ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹ ತಡೆಗೆ ವಿನೂತನ ಯೋಜನೆ: ಈ ಗ್ರಾ.ಪಂ. ನೀಡುತ್ತೆ ತಾಳಿ ಉಡುಗೊರೆ

ಬಾಲ್ಯವಿವಾಹ ತಡೆಗೆ ವಿನೂತನ ಯೋಜನೆ: ₹2,500 ಕೊಡುಗೆ
Last Updated 17 ಡಿಸೆಂಬರ್ 2019, 2:00 IST
ಅಕ್ಷರ ಗಾತ್ರ

ಕಲಬುರ್ಗಿ: ಬಾಲ್ಯವಿವಾಹ ತಡೆಯುವ ನಿಟ್ಟಿನಲ್ಲಿ ಮುಂದಡಿ ಇಟ್ಟಿರುವ ಆಳಂದ ತಾಲ್ಲೂಕಿನ ಮುನ್ನಹಳ್ಳಿ ಗ್ರಾಮ ಪಂಚಾಯಿತಿಯು ವಧುವಿನ ತಾಳಿಯ ವೆಚ್ಚ ಭರಿಸುವ ‘ತಾಳಿ ಭಾಗ್ಯ’ ಯೋಜನೆ ಜಾರಿಗೊಳಿಸಿದೆ.

ಜಿಲ್ಲೆಯ ಹಿಂದುಳಿದ ತಾಲ್ಲೂಕುಗಳ ಪೈಕಿ ಒಂದಾಗಿರುವ ಆಳಂದ ಮಹಾರಾಷ್ಟ್ರದ ಗಡಿ ಭಾಗದಲ್ಲಿದೆ. ಅಲ್ಲಿ ಸಾಕ್ಷರತೆ ಕಡಿಮೆ ಇದೆ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ರೂಢಿ ಕೆಲವೆಡೆ ಚಾಲ್ತಿಯಲ್ಲಿದೆ. ಆದ್ದರಿಂದ ಬಾಲ್ಯವಿವಾಹ ತಡೆಯಲು ಗ್ರಾಮ ಪಂಚಾಯಿತಿ ಈ ಯೋಜನೆ ಜಾರಿಗೆ ತಂದಿದೆ.

‘ಮುನ್ನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುನ್ನಹಳ್ಳಿ ಮತ್ತು ಬಸವನ ಸಂಗೋಳಗಿ ಗ್ರಾಮಗಳಿವೆ. ಈ ಎರಡು ಗ್ರಾಮಗಳ 18 ವರ್ಷ ಮೇಲ್ಪಟ್ಟ ಯುವತಿಯರ ಮದುವೆಯ ಬಗ್ಗೆ ಅವರ ಪೋಷಕರು ನಮಗೆ ಮಾಹಿತಿ ನೀಡಿದರೆ ತಾಳಿಗಾಗಿ ಚಿನ್ನ ಖರೀದಿಗೆ ಗ್ರಾಮ ಪಂಚಾಯಿತಿಯಿಂದ₹2,500 ನೀಡಲಾಗುವುದು.ಈ ಆಸೆಗಾದರೂ ಬಡವರು ತಮ್ಮ ಮಕ್ಕಳಿಗೆ ಬಾಲ್ಯವಿವಾಹ ಮಾಡುವ ಬದಲು ಪ್ರಾಪ್ತ ವಯಸ್ಸಿಗೆ ಬರುವವರೆಗೆ ಕಾಯುತ್ತಾರೆ ಎಂಬ ನಂಬಿಕೆ ನಮ್ಮದು’ ಎನ್ನುತ್ತಾರೆಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ಧಾರೂಢ ಬುಜುರ್ಕೆ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಿಯಾಜ್‌ ಬಳಿಚಕ್ರ.

‘ವಿದ್ಯಾರ್ಥಿನಿಯರ ಸುರಕ್ಷತೆಗಾಗಿ ಗ್ರಾಮ ಪಂಚಾಯಿತಿಯಿಂದ ಶಾಲಾ ಬಸ್‌ ಖರೀದಿಸಿದ್ದೇವೆ.ಇದೀಗ ‘ತಾಳಿ ಭಾಗ್ಯ’ ಯೋಜನೆ ಜಾರಿಗೆ ತಂದಿದ್ದೇವೆ.ಇದಕ್ಕಾಗಿ ಯಾರ ನೆರವನ್ನೂ ಪಡೆಯುವುದಿಲ್ಲ. ಪ್ರತಿ ವರ್ಷ ಹೆಚ್ಚು ತೆರಿಗೆ ಸಂಗ್ರಹಿಸಿ ತಾಳಿ ಖರೀದಿ ಖರ್ಚನ್ನು ನಿಭಾಯಿಸುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT