ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಸಂಗ್ರಹ | ಗುರಿ ಮುಟ್ಟದಿದ್ದರೆ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ

ಐದು ಇಲಾಖೆಗಳ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ
Published 11 ಜೂನ್ 2024, 22:30 IST
Last Updated 11 ಜೂನ್ 2024, 22:30 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆ ಮುಗಿದ ಬೆನ್ನಲ್ಲೇ ಸಂಪನ್ಮೂಲ ಕ್ರೋಡೀಕರಣದ ಜವಾಬ್ದಾರಿ ಹೊಂದಿರುವ ಐದು ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವರಮಾನ ಸೋರಿಕೆ ತಡೆಗೆ ಬಿಗಿ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು. ತೆರಿಗೆ ಸಂಗ್ರಹದಲ್ಲಿ ಗುರಿ ಮುಟ್ಟದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆಯನ್ನೂ ನೀಡಿದರು.

ವಿಧಾನಸೌಧ ಮತ್ತು ಶಕ್ತಿ ಭವನದಲ್ಲಿ ಮಂಗಳವಾರ ಇಡೀ ದಿನ ಸಭೆ ನಡೆಸಿದ ಅವರು, ಹಣಕಾಸು ಇಲಾಖೆ ಅಧಿಕಾರಿಗಳ ಜತೆಗೆ ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಗಣಿ ಮತ್ತು ಭೂ ವಿಜ್ಞಾನ ಹಾಗೂ ಸಾರಿಗೆ ಇಲಾಖೆಗಳ ಪ್ರಗತಿ ಪರಿಶೀಲಿಸಿದರು. ಮೊದಲ ತ್ರೈಮಾಸಿಕ ಅವಧಿಯಲ್ಲಿ ಗುರಿ ತಲುಪಲು ವಿಫಲರಾದ ಅಧಿಕಾರಿಗಳ ಸ್ಥಾನಪಲ್ಲಟ ಮಾಡುವುದಾಗಿ ಎಚ್ಚರಿಸಿದರು.

ಪ್ರಸಕ್ತ ಆರ್ಥಿಕ ವರ್ಷದ ಮೊದಲ ಎರಡು ತಿಂಗಳಲ್ಲಿ ವಾಣಿಜ್ಯ ತೆರಿಗೆ ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಗಳು ಗುರಿ ಸಾಧಿಸಿವೆ. ಅಬಕಾರಿ ಇಲಾಖೆಯಲ್ಲಿ ತೆರಿಗೆ ಸಂಗ್ರಹ ಏಪ್ರಿಲ್‌ ತಿಂಗಳಲ್ಲಿ ಕುಸಿದಿತ್ತು. ಮೇ ತಿಂಗಳಿನಿಂದ ಏರಿಕೆ ಹಾದಿಯಲ್ಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಬಕಾರಿ ಸಚಿವ ಆರ್‌ಬಿ. ತಿಮ್ಮಾಪುರ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ, ಹಣಕಾಸು ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಕಾರ್ಯದರ್ಶಿ ಪಿ.ಸಿ. ಜಾಫರ್‌ ಹಾಗೂ ಆಯಾ ಇಲಾಖೆಗಳ ಮುಖ್ಯಸ್ಥರು ಸಭೆಯಲ್ಲಿದ್ದರು.

ಆರಂಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಪ್ರಗತಿ ಪರಿಶೀಲನೆ ನಡೆಯಿತು. ಕೆಲವು ಅಧಿಕಾರಿಗಳು ತೆರಿಗೆ ಸಂಗ್ರಹದಲ್ಲಿ ಶೇಕಡ 90ಕ್ಕಿಂತ ಕಡಿಮೆ ಗುರಿ ಸಾಧನೆ ಮಾಡಿರುವುದಕ್ಕೆ ಮುಖ್ಯಮಂತ್ರಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತೆರಿಗೆ ಸಂಗ್ರಹದಲ್ಲಿನ ಗುರಿ ಸಾಧನೆ ಕುರಿತು ಪ್ರತಿ ತಿಂಗಳು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ. ಶಿಖಾ ಅವರಿಗೆ ಸೂಚಿಸಿದರು.

‘ತೆರಿಗೆ ಸಂಗ್ರಹದಲ್ಲಿನ ಕಾರ್ಯಕ್ಷಮತೆಯನ್ನು ಆಧಾರವಾಗಿಟ್ಟುಕೊಂಡೇ ವರ್ಗಾವಣೆ ಮಾಡುತ್ತೇನೆ. ಬೇರೆ ಯಾವುದೇ ಪ್ರಭಾವಕ್ಕೂ ನಾನು ಮಣಿಯುವುದಿಲ್ಲ. ತೆರಿಗೆ ಸಂಗ್ರಹದಲ್ಲಿ ನಿರ್ಲಕ್ಷ್ಯ ತೋರಿದರೆ ವರ್ಗಾವಣೆಗೆ ಸಿದ್ಧರಾಗಿರಬೇಕು’ ಎಂಬ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನೀಡಿದರು.

ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ (ಪ್ರಕರಣಗಳಲ್ಲಿ) ಋಣಾತ್ಮಕ ವಿಲೇವಾರಿ ಆಗುತ್ತಿರುವ ಪ್ರಕರಣಗಳನ್ನು ಗುರುತಿಸಿ. ಅಂತಹ ಪ್ರದೇಶಗಳಲ್ಲಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ತೆರಿಗೆಗೆ ಸಂಬಂಧಿಸಿದ ಮೇಲ್ಮನವಿ ಪ್ರಕರಣಗಳನ್ನು ಮೂರು ತಿಂಗಳೊಳಗೆ ವಿಲೇವಾರಿ ಮಾಡಬೇಕು ಎಂದು ಗಡುವು ವಿಧಿಸಿದರು.

ನೇಮಕಾತಿ ಪ್ರಸ್ತಾವ ಸಲ್ಲಿಸಲು ಸೂಚನೆ: ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲಿಸಿದ ಸಿದ್ದರಾಮಯ್ಯ, ಇಲಾಖೆಗೆ ಅಗತ್ಯವಿರುವ ಅಬಕಾರಿ ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಕಾನ್‌ಸ್ಟೆಬಲ್‌ಗಳ ನೇಮಕಾತಿ ಹಾಗೂ ವಾಹನಗಳ ಖರೀದಿಗೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಿದರು.

ನೆರೆಯ ರಾಜ್ಯಗಳಿಂದ ರಾಜ್ಯಕ್ಕೆ ಮದ್ಯ ಕಳ್ಳಸಾಗಣೆ ತಡೆಯಲು ನಿಗಾ ಹೆಚ್ಚಿಸಬೇಕು. ಮದ್ಯ ಮಾರಾಟ ಪರವಾನಗಿದಾರರಿಗೆ ಕಿರುಕುಳ ನೀಡಬಾರದು ಎಂದು ತಾಕೀತು ಮಾಡಿದರು.

ಎರಡು ತಿಂಗಳ ವರಮಾನ ಸಂಗ್ರಹ ಇಲಾಖೆ; ಸಂಗ್ರಹವಾಗಿರುವ ಮೊತ್ತ (₹ ಕೋಟಿಗಳಲ್ಲಿ) ವಾಣಿಜ್ಯ ತೆರಿಗೆ;17,089 ನೋಂದಣಿ ಮತ್ತು ಮುದ್ರಾಂಕ;3,736.73 ಅಬಕಾರಿ;7,714.03

ಕಾರ್ಯಾಚರಣೆ ಹೆಚ್ಚಿಸಲು ತಾಕೀತು ‘ವಾಣಿಜ್ಯ ತೆರಿಗೆ ಸೋರಿಕೆ ತಡೆಗೆ ನಿರಂತರ ಕಾರ್ಯಾಚರಣೆ ನಡೆಸಬೇಕು. ತೆರಿಗೆ ರಹಿತ ವಹಿವಾಟು ನಡೆಸುವವರನ್ನು ಪತ್ತೆಹಚ್ಚಿ ದಂಡ ವಿಧಿಸಬೇಕು. ಬೆಂಗಳೂರು ನಗರದಲ್ಲಿ ತೆರಿಗೆ ವರಮಾನ ಸಂಗ್ರಹಕ್ಕೆ ಹೆಚ್ಚು ಅವಕಾಶವಿದೆ. ನಗರದಲ್ಲಿ ಹೆಚ್ಚಿನ ತಂಡಗಳನ್ನು ಕಾರ್ಯಾಚರಣೆಗೆ ನಿಯೋಜಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರಿಗೆ ನಿರ್ದೇಶನ ನೀಡಿದರು.

ಅಬಕಾರಿ ಇಲಾಖೆಗೆ ಹೊಸ ತಂತ್ರಾಂಶ ಅಬಕಾರಿ ಇಲಾಖೆಯ ಎಲ್ಲ ಸೇವೆಗಳನ್ನು ಆನ್‌ಲೈನ್‌ ಮೂಲಕ ಒದಗಿಸಲು ಅನುಕೂಲವಾಗುವಂತೆ ರೂಪಿಸಿರುವ ತಂತ್ರಾಂಶದ ಎರಡನೇ ಆವೃತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ನಡೆದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲೇ ಚಾಲನೆ ನೀಡಿದರು. ಮದ್ಯದಂಗಡಿಗಳ ಪರವಾನಗಿ ನವೀಕರಣ ಶುಲ್ಕ ಪಾವತಿ ಇತರ ಇ– ಸೇವೆಗಳು ಅಬಕಾರಿ ಕಾಯ್ದೆ ಉಲ್ಲಂಘನೆಯ ಅಪರಾಧ ಪ್ರಕರಣಗಳ ಮಾಹಿತಿ ಒಂದೇ ತಂತ್ರಾಂಶದಲ್ಲಿ ಲಭ್ಯವಾಗಲಿದೆ. ರಾಜ್ಯದ 13122 ಮದ್ಯದಂಗಡಿಗಳು ಮತ್ತು 68 ಮದ್ಯ ಉತ್ಪಾದನಾ ಘಟಕಗಳಿಗೆ ವಿಶೇಷ ಗುರುತಿನ ಸಂಖ್ಯೆಯನ್ನು ನೀಡಿ ಈ ತಂತ್ರಾಂಶದಲ್ಲಿ ಜೋಡಿಸಲಾಗಿದೆ. ಹೊಸ ತಂತ್ರಾಂಶಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ನವೀಕರಣಗೊಂಡಿರುವ ಐದು ಪರವಾನಗಿದಾರರಿಗೆ ಪರವಾನಗಿ ಪತ್ರಗಳನ್ನು ಆನ್‌ಲೈನ್‌ ಮೂಲಕವೇ ವಿತರಿಸಿದರು.

ಗಣಿ ಹರಾಜು ಪ್ರಕ್ರಿಯೆ ಆರಂಭಿಸಲು ಸೂಚನೆ ಹರಾಜಿಗೆ ಲಭ್ಯವಿರುವ ಗಣಿಗಳ ಹರಾಜು ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು. ಉಪ ಖನಿಜ ರಾಜಸ್ವ ಸಂಗ್ರಹ ಹೆಚ್ಚಿಸಲು ಅರಣ್ಯ ಇಲಾಖೆ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಸೂಚಿಸಿದರು. ಕಂದಾಯ ಇಲಾಖೆ ‘ಲ್ಯಾಂಡ್‌ ಬ್ಯಾಂಕ್‌’ ಸೃಜಿಸಿದಲ್ಲಿ ಅರಣ್ಯ ಪರಿಹಾರ ಭೂಮಿ ನೀಡಲು ಅನುಕೂಲವಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು. ಕ್ರಷರ್‌ಗಳ ರಾಜಸ್ವ ಸಂಗ್ರಹ ಸೋರಿಕೆ ತಡೆಗಟ್ಟಲು ಡ್ರೋನ್‌ ಸರ್ವೇ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ ಬಳಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT