ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೌಂದರ್ಯ ಜಗದೀಶ್ ಪ್ರಕರಣ | ₹60 ಕೋಟಿ ವಂಚನೆ: ಆತ್ಮಹತ್ಯೆಗೆ ಪ್ರಚೋದನೆ

Published 24 ಮೇ 2024, 15:31 IST
Last Updated 24 ಮೇ 2024, 15:31 IST
ಅಕ್ಷರ ಗಾತ್ರ

ಬೆಂಗಳೂರು: ಸಿನಿಮಾ ನಿರ್ಮಾಪಕ ಹಾಗೂ ಉದ್ಯಮಿ ಸೌಂದರ್ಯ ಜಗದೀಶ್ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ‘₹60 ಕೋಟಿ ವಂಚನೆಯಿಂದ ಪತಿ ನೊಂದಿದ್ದರು’ ಎಂದು ಆರೋಪಿಸಿ ಅವರ ಪತ್ನಿ ಶಶಿರೇಖಾ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿರುವ ಮನೆಯಲ್ಲಿ ಏಪ್ರಿಲ್ 14ರಂದು ಸೌಂದರ್ಯ ಜಗದೀಶ್ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಾಗಿತ್ತು.  ಪತ್ನಿ ಪ್ರತ್ಯೇಕ ದೂರು ನೀಡಿರುವುದರಿಂದ ಆತ್ಮಹತ್ಯೆ ಪ್ರಚೋದನೆ ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

‘ಸೌಂದರ್ಯ ಜಗದೀಶ್ ಅವರ ಆತ್ಮಹತ್ಯೆಗೆ ಕಾರಣವೇನು ಎಂಬುದು ಇದುವರೆಗೂ ನಿಖರವಾಗಿ ಗೊತ್ತಾಗಿಲ್ಲ. ಇದರ ನಡುವೆಯೇ ಸೌಂದರ್ಯ ಜಗದೀಶ್ ಅವರ ಕೊಠಡಿಯಲ್ಲಿದ್ದ ಬಟ್ಟೆಯಲ್ಲಿ ಮೇ 18ರಂದು ಮರಣಪತ್ರವೊಂದು ಸಿಕ್ಕಿದೆ. ಅದೇ ಮರಣಪತ್ರ ಆಧರಿಸಿ ಪತ್ನಿ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸೌಂದರ್ಯ ಜಗದೀಶ್ ಅವರು ‘ಸೌಂದರ್ಯ ಕನ್‌ಸ್ಟ್ರಕ್ಷನ್’ ಕಂಪನಿ ನಡೆಸುತ್ತಿದ್ದರು. ವಿ.ಎಸ್. ಸುರೇಶ್, ಎಸ್‌.ಪಿ. ಹೊಂಬಣ್ಣ ಹಾಗೂ ಸುಧೀಂದ್ರ ಅವರು ಕಂಪನಿಯ ಪಾಲುದಾರರಾಗಿದ್ದರು. ತಮ್ಮ ಕೆಲ ಆಸ್ತಿಯನ್ನು ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಸೌಂದರ್ಯ ಜಗದೀಶ್, ₹60 ಕೋಟಿ ಸಾಲ ಪಡೆದು ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಕಂಪನಿ ನಷ್ಟದಲ್ಲಿರುವುದಾಗಿ ಹೇಳಿದ್ದ ಸಹ ಪಾಲುದಾರರು, ₹60 ಕೋಟಿ ವಂಚಿಸಿದ್ದರು. ಜೊತೆಗೆ, ಸೌಂದರ್ಯ ಜಗದೀಶ್ ಅವರಿಂದ ಹಲವು ದಾಖಲೆಗಳಿಗೆ ಸಹಿ ಪಡೆದುಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಸಹ ಪಾಲುದಾರರು, ಜೀವ ಬೆದರಿಕೆಯೊಡ್ಡಿದ್ದರು. ಇವರ ಕಿರುಕುಳದಿಂದಲೇ ಸೌಂದರ್ಯ ಜಗದೀಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂಬುದಾಗಿ ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಮೂಲಗಳು ವಿವರಿಸಿವೆ.

‘ಕಂಪನಿಯ ಸಹ ಪಾಲುದಾರರ ವಿರುದ್ಧ ದೂರು ಸ್ವೀಕರಿಸಲಾಗಿದೆ. ಹಣದ ಹೂಡಿಕೆ ಹಾಗೂ ಇತರೆ ಪುರಾವೆಗಳನ್ನು ಪರಿಶೀಲಿಸಿದ ನಂತರವೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT