ಬೆಂಗಳೂರು: ‘ರಾಜ್ಯದ ಜಲಸಂಪನ್ಮೂಲಗಳ ಸಮರ್ಥ ಮತ್ತು ಶಾಶ್ವತ ನಿರ್ವಹಣೆ ಹಾಗೂ ಪರಿಹಾರೋಪಾಯಗಳ ಕುರಿತು ಸರ್ಕಾರಕ್ಕೆ ಶಿಫಾರಸುಗಳನ್ನು ಒಳಗೊಂಡ ವರದಿ ನೀಡಲು ‘ರಾಜ್ಯ ಜಲ ಆಯೋಗ’ ರಚಿಸುವ ಚಿಂತನೆಯಿದೆ’ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಪ್ರಸ್ತಾವಿತ ಆಯೋಗದ ಕುರಿತಂತೆ ಮಾಹಿತಿ ಹಂಚಿಕೊಂಡ ಅವರು, ‘ರಾಜ್ಯದಲ್ಲಿ ನೀರಿನ ಲಭ್ಯತೆ, ಬೇಡಿಕೆ ಮತ್ತು ಹಂಚಿಕೆಯ ಕುರಿತು ಸಮಗ್ರವಾಗಿ ಅಧ್ಯಯನ ಮಾಡಿ, ಕಾಲಕಾಲಕ್ಕೆ ವೈಜ್ಞಾನಿಕ ವರದಿ ನೀಡುವ ಶಾಶ್ವತ ಸಂಸ್ಥೆಯಾಗಿ ಈ ಆಯೋಗವನ್ನು ರೂಪಿಸುವ ಯೋಚನೆಯಿದೆ’ ಎಂದರು.

‘ನೀರಿಗೆ ಸಂಬಂಧಿಸಿದಂತೆ ಸಮಗ್ರ ಮತ್ತು ತಾಂತ್ರಿಕ ಅಧ್ಯಯನ ಮಾಡಲು ಈ ಆಯೋಗಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು, ಜಲ ವಿಜ್ಞಾನ ತಜ್ಞರು, ಪರಿಸರ ತಜ್ಞರು, ಆರ್ಥಿಕ ಇಲಾಖೆಯ ಅಧಿಕಾರಿಗಳು, ಜಲ ಪೂರೈಕೆ ವಿಭಾಗದ ಪರಿಣತರು, ಪ್ರಗತಿಪರ ರೈತರು ಮತ್ತು ಇತರ ಕ್ಷೇತ್ರಗಳ ತಜ್ಞರು ಸೇರಿದಂತೆ ಸುಮಾರು 15 ಜನರನ್ನು ನೇಮಿಸಲಾಗುವುದು’ ಎಂದರು.

‘ಆಯೋಗವು ನೀರಾವರಿಗೆ ಸೀಮಿತವಾಗದೆ, ರಾಜ್ಯದ ಜಲ ಸಂಬಂಧಿ ಎಲ್ಲ ವಿಷಯಗಳ ಮೇಲೆ ನಿಗಾ ವಹಿಸಿ, ಸಮಗ್ರ ಅಧ್ಯಯನ ನಡೆಸಿ ಸರ್ಕಾರಕ್ಕೆ ಶಿಫಾರಸು ನೀಡಬೇಕು. ಕುಡಿಯುವ ನೀರು, ವ್ಯವಸಾಯ, ಕೈಗಾರಿಕೆಗಳು ಮತ್ತು ಇತರ ಸೌಲಭ್ಯಗಳಿಗೆ ನೀರಿನ ಬಳಕೆಯ ಪ್ರಮಾಣ ಮತ್ತು ಲಭ್ಯತೆಯ ಸಮಗ್ರ ವಿಶ್ಲೇಷಣೆ ನಡೆಸಬೇಕು. ನಗರ ಪ್ರದೇಶಗಳ ಬೆಳವಣಿಗೆ ಮತ್ತು ವಲಸೆ ಜನಸಂಖ್ಯೆಗೆ ಪೂರಕವಾಗಿ ಮುಂದಿನ 50 ವರ್ಷಗಳ ನೀರಿನ ಅವಶ್ಯಕತೆಯನ್ನು ಅಂದಾಜಿಸಿ, ಅದನ್ನು ಪೂರೈಸಲು ಜಾಗತಿಕ ಮಾನದಂಡವನ್ನು ಅನುಸರಿಸಿ ಮಾರ್ಗೋಪಾಯಗಳ ವರದಿ ತಯಾರಿಸಿ ನೀಡಬೇಕು’ ಎಂದೂ ಅವರು ವಿವರಿಸಿದರು.

ರಾಜ್ಯದಲ್ಲಿನ ಪ್ರಸ್ತುತ ನೀರಾವರಿ ಪದ್ಧತಿ ಮತ್ತು ಅದರಲ್ಲಿ ಮಾಡಬೇಕಾದ ಬದಲಾವಣೆ, ಆಧುನಿಕ ತಂತ್ರಜ್ಞಾನ ಬಳಸಿ ನೀರಿನ ಮಿತವ್ಯಯಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನದಲ್ಲಿನ ಬದಲಾವಣೆಗಳ ಅಧ್ಯಯನ, ಹೆಚ್ಚು ಮಳೆಯಾದಾಗ ನೀರು ಸಂಗ್ರಹಿಸಿಡಲು ಜಲಾಶಯಗಳು ಮತ್ತು ಕೆರೆಕಟ್ಟೆಗಳಲ್ಲಿರುವ ಸಾಮರ್ಥ್ಯದ ಕೊರತೆ ಗುರುತಿಸಿ ಪರಿಹಾರ ಸೂಚಿಸುವುದು, ಜಲಸಂಪನ್ಮೂಲಗಳನ್ನು ಹೆಚ್ಚಿಸುವ ವಿಧಾನಗಳು, ಪ್ರವಾಹ, ಬರಗಾಲದಂಥ ವಿಪತ್ತು ಬಂದಾಗ ನೀರಿನ ನಿರ್ವಹಣೆಯನ್ನು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಮತ್ತು ತುರ್ತು ಯೋಜನೆಗಳನ್ನು ರೂಪಿಸುವ ಬಗ್ಗೆಯೂ ಈ ಆಯೋಗ ಶಿಫಾರಸು ಮಾಡಬೇಕು ಎನ್ನುವುದು ನನ್ನ ಯೋಜನೆ’ ಎಂದರು.

ಕೇಂದ್ರ ಜಲ ಆಯೋಗದಂತೆ ರಾಜ್ಯದ ಜಲಸಂಪನ್ಮೂಲಗಳು ಮತ್ತು ಬಳಕೆಯ ಕ್ಷೇತ್ರಗಳನ್ನು ಒಳಗೊಂಡು ಕರ್ನಾಟಕದ ಜಲ ಆಯೋಗ ಕಾರ್ಯನಿರ್ವಹಿಸಬೇಕು ಎನ್ನುವುದು ಆಶಯ
ಡಿ.ಕೆ. ಶಿವಕುಮಾರ್ ಜಲಸಂಪನ್ಮೂಲ ಸಚಿವ

ಪ್ರಸ್ತಾವಿತ ಆಯೋಗ ಉದ್ದೇಶ–ಅಧ್ಯಯನ ವ್ಯಾಪ್ತಿ

ಭವಿಷ್ಯದಲ್ಲಿ ನೀರಿನ ಬೇಡಿಕೆ ಮತ್ತು ಲಭ್ಯತೆಯ ಅಂದಾಜು

ಆಧುನಿಕ ನೀರಾವರಿ ಪದ್ಧತಿ ಮತ್ತು ಮಿತವ್ಯಯ

ಜಲಸಂಪನ್ಮೂಲಗಳ ಅಭಿವೃದ್ಧಿ ಮತ್ತು ವಿಪತ್ತು ನಿರ್ವಹಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.