಖೆ ಕಚೇರಿ ತಾಲ್ಲೂಕು ಕಚೇರಿಗೆ ಬಂದು ಪ್ರತಿಭಟನೆ ನಡೆಸುತ್ತೇವೆ’ ಎಂದು ರೈತ ಮುಖಂಡ ಶಿವಪುರ ಮಹದೇವಪ್ಪ ಎಚ್ಚರಿಸಿದರು.  ‘ಇಲಾಖೆಯು ಜಾನುವಾರಗಳ ಮಾರಾಟ ಮತ್ತು ಹಾಲು ಉತ್ಪಾದನೆ ಇಳಿಕೆಯ ಮಾನದಂಡದ ಆಧಾರದ ಮೇಲೆ ಮೇವಿನ ಕೊರತೆಯನ್ನು ವ್ಯಾಖ್ಯಾನಿಸುತ್ತದೆ. ಆದರೆ ರೈತರು ಜಾನುವಾರುಗಳನ್ನು ಹಸಿವಿನಿಂದ ಇರಲು ಬಿಡುವುದಿಲ್ಲ. ಸಾಲ ಮಾಡಿ  ಚಿನ್ನ ಅಡವಿಟ್ಟು ಮೇವು ಖರೀದಿ ಮಾಡುತ್ತಿದ್ದಾರೆ’ ಎಂದು ಕಲ್ಲಿಗೌಡನಹಳ್ಳಿ ಗ್ರಾಮದ ಬಸವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT