ಸೋಮವಾರ, 11 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಬೆಲೆ ಏರಿಕೆ ಪ್ರಶ್ನಿಸದ ಬಿಜೆಪಿ ಸಂಸದರ ವಿರುದ್ಧ ಸಿದ್ದರಾಮಯ್ಯ ಕಿಡಿ

ಬಿಜೆಪಿ ಸಂಸದರದ್ದು ಗುಲಾಮಿ ಮನಸ್ಥಿತಿ ಎಂದು ವಾಗ್ದಾಳಿ ನಡೆಸಿದ ವಿರೋಧ ಪಕ್ಷದ ನಾಯಕ
Last Updated 20 ಮೇ 2021, 3:19 IST
ಅಕ್ಷರ ಗಾತ್ರ

ಬೆಂಗಳೂರು: ‘ರಸ ಗೊಬ್ಬರ ಬೆಲೆ ಏರಿಕೆಯ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸದ ರಾಜ್ಯ ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಬಿಜೆಪಿ ಸಂಸದರು ಹೇಡಿಗಳು, ಗುಲಾಮೀ ಮನಸ್ಥಿತಿಯವರು. ಇವರು ರಾಜ್ಯಕ್ಕೆ ಅಷ್ಟೆ ಅಲ್ಲ. ಭೂಮಿಗೇ ಭಾರ. ಇವರನ್ನು ಮೊದಲು ಕಿತ್ತೆಸೆಯದಿದ್ದರೆ ದೇಶ. ಜಗತ್ತಿನಲ್ಲಿ ತಲೆ ಎತ್ತಿ ನಡೆಯಲಾಗದ ಸ್ಥಿತಿಗೆ ತಲುಪುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮಾಧ್ಯಮ ಪ್ರಕಟಣೆ ಹೊರಡಿಸಿರುವ ಸಿದ್ದರಾಮಯ್ಯ, ‘ರಸ ಗೊಬ್ಬರಕ್ಕೆ ಈ ಬಾರಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ₹ 54,417 ಕೋಟಿ ಸಬ್ಸಿಡಿ ಕಡಿಮೆ ಮಾಡಿದೆ. ಕಳೆದ ವರ್ಷ ₹ 1,33,947 ಕೋಟಿ ಸಬ್ಸಿಡಿ ನೀಡಲಾಗಿತ್ತು. ಅದನ್ನು ಶೇ 40.62ರಷ್ಟು(₹ 7,9530 ಕೋಟಿ) ಕಡಿಮೆ ಮಾಡಿದ್ದಾರೆ. ಆದ್ದರಿಂದ ಏಪ್ರಿಲ್ 1ರಿಂದ ರಸಗೊಬ್ಬರ ಬೆಲೆ ಹೆಚ್ಚಾಗಿದೆ’ ಎಂದಿದ್ದಾರೆ

‘ಯಾವ ದೃಷ್ಟಿಯಿಂದ ನೋಡಿದರೂ ಇದು ಬಡವರ, ರೈತರ, ಹಿಂದುಳಿದವರ, ದಲಿತರ, ಮಹಿಳೆಯರ, ಮಕ್ಕಳ ಪರವಾದ ಸರ್ಕಾರವಲ್ಲ. ಮೋದಿಯವರ ಭಾಷಣಗಳು ಹೂರಣ ಇಲ್ಲದ ಹೋಳಿಗೆಯಂತೆ, ಕಡುಬಿನಂತೆ. ಅವರು ಬರೀ ಸುಳ್ಳು ಹೇಳುತ್ತಾರೆ. ಅಲಂಕಾರಕ್ಕೆ ಬಳಸುವ ಪ್ಲಾಸ್ಟಿಕ್ ಹೂವನ್ನೇ ನಿಜವಾದ ಹೂವು ಅನ್ನುತ್ತಾರೆ. ನಮ್ಮ ಕೆಲವು ಮಾಧ್ಯಮಗಳೂ ಅಷ್ಟೆ ಮೋದಿಯವರು ಕಾಗೆ ಬೆಳ್ಳಗಿದೆ ಎಂದರೆ, ಇವರು ಹೌದು ನಾವು ನೋಡಿದೆವು. ಕಾಗೆ ಬೆಳ್ಳಗಿದೆ ಎಂದು ಮಾತನಾಡುತ್ತಾರೆ. ಇಂಥ ಮನೆಹಾಳು, ಜನದ್ರೋಹಿ ಸರ್ಕಾರಗಳನ್ನು ನನ್ನ ಜೀವಮಾನದಲ್ಲಿ ನೋಡಿರಲಿಲ್ಲ’ ಎಂದಿದ್ದಾರೆ.

‘ಬಿಕ್ಕಟ್ಟಿನ ಬೆಂಕಿಯಲ್ಲಿ ಬೇಯುವಾಗ ನಮ್ಮ ರೈತರು ಕಷ್ಟಪಟ್ಟು ದುಡಿದು ಈ ವರ್ಷ ದೇಶವನ್ನು ಉಳಿಸಿದ್ದರು. ಕೃಷಿಯು ರಾಜ್ಯದಲ್ಲಿ ಶೇ 6.4ರಷ್ಟು ಪ್ರಗತಿ ಕಂಡಿದೆ. ದೇಶದಲ್ಲಿ ಶೇ 3.4ಕ್ಕೂ ಹೆಚ್ಚು ಬೆಳವಣಿಗೆ ಕಂಡಿದೆ. ದೇಶದ ಜಿಡಿಪಿಗೆ ಈ ವರ್ಷ ಶೇ 20ರಷ್ಟು ಕೊಡುಗೆಯನ್ನು ಕೃಷಿ ಕೊಟ್ಟಿದೆ. ಇಂಥ ಸಂದರ್ಭದಲ್ಲಿ ಈ ಮನೆಹಾಳು ಮೋದಿ ಸರ್ಕಾರ, ರಸಗೊಬ್ಬರದ ಬೆಲೆಯನ್ನು ಶೇ 60ರಷ್ಟು ಹೆಚ್ಚಿಸಿದೆ. ಡಿ.ಎ.ಪಿ ಗೊಬ್ಬರ ಏಪ್ರಿಲ್ 1ರಿಂದ ಕ್ವಿಂಟಲಿಗೆ ₹ 1,400ಗಳಷ್ಟು ಬೆಲೆ ಜಾಸ್ತಿಯಾಗಿದೆ. ಇದುವರೆಗೆ ₹ 2,400 ಇದ್ದ ಬೆಲೆ ಈಗ ₹ 3,800 ಆಗಿದೆ. ಎನ್.ಪಿ.ಕೆ (ಸಾರಜನಕ, ರಂಜಕ ಮತ್ತು ಪೊಟ್ಯಾಷ್) ಗಳ ಮೇಲಿನ ಬೆಲೆ ಒಂದು ಕ್ವಿಂಟಲ್‌ಗೆ ₹ 1,250 ಹೆಚ್ಚಳವಾಗಿದೆ. ಇದುವರೆಗೆ ₹ 2,350ಗೆ ಸಿಗುತ್ತಿದ್ದ ಗೊಬ್ಬರ ಈಗ ₹ 3,600 ಆಗಲಿದೆ. ಕೇಂದ್ರ ಸರ್ಕಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಜಾಸ್ತಿಯಾಗಿದೆ ಎನ್ನುತ್ತಿದೆ. ಅದಕ್ಕೆ ಬೆಲೆ ಜಾಸ್ತಿ ಮಾಡಿದ್ದೇವೆ ಎನ್ನುತ್ತಾರೆ. ಇದು ಶುದ್ಧ ಸುಳ್ಳು’ ಎಂದಿದ್ದಾರೆ.

‘ದೇಶ ಭೀಕರ ಹತಾಶೆಯಲ್ಲಿದೆ. ದೇಶದ ಎಲ್ಲ ರಂಗಗಳೂ ಮಕಾಡೆ ಮಲಗಿವೆ. ದೇಶದ ಸರ್ಕಾರಿ ಖಜಾನೆ ಖಾಲಿಯಾಗುತ್ತಿದೆ. ಆದರೆ ಅದಾನಿ, ಅಂಬಾನಿ ಮುಂತಾದವರ ಖಜಾನೆಯು ತುಂಬಿ ತುಳುಕುತ್ತಿದೆ. ಕೋವಿಡ್ ಬಿಕ್ಕಟ್ಟಿನಲ್ಲೂ ₹ 12 ಲಕ್ಷ ಕೋಟಿಗೂ ಹೆಚ್ಚು ಸಂಪತ್ತು ವೃದ್ಧಿಯಾಗಿದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT