ಬೆಂಗಳೂರು: ‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಪ್ರಕ್ರಿಯೆ ನಡೆಯುತ್ತಿದೆ. ಸಿದ್ದರಾಮಯ್ಯ ಅವರು ಸಂಗೊಳ್ಳಿ ರಾಯಣ್ಣನ ಉದಾಹರಣೆ ಮೂಲಕ ಬೆನ್ನಿಗೆ ಚೂರಿ ಹಾಕಲಾಗುತ್ತಿದೆ ಎಂದು ಎರಡು ಬಾರಿ ಹೇಳಿದ್ದಾರೆ. ಅವರ ಪಕ್ಷದವರೇ ಅವರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮುಡಾ ಪ್ರಕರಣದಲ್ಲಿ ನಾವ್ಯಾರೂ ಆರ್‌ಟಿಐ ಅರ್ಜಿ ಹಾಕಿಲ್ಲ. ಅವರ ಪಕ್ಷದವರೇ ಎಲ್ಲ ದಾಖಲೆಗಳನ್ನು ಹೊರಗೆ ತಂದಿದ್ದಾರೆ. ಮ್ಯೂಸಿಕಲ್ ಚೇರ್ ಮಾಡುತ್ತಿರುವವರು ಪಟಾಕಿ ಇಡುತ್ತಿದ್ದಾರೆ. ಅವರು ಪಟಾಕಿ ಹೊಡೆದಾಗ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕಾಗುತ್ತದೆ’ ಎಂದರು.
ರಾಜ್ಯದಲ್ಲಿ 60 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸುವ ತಯಾರಿ ನಡೆದಿದೆ. ಇದರಿಂದ ಸರ್ಕಾರಕ್ಕೆ ಹಣ ಉಳಿತಾಯವಾಗಲಿದೆ. ಈಗಾಗಲೇ ಬಿಪಿಎಲ್ ಕಾರ್ಡ್‌ದಾರರಿಗೆ ಅಧಿಕಾರಿಗಳು ಕಿರುಕುಳ ನೀಡಲಾರಂಭಿಸಿದ್ದಾರೆ. ಇದಕ್ಕಾಗಿ ಖಾಸಗಿ ಏಜೆನ್ಸಿ ನೇಮಕ ಮಾಡಿ, ಆ ಮೂಲಕ ಕಾರ್ಡ್ ರದ್ದುಪಡಿಸಿ ಗ್ಯಾರಂಟಿಗೆ ಹಣ ಉಳಿಸಲಾಗುತ್ತಿದೆ. ಜನರಿಗೆ ಗೊತ್ತಾಗದಂತೆ ತೆರಿಗೆ ವಿಧಿಸುವುದು ಹೇಗೆಂದು ತಂತ್ರ ಮಾಡಲು ಸಮಿತಿ ನೇಮಿಸಲಾಗಿದೆ. ಇದರ ವಿರುದ್ಧ ಬಿಜೆಪಿ ಹೋರಾಡಲಿದೆ ಎಂದು ಅಶೋಕ ಹೇಳಿದರು.
‘ಈಗಾಗಲೇ ಹಿಮಾಚಲ ಪ್ರದೇಶ ಇಂತಹದ್ದೇ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ದುಸ್ಥಿತಿಗೆ ತಲುಪಿದೆ. ಕರ್ನಾಟಕ ಪಾಪರ್ ಆದರೂ ಪರವಾಗಿಲ್ಲ. ನಮ್ಮ ಬೇಳೆ ಬೇಯಬೇಕು ಎಂದು ಕಾಂಗ್ರೆಸ್ ಯೋಚಿಸಿದೆ. ಅಧಿಕಾರಿಗಳು ಒಂದೋ ಆತ್ಮಹತ್ಯೆ ಮಾಡಿಕೊಳ್ಳಬೇಕು, ಇಲ್ಲವಾದರೆ ಸ್ವಯಂ ನಿವೃತ್ತಿ ಪಡೆಯಬೇಕು ಎಂಬ ಸ್ಥಿತಿ ಇದೆ. ಇಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಬದುಕುವ ಗ್ಯಾರಂಟಿ ಇಲ್ಲ’ ಎಂದು ದೂರಿದರು.