ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ’ ನಿರ್ಮಾಣಕ್ಕೆ ಅನುದಾನ

ಎರಡು ದೋಣಿ ಪಯಣ ಬಿಡಿ: ಸರ್ಕಾರಿ ವೈದ್ಯರಿಗೆ ಎಚ್ಚರಿಕೆ
Last Updated 26 ಸೆಪ್ಟೆಂಬರ್ 2019, 17:25 IST
ಅಕ್ಷರ ಗಾತ್ರ

ಮಡಿಕೇರಿ: ನಗರದ ಜಿಲ್ಲಾ ಆಸ್ಪತ್ರೆಯ ಸ್ಥಿತಿಗತಿಯನ್ನು ಗುರುವಾರ ರಾತ್ರಿ ಖುದ್ದು ಪರಿಶೀಲಿಸಿದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಆಸ್ಪತ್ರೆಯಲ್ಲೇ ವಾಸ್ತವ್ಯ ಮಾಡಿದರು. ಅದಕ್ಕೂ ಮೊದಲು ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿದರು.

ಬಳಿಕ ಮಾತನಾಡಿದ ಶ್ರೀರಾಮುಲು, ‘ಕೊಡಗು ಜಿಲ್ಲೆ, ಗುಡ್ಡಗಾಡು ಪ್ರದೇಶವಾಗಿದ್ದು ಮಡಿಕೇರಿಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಎಲ್ಲ ರೀತಿಯ ಸಹಕಾರ ಹಾಗೂ ಅನುದಾನ ನೀಡಲಾಗುವುದು. ನಾನೇ ನೇತೃತ್ವ ವಹಿಸಿಕೊಂಡು ಈ ಪ್ರದೇಶದಲ್ಲಿ ಆಸ್ಪತ್ರೆ ಸುಧಾರಣೆಗೆ ವಿಶೇಷ ಸೌಲಭ್ಯ ಕಲ್ಪಿಸುತ್ತೇನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆಗೂ ಸೂಪರ್‌ ಸ್ಪೆಷ್ಟಾಲಿಟಿ ಆಸ್ಪತ್ರೆ ನಿರ್ಮಾಣ ಸಂಬಂಧ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಸರ್ಕಾರಿ ಆಸ್ಪತ್ರೆಯ ವೈದ್ಯರು ಎರಡು ದೋಣಿಯ ಪಯಣ ಮಾಡಬಾರದು. ಸರ್ಕಾರಿ ಆಸ್ಪತ್ರೆಯ ವೈದ್ಯರು, ಖಾಸಗಿ ಆಸ್ಪತ್ರೆಗಳಲ್ಲೂ ಕಾರ್ಯ ನಿರ್ವಹಿಸುವುದು ಅವರಿಗೆ ಶೋಭೆಯಲ್ಲ. ಒಂದು ವೇಳೆ ಅಲ್ಲಿಯೂ ಕೆಲಸ ಮಾಡುವುದಾದರೆ ಸರ್ಕಾರಿ ಆಸ್ಪತ್ರೆ ಬಿಟ್ಟು ತೊಲಗಲಿ ಎಂದ ಎಚ್ಚರಿಕೆ ನೀಡಿದ ಅವರು, ಅದಕ್ಕೆ ಕಾನೂನು ತರುಲು ಪ್ರಯತ್ನಿಸುತ್ತೇವೆ. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳು ಸುಧಾರಣೆ ಆಗಬೇಕು. ಖಾಸಗಿ ಆಸ್ಪತ್ರೆಗಳಿಗೆ ಪ್ರತಿಸ್ಪರ್ಧಿಯಾಗಿ ಸರ್ಕಾರಿ ಆಸ್ಪತ್ರೆಗಳು ಬೆಳೆಯಬೇಕು. ಅದಕ್ಕೆ ವಿಶೇಷ ಅನುದಾನ ನೀಡಲಾಗುವುದು’ ಎಂದು ಶ್ರೀರಾಮುಲು ಹೇಳಿದರು.

‘ಈ ಹಿಂದೆ ಕೆಪಿಎಸ್‌ಸಿಯಿಂದ ವೈದ್ಯರ ನೇಮಕಾತಿ ಮಾಡಿಕೊಳ್ಳುತ್ತಿದ್ದೆವು. ಆದರೆ, ಈಗ ಡಿಎಚ್‌ಒಗಳಿಗೆ ವೈದ್ಯರ ನೇಮಕಾತಿ ಅಧಿಕಾರ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡಿ ಪರಿಸ್ಥಿತಿ ಸುಧಾರಣೆಗೆ ಪ್ರಯತ್ನಿಸುತ್ತೇನೆ’ ಎಂದು ತಿಳಿಸಿದರು.

‘ಆಸ್ಪತ್ರೆಯ ಯಂತ್ರೋಪಕರಣಗಳು ಸುಸ್ಥಿತಿಯಲ್ಲಿ ಇರಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಪ್ರತ್ಯೇಕ ಅನುದಾನ ಮೀಸಲಿಡಲು ಚಿಂತನೆ ನಡೆಸಲಾಗಿದೆ’ ಎಂದು ಹೇಳಿದರು. ಇದೇ ವೇಳೆ ಆಸ್ಪತ್ರೆ ಅವ್ಯವಸ್ಥೆ ಕುರಿತು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು.

ಭೇಟಿಯ ದಿಢೀರ್‌ ಮಾಹಿತಿ:ಶ್ರೀರಾಮುಲು ಶುಕ್ರವಾರ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದರು. ಆದರೆ, ಗುರುವಾರವೇ ಆಸ್ಪತ್ರೆಯಲ್ಲಿ ವಾಸ್ತವ್ಯಕ್ಕೆ ಬರುವ ಮಾಹಿತಿಯು ಮಧ್ಯಾಹ್ನ 12ರ ಸುಮಾರಿಗೆ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯ ಸಿಬ್ಬಂದಿ, ವೈದ್ಯರು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡರು. ರೋಗಿಗಳ ವಾರ್ಡ್‌ಗಳನ್ನು ಶುಚಿಗೊಳಿಸಿದರು.

ಸಿಬ್ಬಂದಿ, ಆಸ್ಪತ್ರೆ ಸುತ್ತಮುತ್ತ ಬಿದ್ದಿದ್ದ ಕಸಕಡ್ಡಿ ತೆರವುಗೊಳಿಸಿದರು. ಸಂಜೆ 6ಕ್ಕೆ ಸಚಿವರು ಭೇಟಿ ಕೊಡುವ ಮಾಹಿತಿ ಇತ್ತು. ಆದರೆ, ರಾತ್ರಿ 9.45ರ ಸುಮಾರಿಗೆ ಆಸ್ಪತ್ರೆಗೆ ಬಂದ ಸಚಿವರು, ಆಸ್ಪತ್ರೆಯ ವಾಸ್ತವ ಚಿತ್ರಣ ಅರಿಯುವ ಪ್ರಯತ್ನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT