ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಿತ್‌ ರೈ ಆಸ್ತಿ ತನಿಖೆಗೆ ಎಸ್‌ಐಟಿ: ಹಗರಣದ ಸ್ವರೂಪ ಪಡೆದ ಭ್ರಷ್ಟಾಚಾರ ಪ್ರಕರಣ

Published 1 ಜುಲೈ 2023, 0:02 IST
Last Updated 1 ಜುಲೈ 2023, 0:02 IST
ಅಕ್ಷರ ಗಾತ್ರ

ಬೆಂಗಳೂರು: ₹500 ಕೋಟಿಗೂ ಹೆಚ್ಚು ಮೌಲ್ಯದ ಬೇನಾಮಿ ಆಸ್ತಿಗಳನ್ನು ಹೊಂದಿರುವ ಆರೋಪದಡಿ ಕೆ.ಆರ್‌.ಪುರ ತಾಲ್ಲೂಕಿನ ಹಿಂದಿನ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ದಾಖಲಿಸಿರುವ ಪ್ರಕರಣದ ತನಿಖೆಗೆ ಲೋಕಾಯುಕ್ತ ಪೊಲೀಸ್‌ ವಿಭಾಗದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಡಿವೈಎಸ್‌‍ಪಿ ಪ್ರಮೋದ್‌ ಕುಮಾರ್‌ ಎಸ್‌ಐಟಿಯ ನೇತೃತ್ವ ವಹಿಸಿದ್ದು, ಅವರೂ ಸೇರಿದಂತೆ ಇಬ್ಬರು ಡಿವೈಎಸ್‌ಪಿ, ನಾಲ್ವರು ಇನ್‌ಸ್ಪೆಕ್ಟರ್‌ಗಳು ತಂಡದಲ್ಲಿದ್ದಾರೆ. ಹಲವು ಇತರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಈ ತಂಡಕ್ಕೆ ನಿಯೋಜಿಸಲಾಗಿದೆ.  ಒಬ್ಬ ವ್ಯಕ್ತಿಯ ಅಕ್ರಮ ಆಸ್ತಿ ಪ್ರಕರಣದ ತನಿಖೆಗೆ ಲೋಕಾಯುಕ್ತದಲ್ಲಿ ಇದೇ ಮೊದಲ ಬಾರಿಗೆ ಎಸ್‌ಐಟಿ ರಚಿಸಲಾಗಿದೆ.

ಅಜಿತ್ ರೈ ಮನೆ ಹಾಗೂ ಅವರ ಬೇನಾಮಿಗಳೆಂದು ಶಂಕಿಸಲಾದ ಹಲವರ ಮನೆಗಳು ಸೇರಿದಂತೆ 11 ಸ್ಥಳಗಳ ಮೇಲೆ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದರು. ಇನ್ನೂ ಶೋಧ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿಲ್ಲ. 150 ಎಕರೆಗೂ ಹೆಚ್ಚು ಜಮೀನು, ದುಬಾರಿ ಬೆಲೆಯ 11 ಐಷಾರಾಮಿ ಕಾರುಗಳು ಸೇರಿದಂತೆ ಸದ್ಯದ ಮಾರುಕಟ್ಟೆ ಬೆಲೆಯಲ್ಲಿ ₹500 ಕೋಟಿಗೂ ಹೆಚ್ಚು ಮೌಲ್ಯದ ಆಸ್ತಿಗಳನ್ನು ಪತ್ತೆಮಾಡಲಾಗಿದೆ. ಆರೋಪಿ ಅಧಿಕಾರಿಯು ಇನ್ನಷ್ಟು ಆಸ್ತಿಗಳನ್ನು ಹೊಂದಿರುವ ಕುರಿತು ಸಾರ್ವಜನಿಕರು ಮಾಹಿತಿ ನೀಡಿದ್ದು, ಆ ಬಗ್ಗೆಯೂ ಪರಿಶೀಲನೆಗೆ ತನಿಖಾ ತಂಡ ಮುಂದಾಗಿದೆ.

‘ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಅಜಿತ್‌ ರೈ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಆದರೆ, ಈಗ ಪ್ರಕರಣವು ಒಂದು ಹಗರಣದ ಸ್ವರೂಪಕ್ಕೆ ತಲುಪಿದೆ. ಬಹು ಆಯಾಮದಲ್ಲಿ ತನಿಖೆ ನಡೆಸುವುದು ಅಗತ್ಯವಿದೆ. ಈ ಕಾರಣದಿಂದ ಎಸ್‌ಐಟಿ ರಚಿಸಲಾಗಿದೆ. ಲೋಕಾಯುಕ್ತದ ಬೆಂಗಳೂರು ನಗರ ಘಟಕದ ಎಸ್‌ಪಿ ಕೆ.ವಿ. ಅಶೋಕ್‌ ಮೇಲುಸ್ತುವಾರಿಯಲ್ಲಿ ಎಸ್‌ಐಟಿ ತನಿಖೆ ನಡೆಸಲಿದೆ’ ಎಂದು ಲೋಕಾಯುಕ್ತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

11 ಸ್ಥಳಗಳಲ್ಲಿ ಶೋಧ ಸಂದರ್ಭದಲ್ಲಿ ಸಾವಿರಾರು ಪುಟಗಳಷ್ಟು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳನ್ನು ಪರಿಶೀಲಿಸಿ, ವಿಂಗಡಿಸುವ ಕೆಲಸವನ್ನು ತನಿಖಾ ತಂಡ ಮಾಡುತ್ತಿದೆ. ಬೇನಾಮಿಗಳ ಜತೆ ಅಜಿತ್‌ ರೈ ನಿಕಟ ನಂಟು ಹೊಂದಿರುವುದಕ್ಕೆ ಹಲವು ಪುರಾವೆಗಳೂ ಲಭಿಸಿವೆ. ಈ ಎಲ್ಲ ದಾಖಲೆಗಳ ಆಧಾರದಲ್ಲಿ ತನಿಖೆಯನ್ನು ಮತ್ತಷ್ಟು ವಿಸ್ತರಿಸಲು ಸಿದ್ಧತೆ ನಡೆದಿದೆ.

ಬೇನಾಮಿದಾರರ ವಿಚಾರಣೆಗೆ ಸಿದ್ಧತೆ: ಆರೋಪಿಯ ಸಹೋದರ ಆಶಿತ್‌ ರೈ, ನಿಕಟವರ್ತಿಗಳಾದ ಗೌರವ್‌ ಶೆಟ್ಟಿ ಮತ್ತು ಕೃಷ್ಣಪ್ಪ ಸೇರಿದಂತೆ ಕೆಲವರ ಹೆಸರಿನಲ್ಲಿ ಹೆಚ್ಚಿನ ಸ್ಥಿರಾಸ್ತಿಗಳಿವೆ. ಬೇನಾಮಿಗಳೆಂದು ಗುರುತಿಸಿರುವ ಎಲ್ಲ ವ್ಯಕ್ತಿಗಳನ್ನೂ ವಿಚಾರಣೆ ನಡೆಸಲು ತನಿಖಾ ತಂಡ ಮುಂದಾಗಿದೆ. ಒಂದೆರಡು ದಿನಗಳಲ್ಲಿ ಎಲ್ಲರಿಗೂ ನೋಟಿಸ್‌ ಜಾರಿ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಒಂದು ಕಾರಿನ ಮೌಲ್ಯವೇ ವೇತನಕ್ಕಿಂತ ದುಬಾರಿ!

ಅಜಿತ್‌ ಕುಮಾರ್‌ ರೈ ತಮ್ಮ ಸೇವಾವಧಿಯಲ್ಲಿ ವೇತನ ಮತ್ತು ಭತ್ಯೆ ರೂಪದಲ್ಲಿ ಒಟ್ಟು ₹1.20 ಕೋಟಿಯಷ್ಟು ಪಡೆದಿದ್ದಾರೆ. ಅವರ ಬಳಿ 11 ದುಬಾರಿ ಬೆಲೆಯ ಕಾರುಗಳು ಪತ್ತೆಯಾಗಿವೆ. ಅವುಗಳಲ್ಲಿ ಲ್ಯಾಂಡ್‌ ಕ್ರೂಸರ್‌ (₹2.5 ಕೋಟಿ) ಒಂದರ ಬೆಲೆಯೇ ಆರೋಪಿಯ ಒಟ್ಟು ವೇತನ ಭತ್ಯೆಯ ಎರಡು ಪಟ್ಟಿಗಿಂತ ಹೆಚ್ಚಾಗಿದೆ ಎಂದು ತನಿಖಾ ಸಂಸ್ಥೆಯ ಮೂಲಗಳು ಹೇಳಿವೆ.

ಏಳು ದಿನ ತನಿಖಾ ತಂಡದ ವಶಕ್ಕೆ

ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಕುರಿತು ಹೆಚ್ಚಿನ ವಿಚಾರಣೆಗಾಗಿ ತಹಶೀಲ್ದಾರ್‌ ಅಜಿತ್‌ ಕುಮಾರ್‌ ರೈ ಅವರನ್ನು ಏಳು ದಿನಗಳ ಕಾಲ ಲೋಕಾಯುಕ್ತ ಪೊಲೀಸರ ವಶಕ್ಕೆ ಒಪ್ಪಿಸಿ ವಿಶೇಷ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಗುರುವಾರ ಅಜಿತ್‌ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ವಿಶೇಷ ನ್ಯಾಯಾಲಯಕ್ಕೆ (ಸಿಸಿಎಚ್‌–78) ಆರೋಪಿಯನ್ನು ಶುಕ್ರವಾರ ಮಧ್ಯಾಹ್ನ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆ ಅಗತ್ಯವಿರುವುದರಿಂದ ಏಳು ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು. ಅದನ್ನು ಮಾನ್ಯ ಮಾಡಿದ ನ್ಯಾಯಾಧೀಶ ಎಸ್‌.ವಿ. ಶ್ರೀಕಾಂತ್‌ ಆರೋಪಿಯನ್ನು ತನಿಖಾ ತಂಡದ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ನಗುತ್ತಲೇ ಇದ್ದ ರೈ: ಶುಕ್ರವಾರ ಬೆಳಿಗ್ಗೆ ಅಜಿತ್‌ ರೈ ಅವರನ್ನು ಲೋಕಾಯುಕ್ತ ಕಚೇರಿಗೆ ಕರೆತಂದು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಲೋಕಾಯುಕ್ತ ಕಚೇರಿಗೆ ಬರುವಾಗ ನ್ಯಾಯಾಲಯಕ್ಜೆ ಹಾಜರಾಗುವಾಗ ಹಿಂತಿರುಗುವಾಗ ಆರೋಪಿ ಅಧಿಕಾರಿ ನಗುಮೊಗದಲ್ಲೇ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT