ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

₹ 83 ಕೋಟಿಗೆ ‘ಲೆಕ್ಕ’ ನೀಡದ ಎಸ್‌ಟಿ ಇಲಾಖೆ

* ಬಳಕೆ ಪ್ರಮಾಣಪತ್ರ ನೀಡಿಲ್ಲವೆಂದು ಪತ್ರ ಬರೆದ ಕೇಂದ್ರ * ರಾಜ್ಯ ಸರ್ಕಾರವೇ ಹೊಣೆ ಎಂದೂ ಉಲ್ಲೇಖ
Published 25 ಜೂನ್ 2024, 23:41 IST
Last Updated 25 ಜೂನ್ 2024, 23:41 IST
ಅಕ್ಷರ ಗಾತ್ರ

ಬೆಂಗಳೂರು: ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ₹83 ಕೋಟಿಗೂ ಹೆಚ್ಚು ಮೊತ್ತದಅನುದಾನಕ್ಕೆ ಬಳಕೆ ಪ್ರಮಾಣಪತ್ರವನ್ನೇ ಸಲ್ಲಿಸಿಲ್ಲ.

ಬಳಕೆ ಪ್ರಮಾಣಪತ್ರ ಸಲ್ಲಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಮೇ 6ರಂದು ಪತ್ರ ಬರೆದಿರುವ ಕೇಂದ್ರ ಸರ್ಕಾರ, ಇದಕ್ಕೆ ರಾಜ್ಯ ಸರ್ಕಾರವೇ ಜವಾಬ್ದಾರಿ ಎಂದು ದೂರಿದೆ.

ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು (ಎಂಒಟಿಎ) ಸಂವಿಧಾನದ ಅನುಚ್ಛೇದ 275(1) ಅಡಿ ಬುಡಕಟ್ಟು ಪ್ರದೇಶಗಳ ಆರ್ಥಿಕತೆ ಸುಧಾರಿಸಲು ಅಗತ್ಯವಾದ ನಿರ್ಣಾಯಕ ಮೂಲಸೌಕರ್ಯಗಳಸೃಷ್ಟಿ ಮತ್ತು ಉನ್ನತೀಕರಣಕ್ಕೆ 2022–23ನೇ ಸಾಲಿನಲ್ಲಿ ರಾಜ್ಯಕ್ಕೆ ₹42.97 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಈ ಅನುದಾನವನ್ನು ಬಳಕೆ ಮಾಡಿರುವುದಕ್ಕೆ ಯಾವುದೇ ಪ್ರಮಾಣಪತ್ರ ಸ್ವೀಕೃತ ಆಗಿಲ್ಲ ಎಂದು ಕೇಂದ್ರ ಸರ್ಕಾರ ಪತ್ರದಲ್ಲಿಹೇಳಿದೆ.

ಅಲ್ಲದೆ, 2023–24ನೇ ಸಾಲಿನಲ್ಲಿ ಒಟ್ಟು ₹40.70 ಕೋಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದಕ್ಕೂ ಬಳಕೆ ಪ್ರಮಾಣಪತ್ರ ಸಲ್ಲಿಸಿಲ್ಲ. ಯೋಜನೆಗೆ ಸಂಬಂಧಿಸಿದಂತೆ ಭೌತಿಕ, ಆರ್ಥಿಕ ಪ್ರಗತಿಯ ವರದಿಯನ್ನೂ ಸಲ್ಲಿಸಿಲ್ಲ. ಆದಿವಾಸಿ ಅನುದಾನ ನಿರ್ವಹಣೆಯ ಸಿಸ್ಟಂ (ಎಡಿಐಜಿಆರ್‌
ಎಎಂಎಸ್‌) ಪೋರ್ಟಲ್‌ನಲ್ಲಿಯೂನಮೂದಿಸಿದ ಮಾಹಿತಿಗಳು ಅಪೂರ್ಣವಾಗಿದೆ ಎಂದೂ
ಪತ್ರದಲ್ಲಿದೆ. 

‘ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ನಡೆದ ಹಲವು ಸಭೆಗಳಲ್ಲಿ ಈ ವಿಚಾರ ಪ್ರಸ್ತಾಪವಾಗಿದ್ದು, ಬಳಕೆ ಪ್ರಮಾಣ ಪತ್ರಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಇಲಾಖೆಯ ನಿರ್ದೇಶಕ ಬಿ. ಕಲ್ಲೇಶ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೂ ಯಾವುದೇ ಕ್ರಮ ವಹಿಸಿಲ್ಲ. ಹೀಗಾಗಿ ಅವರಿಗೆ ಕಾರಣ ಕೇಳುವ ನೋಟಿಸ್‌ ಜಾರಿ ಮಾಡಲಾಗಿತ್ತು. ಈ ನೋಟಿಸ್‌ಗೆ ಕಲ್ಲೇಶ್‌ ಅವರು ಲಿಖಿತ ಸಮಜಾಯಿಷಿ ನೀಡಿದ್ದರೂ ಸೂಕ್ತ ದಾಖಲೆಗಳೊಂದಿಗೆ ಸಮರ್ಥನೀಯ ಹೇಳಿಕೆಯನ್ನು ಸಲ್ಲಿಸಿಲ್ಲ’ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಮೂಲಗಳು ಹೇಳಿವೆ.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇದೇ 18ರಂದು ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆದಿದೆ. ನಿರ್ದೇಶಕ ಕಲ್ಲೇಶ್‌ ಅವರು ವಸತಿನಿಲಯಗಳ ಪರಿವೀಕ್ಷಣೆ ಮಾಡದಿರುವುದು ಮತ್ತು ಇಲಾಖೆಯ ಅಧೀನದಲ್ಲಿರುವ ವಿದ್ಯಾರ್ಥಿ ನಿಲಯಗಳು ಮತ್ತು ವಸತಿ ನಿಲಯಗಳಿಂದ ಬೇಡಿಕೆ ಪಡೆಯದೇ ಸಾಮಗ್ರಿಗಳನ್ನು ಕೇಂದ್ರೀಕೃತ ಟೆಂಡರ್‌ ಮೂಲಕ ಖರೀದಿಸಿ ಸರಬರಾಜು ಮಾಡಿರುವುದು ಈ ಸಭೆಯಲ್ಲಿ ಪ್ರಸ್ತಾವವಾಗಿದೆ. ನಿರ್ದೇಶಕರ ಕಾರ್ಯವೈಖರಿಯಿಂದ ಸಾರ್ವಜನಿಕ ಹಣ ಸಮರ್ಪಕವಾಗಿ ನಿಯೋಜಿತ ಕಾರ್ಯಕ್ರಮಗಳಿಗೆ ಬಳಕೆ ಆಗದಿರುವುದು ಮತ್ತು ವಸತಿ, ಆಶ್ರಯ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 75ಕ್ಕಿಂತ ಕಡಿಮೆ ಇದ್ದು, ವಿದ್ಯಾರ್ಥಿಗಳಿಗೆ ಹೆಚ್ಚುವರಿ ತರಬೇತಿ ಮೂಲಕ ಗುಣಾತ್ಮಕ ಶಿಕ್ಷಣ ನೀಡಲು ಕ್ರಮ ವಹಿಸದ ವಿಚಾರವೂ ಚರ್ಚೆಗೆ ಬಂದಿದೆ. ನಿರ್ದೇಶಕರ ಈ ಕಾರ್ಯವೈಖರಿಗೆ ಮುಖ್ಯಮಂತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು’ ಎಂದೂ ಮೂಲಗಳು ತಿಳಿಸಿವೆ.

ಕೇಂದ್ರದಿಂದ 8 ನೆನಪಿನೋಲೆ!

‘ಕೇಂದ್ರ ಸರ್ಕಾರದ ಪರಿಶಿಷ್ಟ ಪಂಡಗಳ ಸಚಿವಾಲಯ ಫೆ. 5ರಂದು ಬರೆದಿದ್ದ ಪತ್ರದಲ್ಲಿ ವಿಶೇಷ ದುರ್ಬಲ ಬುಡಕಟ್ಟು ಗುಂಪುಗಳ (ಪಿವಿಟಿಜಿ) ಯೋಜನೆಯಡಿ 2021–22 ಮತ್ತು 2022–23ನೇ ಸಾಲಿನಲ್ಲಿ ರಾಜ್ಯಕ್ಕೆ ಬಿಡುಗಡೆ ಮಾಡಿರುವ ₹ 21 ಕೋಟಿ ಅನುದಾನದಲ್ಲಿ ₹ 5.24 ಕೋಟಿ ಅನುದಾನಕ್ಕೆ ಬಳಕೆ ಪ್ರಮಾಣಪತ್ರ ನೀಡಿಲ್ಲ. ಎಸ್‌ಎನ್‌ಎ (ಏಕ ನೋಡಲ್‌ ಖಾತೆ) ಖಾತೆಯಲ್ಲಿ ಬಾಕಿ ಇರುವ ₹ 2.47 ಕೋಟಿ ಮತ್ತು ಅದೇ ಖಾತೆಯಲ್ಲಿ ಬಾಕಿ ಇರುವ ಬಡ್ಡಿ ಮೊತ್ತ ₹ 60.83 ಲಕ್ಷ ವರ್ಗಾವಣೆಗೆ ಬಾಕಿ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಎಂಟು ನೆನಪೋಲೆಗಳನ್ನು ಕಳುಹಿಸಿದ್ದರೂ ನಿಗದಿತ ಅವಧಿಯಲ್ಲಿ ಬಳಕೆ ಪ್ರಮಾಣಪತ್ರ ಸಲ್ಲಿಸಿಲ್ಲ. ಈ ಕರ್ತವ್ಯ ಲೋಪಕ್ಕೂ ಕಲ್ಲೇಶ್‌ ಅವರಿಗೆ ಕಾರಣ ಕೇಳುವ ನೋಟಿಸ್‌ ಜಾರಿ ಮಾಡಲಾಗಿತ್ತು. ಅದಕ್ಕೆ ಅವರು ಸಲ್ಲಿಸಿದ್ದ ಲಿಖಿತ ಸಮಜಾಯಿಷಿಯಲ್ಲಿಯೂ ಸೂಕ್ತ ದಾಖಲೆಗಳ ಸಹಿತ ಸಮರ್ಥನೀಯ ಹೇಳಿಕೆ ಸಲ್ಲಿಸಿಲ್ಲ’ ಎಂದೂ ಇಲಾಖೆಯ ಮೂಲಗಳು ಹೇಳಿವೆ.

ನಿರ್ದೇಶಕ ಅಮಾನತು

ಕಲ್ಲೇಶ್‌ ಅವರು ತೀವ್ರ ಸ್ವರೂಪದ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಅವರ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತಿನಲ್ಲಿ ಇಟ್ಟು
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇದೇ 22ರಂದು ಆದೇಶ ಹೊರಡಿಸಿದೆ. ಅಲ್ಲದೆ,
ಕಲ್ಲೇಶ್‌ ಅವರ ಸೇವೆಯನ್ನು ಮಾತೃ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆಗೆ ಹಿಂದಿರುಗಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT