ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಧಿತ ರೈತರನ್ನು ಕೂಡಲೇ ಬಿಡುಗಡೆ ಮಾಡಿ: ಮಧ್ಯಪ್ರದೇಶ ಸಿಎಂಗೆ ಸಿದ್ದರಾಮಯ್ಯ ಮನವಿ

Published 15 ಫೆಬ್ರುವರಿ 2024, 10:24 IST
Last Updated 15 ಫೆಬ್ರುವರಿ 2024, 10:24 IST
ಅಕ್ಷರ ಗಾತ್ರ

ಬೆಂಗಳೂರು: ಭೋಪಾಲ್‌ನಲ್ಲಿ ಬಂಧಿತರಾಗಿರುವ ರಾಜ್ಯದ ರೈತರನ್ನು ಬಿಡುಗಡೆ ಮಾಡುವಂತೆ ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಮನವಿ ಮಾಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಸಿದ್ದರಾಮಯ್ಯ, ‘ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ರಾಜ್ಯದ ರೈತರನ್ನು ಮಧ್ಯಪ್ರದೇಶ ಸರ್ಕಾರ ಬಂಧಿಸಿ ಜೈಲಿನಲ್ಲಿ ಇಟ್ಟಿರುವುದು ಸಂವಿಧಾನ ಬಾಹಿರ ಕ್ರಮ. ನಾಡಿನ ರೈತರನ್ನು ಈ ಕೂಡಲೆ ಬಿಡುಗಡೆ ಮಾಡಬೇಕು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರಿಗೆ ಈ ಮೂಲಕ ಒತ್ತಾಯಿಸುತ್ತಿದ್ದೇನೆ' ಎಂದಿದ್ದಾರೆ.

‘ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧದ ಪ್ರತಿಭಟನೆಯಲ್ಲಿ ಭಾಗವಹಿಸಲು ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಕರ್ನಾಟಕದ ರೈತರ ಗುಂಪನ್ನು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಯಾವುದೇ ಕಾರಣವಿಲ್ಲದೆ ಬಂಧಿಸಲಾಗಿದೆ . ರೈತರನ್ನು ಬಂಧಿಸಿ ನಾಲ್ಕು ದಿನ ಕಳೆದರೂ ಇನ್ನೂ ಬಿಡುಗಡೆ ಮಾಡಿಲ್ಲ' ಎಂದು ಸಿದ್ದರಾಮಯ್ಯ ಯಾದವ್‌ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

'ನಿಮ್ಮ ಪೊಲೀಸ್ ಅಧಿಕಾರಿಗಳು ಅವರನ್ನು(ರೈತರನ್ನು) ವಾರಾಣಸಿಗೆ ಸ್ಥಳಾಂತರಿಸುತ್ತಿದ್ದಾರೆ ಎಂದು ಈಗ ತಿಳಿದುಬಂದಿದೆ . ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಪ್ರಯಾಣಿಸುವುದು ರೈತರ ಸಾಂವಿಧಾನಿಕ ಹಕ್ಕು. ಆದರೆ ಮಧ್ಯಪ್ರದೇಶದ ಪೊಲೀಸ್ ಅಧಿಕಾರಿಗಳು ರೈತರನ್ನು ಬಂಧಿಸಿ ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದು ಅತ್ಯಂತ ದುರದೃಷ್ಟಕರ' ಎಂದು ಸಿಎಂ ಹೇಳಿದ್ದಾರೆ.

ಈ ಬಗ್ಗೆ ಖುದ್ದು ಪರಿಶೀಲನೆ ನಡೆಸಿ, ರೈತರನ್ನು ಸ್ಥಳದಿಂದ ಸ್ಥಳಕ್ಕೆ ಸ್ಥಳಾಂತರಿಸದೆ ಕೂಡಲೇ ಬಿಡುಗಡೆ ಮಾಡುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತರಿಗೆ ಕಾನೂನು ಜಾರಿಗೊಳಿಸಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ರೈತರು ಸರ್ಕಾರದ ಮುಂದಿಟ್ಟಿದ್ದಾರೆ. ಫೆಬ್ರುವರಿ 13ರಂದು ಆರಂಭವಾಗಿರುವ 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ದೇಶದ ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳ ಸಾವಿರಾರು ರೈತರು ದೆಹಲಿಯ ಗಡಿ ಪ್ರದೇಶಗಳಿಗೆ ಬಂದು ಸೇರುತ್ತಿದ್ದಾರೆ.

ಫೆಬ್ರುವರಿ 13ರಂದು ಶಂಭು ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದರು. ಪ್ರತಿಭಟನಾಕಾರರನ್ನು ಚದುರಿಸಲು ಹರಿಯಾಣ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದು, ಹಲವರನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT