ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿತ್ತನೆ ಬೀಜ ತರಲಿದ್ದಾನೆ ಅಂಚೆಯಣ್ಣ: ಕೃಷಿ ಇಲಾಖೆಯಿಂದ ರೈತ ಸ್ನೇಹಿ ಯೋಜನೆ

Published 19 ಜೂನ್ 2024, 23:30 IST
Last Updated 19 ಜೂನ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಹಣ ಕೊಟ್ಟರೂ ಬೇಕಾದ ತಳಿಯ, ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಸಿಗಲಿಲ್ಲವೆಂದು ರೈತರು ಇನ್ನು ಮುಂದೆ ಪರಿತಪಿಸುವ ಅಗತ್ಯವಿಲ್ಲ. ಬೇಡಿಕೆಯಷ್ಟು ಬಿತ್ತನೆ ಬೀಜಗಳನ್ನು ಆಯಾ ಊರಿನ ಅಂಚೆ ಕಚೇರಿ ಸಿಬ್ಬಂದಿಯೇ ಮನೆ ಬಾಗಿಲಿಗೆ ತಲುಪಿಸಲಿದ್ದಾರೆ.

ದೇಶದಲ್ಲೇ ಮೊದಲ ಬಾರಿಗೆ ಇಂತಹ ರೈತ ಸ್ನೇಹಿ ಕಾರ್ಯಕ್ರಮದ ಅನುಷ್ಠಾನಕ್ಕೆ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಯೋಜನೆಯ ಅನುಷ್ಠಾನಕ್ಕೆ ಕರ್ನಾಟಕ ರಾಜ್ಯ ಬೀಜ ನಿಗಮ ಹಾಗೂ ಅಂಚೆ ಕಚೇರಿ ಮಧ್ಯೆ ಒಪ್ಪಂದವಾಗಿದೆ. ಅತ್ಯುತ್ತಮ ತಳಿಯ ಗುಣಮಟ್ಟದ ಬಿತ್ತನೆ ಬೀಜಗಳನ್ನು ರೈತರು ಸಲ್ಲಿಸಿದ ಬೇಡಿಕೆಗೆ ಅನುಗುಣವಾಗಿ ಜುಲೈನಿಂದಲೇ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ರೈತರು ಹಾಗೂ ಅಂಚೆ ಕಚೇರಿ ಮಧ್ಯೆ ಪೇಮೆಂಟ್‌ ಬ್ಯಾಂಕ್‌ ಆಗಿ ಕೆನರಾ ಬ್ಯಾಂಕ್‌ ಕಾರ್ಯನಿರ್ವಹಿಲಿದೆ.  

ಪ್ರತಿ ವರ್ಷ ಮುಂಗಾರು ಹಾಗೂ ಹಿಂಗಾರು ಬಿತ್ತನೆಗಾಗಿ ರೈತರು ಆಯಾ ರೈತ ಸಂಪರ್ಕ ಕೇಂದ್ರಗಳು, ಸಹಕಾರ ಸಂಘಗಳು, ಸಮೀಪದ ಪರವಾನಗಿ ಪಡೆದ ಮಾರಾಟಗಾರರ ಮೂಲಕ ಅಗತ್ಯ ಬಿತ್ತನೆ ಬೀಜಗಳನ್ನು ಖರೀದಿ ಮಾಡುತ್ತಾರೆ. ಬಿತ್ತನೆ ಬೀಜಗಳ ದರ ಅತಿ ದುಬಾರಿಯಾಗಿರುವುದು, ಅಧಿಕೃತ ಮಾರಾಟಗಾರರೂ ಬೀಜಗಳ ಕೃತಕ ಅಭಾವ ಸೃಷ್ಟಿಸಿ, ದುಬಾರಿ ದರಕ್ಕೆ ಮಾರಾಟ ಮಾಡುವುದು ಮತ್ತಿತರ ಕಾರಣಗಳಿಂದ ಬಹುತೇಕರು ಅನಧಿಕೃತ ಮಾರಾಟಗಾರರಿಂದ ಕಡಿಮೆ ದರಕ್ಕೆ ಖರೀದಿಸಿ, ಬಿತ್ತನೆ ಮಾಡುತ್ತಿದ್ದಾರೆ.

ಕಳಪೆ ಬೀಜಗಳ ಬಿತ್ತನೆಯಿಂದಾಗಿ ಪ್ರತಿ ವರ್ಷ ಲಕ್ಷಾಂತರ ಹೆಕ್ಟೇರ್ ಬೆಳೆ ನಷ್ಟವಾಗುತ್ತಿದೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ಕೆಲ ರೈತರು ನಷ್ಟದಿಂದ ಕಂಗಾಲಾಗಿ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೂ ಸಾಕಷ್ಟಿವೆ. ಕಳಪೆ ಬಿತ್ತನೆ ಬೀಜಗಳನ್ನು ಪೂರೈಸುವಲ್ಲಿ ಮಧ್ಯವರ್ತಿಗಳೇ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುವ ಕಾರಣ ಅವರ ವಿರುದ್ಧ ವಿಚಾರಣೆ ನಡೆಸಿ, ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗುತ್ತಿದೆ. ಅಧಿಕೃತ ಪರವಾನಗಿ ಪಡೆದವರು ಕೃತಕ ಅಭಾವ ಸೃಷ್ಟಿಸಿ, ಅಧಿಕ ಬೆಲೆಗೆ ಮರಾಟ ಮಾಡಿದ ಪ್ರಕರಣಗಳಲ್ಲಿ ಪರವಾನಗಿ ರದ್ದು ಮಾಡಲಾಗುತ್ತಿದೆ. ಆದರೆ, ಶಿಕ್ಷೆಯಂತಹ ಕ್ರಮಗಳೇ ಆಗುತ್ತಿಲ್ಲ. ಅತ್ತ ರೈತರಿಗೆ ಸೂಕ್ತ ಪರಿಹಾರವೂ ದೊರಕಿಲ್ಲ ಎನ್ನುವುದನ್ನು ಕೃಷಿ ಇಲಾಖೆಯ ಅಂಕಿಅಂಶಗಳೇ ಹೇಳುತ್ತವೆ.

ಇಂತಹ ಹತ್ತು ಹಲವು ಕಾರಣಗಳಿಂದ ನಲುಗಿದ್ದ ರೈತರಿಗೆ ಬಿತ್ತನೆ ಬೀಜಗಳನ್ನು ಸರ್ಕಾರ ಮನೆ ಬಾಗಿಲಿಗೇ ತಲುಪಿಸಲು ಕ್ರಮ ಕೈಗೊಂಡಿರುವುದು ಬಿತ್ತನೆ ಬೀಜದ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಮಹತ್ವ ಹೆಜ್ಜೆಯಾಗಲಿದೆ ಎನ್ನುವುದು ರಾಜ್ಯ ಸರ್ಕಾರದ ಆಶಯ.

ಕೃಷಿ ಇಲಾಖೆ ಈಗಾಗಲೇ 6.04 ಲಕ್ಷ ಕ್ವಿಂಟಲ್‌ ಬಿತ್ತನೆ ಬೀಜಗಳನ್ನು ಸಂಗ್ರಹ ಮಾಡಿದೆ. ಬೇಡಿಕೆಗೆ ಅನುಗುಣವಾಗಿ ಅಂಚೆ ಕಚೇರಿ ಮೂಲಕ ರೈತರಿಗೆ ಪೂರೈಕೆ ಮಾಡಲಿದೆ. 

ರೈತರು ಹೇಗೆ ಬೇಡಿಕೆ ಸಲ್ಲಿಸಬೇಕು?

ಯಲಹಂಕದಲ್ಲಿರುವ ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ಸಿದ್ಧಪಡಿಸಿರುವ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಬೇಕು. (ಆ್ಯಪ್‌ ಹೆಸರು ಇನ್ನು ಒಂದೆರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ) ಮೊಬೈಲ್‌ ಫೋನ್‌ ಅಥವಾ ಆನ್‌ಲೈನ್‌ನಲ್ಲಿ ಬೇಡಿಕೆ ಸಲ್ಲಿಸಬಹುದು.

ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯಿತಿ ಹಾಗೂ ಗ್ರಾಮ, ರೈತರ ಹೆಸರು, ಮನೆಯ ವಿಳಾಸ ನಮೂದಿಸಿದ ನಂತರ ಅಗತ್ಯವಿರುವ ಬಿತ್ತನೆ ಬೀಜ, ಎಷ್ಟು ಪ್ರಮಾಣ ಎಂದು ನಮೂದಿಸಬೇಕು. ನಂತರ  ಸಂದಾಯ ಮಾಡಬೇಕಿರುವ ಮೊತ್ತ ಮೂಡುತ್ತದೆ. ಅಷ್ಟು ಹಣವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು. ಪಾವತಿಸಿದ ಎರಡು–ಮೂರು ದಿನಗಳಲ್ಲಿ ಅಂಚೆ ಸಿಬ್ಬಂದಿ ಮನೆ ಬಾಗಿಲಿಗೆ ತಲುಪಿಸುವರು.

ಅಂಚೆ ಸಿಬ್ಬಂದಿ ತಲುಪಿಸುವ ಎಲ್ಲ ಬಿತ್ತನೆ ಬೀಜಗಳು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಮೊಹರು ಹೊಂದಿದ್ದು, ಗುಣಮಟ್ಟದಿಂದ ಕೂಡಿರುತ್ತವೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಅಂಚೆ ಇಲಾಖೆ ಮೂಲಕ ಬಿತ್ತನೆ ಬೀಜ ಪೂರೈಸಲು ಸಿದ್ಧತೆ ನಡೆದಿದೆ. ಪ್ರಕ್ರಿಯೆ ಪೂರ್ಣಗೊಂಡ ತಕ್ಷಣ ಸಂಪೂರ್ಣ ಮಾಹಿತಿ ನೀಡಲಾಗುವುದು.
- ವಿ. ಅನ್ಬುಕುಮಾರ್, ಪ್ರಧಾನ ಕಾರ್ಯದರ್ಶಿ, ಕೃಷಿ ಇಲಾಖೆ
ದುಬಾರಿ ಬೆಲೆಯ ಕಾರಣಕ್ಕೇ ರೈತರು ಅನಧಿಕೃತ ಮಾರಾಟಗಾರ ಮೊರೆಹೋಗುತ್ತಾರೆ. ಮೊದಲು ಬೆಲೆ ಇಳಿಕೆ ಮಾಡಬೇಕು.
-ಎಚ್‌.ಆರ್. ಬಸವರಾಜಪ್ಪ, ಅಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT