ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಡಿಎ ಅವಧಿಯಲ್ಲಿ ರಾಜ್ಯಕ್ಕೆ ಬಂದ ತೆರಿಗೆ ಪಾಲು ₹2.87 ಲಕ್ಷ ಕೋಟಿ: ಸಿ.ಟಿ.ರವಿ

Published 26 ಮಾರ್ಚ್ 2024, 11:15 IST
Last Updated 26 ಮಾರ್ಚ್ 2024, 11:15 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ 2004 ರಿಂದ 2014 ರವರೆಗೆ ಮತ್ತು 2014 ರಿಂದ 2023ರವರೆಗೆ ಬಂದಿರುವ ತೆರಿಗೆ ಪಾಲಿನ ಮೊತ್ತ ಮತ್ತು ವಿಶೇಷ ಅನುದಾನಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಒತ್ತಾಯಿಸಿದರು.

ಸಿದ್ದರಾಮಯ್ಯ ಮತ್ತು ಕೃಷ್ಣಬೈರೇಗೌಡ ನಿರಂತರ ಸುಳ್ಳುಗಳನ್ನು ಹೇಳುವ ಮೂಲಕ ಕೇಂದ್ರ ಸರ್ಕಾರ ಕರ್ನಾಟಕ ವಿರೋಧಿ ಎಂಬುದನ್ನು ಬಿಂಬಿಸುವ ಕುತ್ಸಿತ ಉದ್ದೇಶದಿಂದ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕೃಷ್ಣಬೈರೇಗೌಡ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಬಹಿರಂಗ ಚರ್ಚೆಗೆ ಕರೆದಿದ್ದಾರೆ. ಈ ವಿಷಯವಾಗಿ ನಿರ್ಮಲಾ ಸೀತಾರಾಮನ್‌ ಅವರು ಸಂಸತ್ತು ಮತ್ತು ರಾಜ್ಯಸಭೆಯಲ್ಲಿ ಉತ್ತರ ನೀಡಿದ್ದಾರೆ. ರಾಜ್ಯಸಭೆಯಲ್ಲಿ ಹಾಜರಿದ್ದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಜೈರಾಂ ರಮೇಶ್‌ ಕೇಂದ್ರದ ಮಾಹಿತಿಯ ಬಗ್ಗೆ ಏಕೆ ತಕರಾರು ಎತ್ತಲಿಲ್ಲ. ಸುಮ್ಮನೇ ಏಕೆ ಕುಳಿತಿದ್ದರು. ಒಂದು ವೇಳೆ ನಿರ್ಮಲಾ ಸೀತಾರಾಮನ್ ಅವರು ತಪ್ಪು ಮಾಹಿತಿ ನೀಡಿದ್ದರೆ ಹಕ್ಕುಚ್ಯುತಿ ಮಂಡಿಸುವುದಕ್ಕೂ ಅವಕಾಶವಿತ್ತು ಎಂದು ಹೇಳಿದರು.

2004 ರಿಂದ 2014ರಲ್ಲಿ ಅಂದರೆ ಯುಪಿಎ ಅವಧಿಯಲ್ಲಿ ಕೇಂದ್ರದಿಂದ ಬಂದ ತೆರಿಗೆ ಪಾಲು ₹81,795 ಕೋಟಿ, 2014 ರಿಂದ 2024 ರ ಅವಧಿಯಲ್ಲಿ ₹2.87 ಲಕ್ಷ ಕೋಟಿ, ಅಂದರೆ ಶೇ 254 ರಷ್ಟು ಹೆಚ್ಚುವರಿ ಸಿಕ್ಕಿದೆ. ವಿಶೇಷ ಅನುದಾನ ಯುಪಿಎ ಅವಧಿಯ 10 ವರ್ಷಗಳಲ್ಲಿ ₹60,779 ಕೋಟಿ ಮತ್ತು ಮೋದಿ ನೇತೃತ್ವದ ಎನ್‌ಡಿಎ ಅವಧಿಯಲ್ಲಿ ₹2.8 ಲಕ್ಷ ಕೋಟಿ ಬಿಡುಗಡೆ ಆಗಿದೆ. ನಾವು ಹೇಳಿರುವುದು ಸುಳ್ಳು ಎನ್ನುವುದಾರೆ ಸಂಸತ್ತಿನಲ್ಲಿ ಹಕ್ಕುಚ್ಯುತಿ ಮಂಡಿಸಲಿ. ಕಾಂಗ್ರೆಸ್‌ ಮನೆದೇವ್ರೆ ಸುಳ್ಳು ಆಗಿರುವುದರಿಂದ ದಿನವೂ ಸುಳ್ಳುಗಳನ್ನು ಹೇಳುತ್ತಿರುತ್ತಾರೆ ಎಂದು ರವಿ ಹೇಳಿದರು.

ಕಾಂಗ್ರೆಸ್‌ ತಮ್ಮ ಪಕ್ಷದ ದಲಿತ ನಾಯಕರ ಮೂಲಕ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ದ್ವೇಷಪೂರಿತ ಮತ್ತು ಪ್ರಚೋದನಕಾರಿಯಾಗಿ ಹೇಳಿಕೆಗಳನ್ನು ಕೊಡಿಸುತ್ತಿರುವುದು ಕಾಂಗ್ರೆಸ್‌ ಟೂಲ್‌ಕಿಟ್‌ನ ಭಾಗ. ಅಸಹಿಷ್ಣುತೆ ಮತ್ತು ದ್ವೇಷವೇ ಕಾಂಗ್ರೆಸ್‌ನ ನೀತಿಯಾಗಿದೆ. ಮಲ್ಲಿಕಾರ್ಜುನ ಖರ್ಗೆ ಮೋದಿ ಅವರನ್ನು ವಿಷ ಸರ್ಪ ಎಂದು ಹೇಳಿದರೆ, ಅವರ ಪುತ್ರ ಪ್ರಿಯಾಂಕ್‌ ಚೋರ್‌ ಗುರು ಚಾಂಡಾಲ್‌ ಶಿಷ್ಯ ಎಂದಿದ್ದಾರೆ. ಸಚಿವ ಶಿವರಾಜ್‌ ತಂಗಡಗಿ ಅವರು ಮೋದಿ ಎನ್ನುವವರಿಗೆ ಕಪಾಳ ಮೋಕ್ಷ ಮಾಡಬೇಕು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಬಿಜೆಪಿಯವರ ಮನೆ ಹಾಳಾಗಿ ಹೋಗಲಿ ಎಂದಿದ್ದಾರೆ. ಅವರು ಏನು ಹೇಳ್ತಾರೋ ಅದಕ್ಕೆ ಉಲ್ಟಾ ಆಗುತ್ತದೆ. ಅವರ ಶಾಪ ಅವರಿಗೇ ತಿರುಗು ಬಾಣವಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT