ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪತ್ರಿಕಾ ಗೋಷ್ಠಿಯಲ್ಲಿ ಭಾಗವಹಿಸಿದರು.ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ರಮೇಶ್‌ಬಾಬು
‘ಪೀಠದತ್ತ ನುಗ್ಗಿ ಎಂದಿದ್ದು ಅಶೋಕ’
‘ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠಕ್ಕೆ ಮುತ್ತಿಗೆ ಹಾಕುವಂತೆ ಪ್ರಚೋದಿಸಿದ್ದೇ ಆರ್.ಅಶೋಕ. ಪೀಠದತ್ತ ನುಗ್ಗಿ ಎಂದು ಅವರು ಹೇಳಿದ್ದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಹೀಗಾಗಿ ಅವರ ವಿರುದ್ಧ ಕ್ರಮತೆಗೆದುಕೊಳ್ಳಬೇಕು’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಒತ್ತಾಯಿಸಿದ್ದಾರೆ.
ಈ ಸಂಬಂಧ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ. ‘ಸದನದ ನಿಯಮಾವಳಿ ಮೀರಿ, ಇಡೀ ಘಟನೆಗೆ ಕಾರಣಕರ್ತರಾದ ಅಶೋಕ ಅವರನ್ನು ಅಮಾನತು ಪಡಿಸಿ, ಅವರ ವಿರುದ್ಧವೂ ಕ್ರಮಜರುಗಿಸಿ’ ಎಂದು ಮನವಿ ಮಾಡಿದ್ದಾರೆ.
‘ಆದೇಶ ನಿಮ್ಮದೋ? ಸಿ.ಎಂ.ದೋ’
‘ಶಾಸಕರ ಜತೆ ಸಂಧಾನಸಭೆ ನಡೆಸದೆಯೇ ಅಮಾನತು ಆದೇಶ ಮಾಡಿದ ನಿಮ್ಮ ಕ್ರಮ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಪಾಲಿಗೆ ಶಾಶ್ವತ ಕಪ್ಪುಚುಕ್ಕೆ’ ಎಂದು ಬಿಜೆಪಿ ಶಾಸಕ ವಿ.ಸುನಿಲ್ ಕುಮಾರ್ ಅವರು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.
‘ಬಿಜೆಪಿ–ಜೆಡಿಎಸ್ ಶಾಸಕರ ಜತೆ ಸಭೆ ನಡೆಸದೆಯೇ ಮುಖ್ಯಮಂತ್ರಿ ಮತ್ತು ಕಾನೂನು ಸಚಿವರ ಜತೆ ರಹಸ್ಯ ಸಭೆ ನಡೆಸಿದಿರಿ. ಅಮಾನತು ಆದೇಶ ತಮ್ಮದೋ ಅಥವಾ ಮುಖ್ಯಮಂತ್ರಿಯೇ ಕೈಹಿಡಿದು ಬಲವಂತದಿಂದ ಬರೆಸಿದ್ದೋ’ ಎಂದು ಅವರು ಪ್ರಶ್ನಿಸಿದ್ದಾರೆ.