ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೋಲಿಗ– ಇಂಗ್ಲಿಷ್‌’ ನಿಘಂಟು ಸಿದ್ಧ: ಸಂಶೋಧಕರೊಬ್ಬರ 12 ವರ್ಷದ ಶ್ರಮ

Last Updated 2 ಜುಲೈ 2020, 20:10 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯ ಬಿಳಿಗಿರಿರಂಗನಬೆಟ್ಟದ ಸುತ್ತಮುತ್ತ ವಾಸಿಸುತ್ತಿರುವ ಸೋಲಿಗರು ಬಳಸುವ ಭಾಷೆಗೆ ಸಂಬಂಧಿಸಿದ ನಿಘಂಟು ಸದ್ದಿಲ್ಲದೇ ಸಿದ್ಧವಾಗಿದೆ. ಇದರ ಹಿಂದೆ ವಿದೇಶಿ ಸಂಶೋಧಕರೊಬ್ಬರ ಶ್ರಮವಿದೆ.

ಬೆಟ್ಟದ ಸುತ್ತಮುತ್ತಲಿನ ಪೋಡುಗಳಲ್ಲಿ ವಾಸಿಸುತ್ತಿರುವ ಆರು ಕುಲ ಸೋಲಿಗರು ಮಾತ್ರ ಬಳಸುವ ಪದಗಳನ್ನು ಮ್ಯಾನ್ಮಾರ್‌ನ ಸಂಶೋಧಕ ಡಾ.ಆಂಗ್‌ ಸಿ ಎಂಬುವವರು ಸಂಗ್ರಹಿಸಿ, ಈ ಶಬ್ದಕೋಶವನ್ನು ಸಿದ್ಧಪಡಿಸಿದ್ದಾರೆ.

455 ಪುಟಗಳ ಈ ನಿಘಂಟಿನಲ್ಲಿ 1,500ಕ್ಕೂ ಹೆಚ್ಚು ಸೋಲಿಗ ಪದಗಳಿವೆ. ಆ ಪದಗಳನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದ್ದು, ಅದಕ್ಕೆ ಇಂಗ್ಲಿಷ್‌ನಲ್ಲಿ ವಿವರಣೆ ನೀಡಲಾಗಿದೆ. ಅಪರೂಪದ ಗಿಡ–ಮರಗಳು, ಪ್ರಾಣಿಗಳ ಚಿತ್ರಗಳೂ ಇದರಲ್ಲಿವೆ.

ಆಂಗ್‌ ಸಿ ಅವರೇ ನಿಘಂಟಿನ 150 ಪ್ರತಿಗಳನ್ನು (ಬೆಲೆ ₹1,500) ಮುದ್ರಿಸಿದ್ದು, ಮಾರಾಟದ ಜವಾಬ್ದಾರಿಯನ್ನು ಸೋಲಿಗರ ಮುಖಂಡರಿಗೆ ನೀಡಿದ್ದಾರೆ. ಬಂದ ಲಾಭವನ್ನು ಸೋಲಿಗರ ಅಭಿವೃದ್ಧಿಗೆ ಬಳಸಲು ಸೂಚಿಸಿದ್ದಾರೆ.

12 ವರ್ಷಗಳ ಶ್ರಮ: ಆಸ್ಟ್ರೇಲಿಯಾದ ರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿರುವ ಆಂಗ್‌ ಸಿ, 2012ರಲ್ಲಿ ಸೋಲಿಗರ ಜೀವನ ಮತ್ತು ಸಂಸ್ಕೃತಿ ಬಗ್ಗೆ ಅಧ್ಯಯನ ನಡೆಸಿ ಅದೇ ವಿಶ್ವವಿದ್ಯಾಲಯದಿಂದ ಪಿ.ಎಚ್‌.ಡಿ ಪಡೆದಿದ್ದಾರೆ. ಅವರು 2008ರಿಂದ ಸೋಲಿಗರು ಬಳಸುವ ಪದಗಳನ್ನು ಸಂಗ್ರಹಿಸಲು ತೊಡಗಿದ್ದಾಗಿ ಹೇಳಿಕೊಂಡಿದ್ದಾರೆ.

ಇದಕ್ಕಾಗಿ, ಬಿಳಿಗಿರಿರಂಗನಬೆಟ್ಟದ ಅಶೋಕ ಟ್ರಸ್ಟ್‌ ಫಾರ್‌ ಇಕಾಲಜಿ ಆ್ಯಂಡ್‌ ಎನ್‌ ಎನ್ವಿರಾನ್‌ಮೆಂಟ್‌ (ಏಟ್ರೀ), ಸೋಲಿಗ ಮುಖಂಡರು ಹಾಗೂ ಸಂಶೋಧಕರ ನೆರವು ಪಡೆದಿದ್ದಾರೆ.

‘148 ಪೋಡುಗಳ ಪೈಕಿ, 55 ಪೋಡುಗಳ ಆರು ಕುಲ ಸೋಲಿಗರು ಮಾತ್ರ ಈ ಭಾಷೆ ಮಾತನಾಡುತ್ತಾರೆ. ಈ ನಿಘಂಟು ಸೋಲಿಗ ಭಾಷೆ, ಸಂಸ್ಕೃತಿ ರಕ್ಷಣೆ ನಿಟ್ಟಿನಲ್ಲಿ ಹೊಸ ಪೀಳಿಗೆಗೆ ಅನುಕೂಲ. ಈ ಭಾಷೆಯ ಹೆಚ್ಚಿನ ಅಧ್ಯಯನಕ್ಕೆ,ಸೋಲಿಗರ ಮಕ್ಕಳು ಓದುವ ಶಾಲೆಯ ಶಿಕ್ಷಕರಿಗೆ ಇದು ಸಹಕಾರಿ’ ಎನ್ನುತ್ತಾರೆ ‘ಏಟ್ರೀ’ ಸಮಾಜ ವಿಜ್ಞಾನಿ ಡಾ.ಸಿ.ಮಾದೇಗೌಡ.

*
ಸದ್ಯ ಸೋಲಿಗ–ಇಂಗ್ಲಿಷ್‌ ಶಬ್ದಕೋಶ ಸಿದ್ಧವಿದ್ದು, ಎರಡನೇ ಆವೃತ್ತಿಯಲ್ಲಿ ‘ಸೋಲಿಗ–ಕನ್ನಡ–ಇಂಗ್ಲಿಷ್‌’ ನಿಘಂಟು ತಯಾರಾಗಲಿದೆ. -ಡಾ.ಸಿ.ಮಾದೇಗೌಡ, ಸೋಲಿಗರ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT