ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆ ಮೈದಾನ | ರಸ್ತೆ ವಿಸ್ತರಣೆ : ಪರಿಹಾರಕ್ಕೆ ₹1,400 ಕೋಟಿ ಮೌಲ್ಯದ ಟಿಡಿಆರ್‌

Published 18 ಏಪ್ರಿಲ್ 2024, 16:32 IST
Last Updated 18 ಏಪ್ರಿಲ್ 2024, 16:32 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅರಮನೆ ಮೈದಾನದ ಎರಡೂ ಕಡೆಗಳಲ್ಲಿರುವ ರಸ್ತೆಗಳ ವಿಸ್ತರಣೆಗಾಗಿ ಮೈದಾನದ ಖಾಲಿ ಭೂಮಿ ವಶಕ್ಕೆ ತೆಗೆದುಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಇದಕ್ಕೆ ಪ್ರತಿಯಾಗಿ ಮೈಸೂರು ರಾಜ ವಂಶಸ್ಥರಿಗೆ ಸುಮಾರು ₹1,400 ಕೋಟಿ ಮೌಲ್ಯದಷ್ಟು ಟಿಡಿಆರ್‌ (ಅಭಿವೃದ್ಧಿ ಹಕ್ಕುಗಳ ವರ್ಗಾವಣೆ) ನೀಡಲು ಒಪ್ಪಿಕೊಂಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸರ್ಕಾರಗಳು ಈ ಹಿಂದಿನ ಆದೇಶಗಳನ್ನು ಮೂರು ಬಾರಿ ಮಾರ್ಪಾಡು ಮಾಡಿವೆ. ವಿವಾದಿತ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವುದಕ್ಕೆ ಪ್ರತಿಯಾಗಿ ಹೆಚ್ಚುವರಿಯಾಗಿ 13.91 ಲಕ್ಷ ಚದರಡಿ ನಿರ್ಮಿಸಿದ ಪ್ರದೇಶ ಹಸ್ತಾಂತರಿಸುವ ಪ್ರಸ್ತಾಪವೂ ಒಳಗೊಂಡಿತ್ತು.

ಟಿಡಿಆರ್‌ನಿಂದಾಗಿ ಅನುಮತಿ ನೀಡಿದ ವ್ಯಾಪ್ತಿಯನ್ನು ಮೀರಿ ನಿರ್ಮಾಣ ಮಾಡುವುದಕ್ಕೆ ಡೆವಲಪರ್‌ಗಳಿಗೆ ಅವಕಾಶವಿರುತ್ತದೆ. ಸರ್ಕಾರ ಪರಿಹಾರವಾಗಿ ಹಣವನ್ನು ನೀಡಲು ಸಾಧ್ಯವಾಗದ ಸಂದರ್ಭಗಳಲ್ಲಿ ಟಿಡಿಆರ್‌ ಅವಕಾಶವನ್ನು ನೀಡುತ್ತದೆ. ರಸ್ತೆ ವಿಸ್ತರಣೆಗಾಗಿ ಅರಮನೆಗೆ ಸೇರಿದ 15.39 ಎಕರೆ ಭೂಮಿಯನ್ನು ಬಳಕೆ ಮಾಡಿಕೊಳ್ಳಲು ಮತ್ತು ಅದಕ್ಕೆ ಟಿಡಿಆರ್‌ ನೀಡಲು ಮಾರ್ಚ್‌ನಲ್ಲಿ ನಡೆದ ಸಚಿವ ಸಂಪುಟದಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಂಡಿತ್ತು.

ಅರಮನೆ ಮೈದಾನಕ್ಕೆ ಹೊಂದಿಕೊಂಡಿರುವ ಜಯಮಹಲ್ ಮತ್ತು ಬಳ್ಳಾರಿ ರಸ್ತೆಗಳ ವಿಸ್ತರಣೆಗೆ ಈ ಭೂಮಿ ಬಳಕೆಯಾಗಲಿದೆ. ಇದಕ್ಕೆ ಪೂರಕವಾಗಿ ಮೇಖ್ರಿ ಸರ್ಕಲ್‌ನಿಂದ ಬಿಡಿಎ ಜಂಕ್ಷನ್‌ವರೆಗೆ ಮತ್ತು ಮೇಖ್ರಿ ಸರ್ಕಲ್‌ನಿಂದ ದಂಡು ರೈಲ್ವೆ ನಿಲ್ದಾಣದವರೆಗೆ ಅರಮನೆ ಭೂಮಿಯನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು.

2019ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ರಸ್ತೆ ವಿಸ್ತರಣೆಗಾಗಿ ಅರಮನೆ ಭೂಮಿ ವಶಕ್ಕೆ ತೆಗೆದುಕೊಳ್ಳಲು ತೀರ್ಮಾನ ತೆಗೆದುಕೊಂಡು, ಆದೇಶ ಹೊರಡಿಸಿತ್ತು. ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ 2022ರ ಸೆಪ್ಟೆಂಬರ್‌ನಲ್ಲಿ ಆದೇಶವೊಂದನ್ನು ಹೊರಡಿಸಿ, ಎರಡೂ ಕಡೆಯ ರಸ್ತೆ ವಿಸ್ತರಣೆ ಯೋಜನೆಯನ್ನು ಕೈಬಿಟ್ಟಿತ್ತು. ವಶಪಡಿಸಿಕೊಳ್ಳುವ ಭೂಮಿಗೆ ಪರಿಹಾರಾರ್ಥವಾಗಿ ದೊಡ್ಡ ಮೊತ್ತದ ಟಿಡಿಆರ್‌ ನೀಡಬೇಕಾಗುತ್ತದೆ ಎಂಬ ಕಾರಣವನ್ನು ನೀಡಿತ್ತು.

ಆದರೆ, ಅಂದಿನ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು ಆದೇಶವನ್ನು ಜಾರಿ ಮಾಡದೆ, ಆದೇಶದ ಬಗ್ಗೆ ಮರುಚಿಂತನೆ ನಡೆಸುವುದು ಸೂಕ್ತ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅರಮನೆ ಮೈದಾನ ಪ್ರದೇಶ ಇನ್ನೂ ಕೃಷಿ ಭೂಮಿಯ ಸ್ಥಿತಿಯಲ್ಲೇ ಇದೆ. ಭೂಪರಿವರ್ತನೆಯೂ ಆಗಿಲ್ಲ. ಖಾತಾ ಕೂಡ ಆಗಿಲ್ಲ. ಭೂಮಿಯ ಮಾರ್ಗಸೂಚಿ ಮೌಲ್ಯದ ನಾಲ್ಕು ಪಟ್ಟನ್ನು ಮೌಲ್ಯವಾಗಿ ಪರಿಗಣಿಸಬೇಕಾಗುತ್ತದೆ. ಅಂದರೆ 13,91,742 ಚದರಡಿ ಅಥವಾ ₹1,396 ಕೋಟಿ ಮೌಲ್ಯದ್ದಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದರು. 

472 ಎಕರೆ ವಿಸ್ತೀರ್ಣದ ಅರಮನೆ ಮೈದಾನವನ್ನೇ ವಶಕ್ಕೆ ತೆಗೆದುಕೊಳ್ಳುವುದು ಸೂಕ್ತ. ಇದಕ್ಕಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಮಂಜುನಾಥ್‌ ಪ್ರಸಾದ್‌ ಸಲಹೆ ನೀಡಿದ್ದರು.

ರಾಜ್ಯ ಸರ್ಕಾರ ಮೇ 17ರೊಳಗೆ ಟಿಡಿಆರ್‌ ನೀಡಲು ತೀರ್ಮಾನಿಸಿದೆ. ಇನ್ನು ತಡ ಮಾಡಿದರೆ, ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. ಸರ್ಕಾರ ಅರಮನೆ ಮೈದಾನಕ್ಕೆ ಕೌಂಪೌಂಡ್ ಹಾಕಿದ್ದು, ಇನ್ನೂ ಪರಿಹಾರವನ್ನು ನೀಡಲಿಲ್ಲ ಎಂಬ ಅಂಶವೂ ಸುಪ್ರೀಂ ಕೋರ್ಟ್‌ನ ಗಮನದಲ್ಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT