ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೈಂಗಿಕ ದೌರ್ಜನ್ಯ ಪ್ರಕರಣ: ಸೂರಜ್ ರೇವಣ್ಣ ಜಾಮೀನು ಅರ್ಜಿ ತಿರಸ್ಕೃತ

Published 9 ಜುಲೈ 2024, 13:55 IST
Last Updated 9 ಜುಲೈ 2024, 13:55 IST
ಅಕ್ಷರ ಗಾತ್ರ

ಬೆಂಗಳೂರು: ಯುವಕನೊಂದಿಗೆ ಅಸಹಜ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಅವರ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

ಜಾಮೀನು ಕೋರಿ ಸೂರಜ್ ರೇವಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ಎನ್.ಶಿವಕುಮಾರ್ ಮಂಗಳವಾರ ಪ್ರಕಟಿಸಿದರು.

ವಿಚಾರಣೆಯಲ್ಲಿ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಅಶೋಕ್‌ ನಾಯಕ್‌, ಮಂಡಿಸಿದ್ದ "ಮೇಲ್ನೋಟಕ್ಕೆ ಆರೋಪಿ ವಿರುದ್ಧ ಬಲವಾದ ಸಾಕ್ಷ್ಯಗಳಿವೆ. ಜನಪ್ರತಿನಿಧಿಯೊಬ್ಬರ ಇಂತಹ ಕುಕೃತ್ಯ ಅಕ್ಷಮ್ಯ. ಒಂದು ವೇಳೆ ಆರೋಪಿಗೆ ಜಾಮೀನು ನೀಡಿದರೆ ಪ್ರಾಸಿಕ್ಯೂಷನ್ ಸಾಕ್ಷ್ಯ ನಾಶ ಮಾಡಬಹುದು. ರಾಜಕೀಯವಾಗಿ ಬಲಾಢ್ಯ ಹಿನ್ನಲೆಯ ಕುಟುಂಬದ ವ್ಯಕ್ತಿಯಾಗಿರುವ ಕಾರಣ ಇಂತಹವರಿಗೆ ಜಾಮೀನು ನೀಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆ ಮಾಡಿದಂತಾಗುತ್ತದೆ" ಎಂಬ ವಾದ ಸರಣಿಯನ್ನು ನ್ಯಾಯಾಲಯ ಮಾನ್ಯ ಮಾಡಿದೆ.

ಸೂರಜ್ ಪರ ಹೈಕೋರ್ಟ್ ನ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್, "ಇದು ಸೂರಜ್ ವಿರುದ್ಧದ ಷಡ್ಯಂತ್ರ. ರಾಜ್ಯ ಸರ್ಕಾರ ಸೂರಜ್ ಅವರ ಕುಟುಂಬವನ್ನು ಗುರಿಯಾಗಿಸಿಕೊಂಡಿದೆ. ಈ ಪ್ರಕರಣದಲ್ಲಿ ಪ್ರತಿ ದೂರು ದಾಖಲಾಗಿದೆ. ತಮ್ಮ ಮೇಲಿನ ಸುಲಿಗೆ ಆರೋಪದಿಂದ ತಪ್ಪಿಸಿಕೊಳ್ಳಲು ಈ ದೂರುದಾರ ಈ ಫಿರ್ಯಾದು ನೀಡಿದ್ದಾರೆ. ದೂರುದಾರ ಹಣಕ್ಕಾಗಿ ಬೇಡಿಕೆ ಇರಿಸಿರುವುದು ವೈರಲ್ ಆದ ಆಡಿಯೊದಲ್ಲಿದೆ. ಅರ್ಜಿದಾರ ಬಲವಂತದಿಂದ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದೆಲ್ಲಾ ಸುಳ್ಳು. ಸಂತ್ರಸ್ತ 27 ವರ್ಷದ ವ್ಯಕ್ತಿಯಾಗಿದ್ದು ಇಲ್ಲಿ ಬಲವಂತದ ಪ್ರಶ್ನೆಯೇ ಬರುವುದಿಲ್ಲ. ಸೂರಜ್ ಎಲ್ಲೂ ತಲೆ ಮರೆಸಿಕೊಂಡಿರಲಿಲ್ಲ. ಸ್ವತಃ ತಾವೇ ಠಾಣೆಗೆ ಹೋದಾಗ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪ್ರಕರಣದ ಸಂಪೂರ್ಣ ತನಿಖೆ ಮುಗಿದಿದೆ. ಆದ್ದರಿಂದ ಜಾಮೀನು ನೀಡಬೇಕು" ಎಂದು ಮನವಿ ಮಾಡಿದ್ದರು. ಆದರೆ, ನ್ಯಾಯಾಲಯ ಜಾಮೀನು ತಿರಸ್ಕರಿಸಿ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT