ಬೆಂಗಳೂರು: ಬಿಜೆಪಿ ಸರ್ಕಾರ ರಾಜ್ಯದ ಆರ್ಥಿಕ ಸ್ಥಿತಿಯನ್ನು ಹಾಳು ಮಾಡಿದೆ. ಇವರ ಕೆಟ್ಟ ಆಡಳಿತದ ಪರಿಣಾಮ ಆರ್ಥಿಕತೆ ದಿವಾಳಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ವಿಧಾನಸಭೆಯಲ್ಲಿ ಗುರುವಾರ ಉತ್ತರ ನೀಡಿದ ಅವರು, ರಾಜ್ಯದ ಸಾಲ ಹೆಚ್ಚಾಗಲು ಬಿಜೆಪಿಯ ಕೆಟ್ಟ ಆಡಳಿತವೇ ಕಾರಣ ಎಂದು ಕಿಡಿಕಾರಿದರು. ಮುಖ್ಯಮಂತ್ರಿಯವರ ಉತ್ತರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.
ಬಿಜೆಪಿ ಬಡವರ ವಿರೋಧಿ ಆದ್ದರಿಂದ ಕೇಂದ್ರ ಸರ್ಕಾರ ಹೆಚ್ಚುವರಿ 5 ಕೆ.ಜಿ ಅಕ್ಕಿಯನ್ನು ಕೊಡಲಿಲ್ಲ. ಇವರಿಗೆ ಹೊಟ್ಟೆ ಕಿಚ್ಚಾಗಿದೆ. ಕೇಂದ್ರ ಸರ್ಕಾರ ರಾಜ್ಯದಿಂದ ₹4 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುತ್ತಿದೆ. ಆದರೆ, ₹50 ಸಾವಿರ ಕೋಟಿ ಮಾತ್ರ ಕೊಡುತ್ತಿದೆ. ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಟೀಕಿಸಿದರು.
ಸಾರಿಗೆ ಸಂಸ್ಥೆಗಳ ಆದಾಯ ಹೆಚ್ಚಳ
ಶಕ್ತಿ ಯೋಜನೆ ಜಾರಿಗೆ ತಂದ ಬಳಿಕ ಸಾರಿಗೆ ಸಂಸ್ಥೆಗಳ ಆದಾಯ ಹೆಚ್ಚಳವಾಗಿದೆ. ಈ ಯೋಜನೆಯಿಂದ ರಾಜ್ಯದ ಎಲ್ಲ ಹೆಣ್ಣು ಮಕ್ಕಳು ಖುಷಿಯಾಗಿದ್ದಾರೆ. ಆದರೆ ಬಿಜೆಪಿಯವರಿಗೆ ಮಾತ್ರ ಅಸಂತೋಷವಾಗಿದೆ. ಹೀಗಾಗಿ ಹುಯಿಲೆಬ್ಬಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಮಹಿಳೆಯರು ಹೆಚ್ಚು ಓಡಾಡುವುದರಿಂದಲೇ ಆದಾಯ ಹೆಚ್ಚಾಗಿದೆ. ಇದಕ್ಕೆ ಎಷ್ಟೇ ಹಣ ಖರ್ಚಾದರೂ ಸರಿ ಕೊಡಲು ನಾವು ತಯಾರಿದ್ದೇವೆ ಎಂದರು.
ಪ್ರತಿದಿನ ಸರಾಸರಿ 49.06 ಲಕ್ಷ ಮಹಿಳೆಯರು ಪ್ರಯಾಣಿಸುತ್ತಿದ್ದಾರೆ. ಒಟ್ಟು 18 ಕೋಟಿ ಮಹಿಳೆಯರು ಈವರೆಗೆ ಪ್ರಯಾಣ ಮಾಡಿದ್ದಾರೆ. ದೇವಸ್ಥಾನಗಳು, ಸ್ನೇಹಿತರ ಮನೆ, ತವರು ಮನೆಗಳಿಗೆ ಹೋಗುತ್ತಿದ್ದಾರೆ. ಇದರಿಂದ ಇವರಿಗೆ ಹಣ ಉಳಿಯುತ್ತದೆ. ಅದನ್ನು ಬೇರೆ ಖರ್ಚುಗಳಿಗೆ ಬಳಸಬಹುದು. ಇದರಿಂದ ಆರ್ಥಿಕತೆ ಚುರುಕಾಗುತ್ತದೆ. ಇದು ಸಬಲೀಕರಣವಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ವಿವಿಧ ಗ್ಯಾರಂಟಿಗಳಿಗೆ ಹಣ ಹೊಂದಿಸುವ ಉದ್ದೇಶದಿಂದ ಅಬಕಾರಿ, ನೋಂದಣಿ ಮುದ್ರಾಂಕ, ಮೋಟಾರು ವಾಹನಗಳ ತೆರಿಗೆ ಹೆಚ್ಚಿಸಬೇಕಾಯಿತು. ಬೇರೆ ದಾರಿ ಇಲ್ಲ. ಬಡವರು, ಕೆಳ ಮಧ್ಯಮ ವರ್ಗದವರಿಗೆ ಹೊರೆ ಆಗದಂತೆ ತೆರಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.