ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Telangana Election Result | ಅಹಂಕಾರಕ್ಕೆ ಭಾರಿ ಬೆಲೆ ತೆತ್ತ ಕೆಸಿಆರ್‌

Published 4 ಡಿಸೆಂಬರ್ 2023, 4:06 IST
Last Updated 4 ಡಿಸೆಂಬರ್ 2023, 4:06 IST
ಅಕ್ಷರ ಗಾತ್ರ

ಬೆಂಗಳೂರು: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ (ಕೆಸಿಆರ್‌) ಅವರು ತಮ್ಮ ಅಹಂಕಾರಕ್ಕೆ ಭಾರಿ ಬೆಲೆ ತೆತ್ತಿದ್ದಾರೆ. ಎರಡು ಬಾರಿ ಅಧಿಕಾರದ ಗದ್ದುಗೆಯನ್ನು ಸುಲಭವಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಅವರು, ಮೂರನೇ ಬಾರಿ ಜೋರಾಗಿಯೇ ಎಡವಿ ಬಿದ್ದಿದ್ದಾರೆ. ಹೀಗಾಗಿ ದಕ್ಷಿಣ ಭಾರತದಲ್ಲಿ ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ‘ದಾಖಲೆ’ ಬರೆಯುವ ಅವಕಾಶ ಕಳೆದುಕೊಂಡರು.

ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷದ ಚುಕ್ಕಾಣಿ ಹಿಡಿದಿರುವ ಕೆಸಿಆರ್‌ ಅವರು ‘ದೊರೆ’ಯಂತೆ ನಡೆದುಕೊಳ್ಳುವುದನ್ನು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ‘ದೊರಲ ತೆಲಂಗಾಣ V/S ಪ್ರಜಲ ತೆಲಂಗಾಣ‘ ಎಂದು ಇಡೀ ಚುನಾವಣಾ ಪ್ರಚಾರದುದ್ದಕ್ಕೂ ಕೂಗಿ ಕೂಗಿ ಹೇಳಿದರು. ಪಕ್ಷದ ಕಾರ್ಯಕರ್ತರೂ ಅದೇ ಧಾಟಿಯಲ್ಲಿ ಮಾತನಾಡಿದರು. ಅವರು ತಮ್ಮದೇ ಮನದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಜನರು ಖುಷಿಪಟ್ಟರು. ಏಕೆಂದರೆ, ಕೆಸಿಆರ್‌ ಅವರ ಉಡಾಫೆ ವರ್ತನೆ ಮತ್ತು ಮಾತು ಜನರಲ್ಲಿ ರೇಜಿಗೆ ತರಿಸಿತ್ತು.

ಕಾಂಗ್ರೆಸ್‌ನ ಭರ್ಜರಿ ಗೆಲುವಿನ ಹಿಂದೆ ಕೆಸಿಆರ್‌ ಮಾಡಿದ ಸರಣಿ ತಪ್ಪುಗಳ ಪಾಲು ಹೆಚ್ಚಿದೆ. ಜನರಿರಲಿ, ಸ್ವತಃ ಸಚಿವರು, ಶಾಸಕರು, ಪಕ್ಷದ ಮುಖಂಡರೇ ಮುಖ್ಯಮಂತ್ರಿಯನ್ನು ಭೇಟಿ ಮಾಡುವುದೇ ಕಷ್ಟವಾಗಿತ್ತು. ತೋಟದಮನೆಯಿಂದಲೇ ಆಡಳಿತ ನಡೆಯುತ್ತಿತ್ತು. ತಮ್ಮ ಹೆಸರು ಶಾಶ್ವತವಾಗಿ ಉಳಿಯಬೇಕು ಎನ್ನುವ ಕಾರಣಕ್ಕಾಗಿ ಜನಪ್ರಿಯ ಯೋಜನೆಗಳ ಬೆನ್ನುಬಿದ್ದರು. ಹತ್ತಾರು ‘ಬಂಧು’ ಯೋಜನೆಗಳನ್ನು ಘೋಷಿಸಿದ್ದರು. ಅವುಗಳನ್ನು ಜಾರಿಗೆ ತರಲು ಹಣವಿಲ್ಲದೆ ಏದುಸಿರುಬಿಟ್ಟಿದ್ದರು. ಯೋಜನೆಗಳ ಫಲ ಸಿಗದೇ ಸಾಮಾನ್ಯ ಜನರ ಸಿಟ್ಟು ನೆತ್ತಿಗೇರಿತ್ತು. ಇದಕ್ಕೆ ಕಳಶವಿಟ್ಟಂತೆ ಬಿಆರ್‌ಎಸ್‌ ಪಕ್ಷವು ಕೆಸಿಆರ್‌ ‘ಕುಟುಂಬದ ಆಸ್ತಿ’ ಎನ್ನುವಂತಾಗಿತ್ತು. ಬಿಆರ್‌ಎಸ್‌ ಪಕ್ಷ ಎಂದರೆ ಕೆಸಿಆರ್‌, ಅವರ ಪುತ್ರ ಕೆ.ಟಿ.ರಾಮರಾವ್‌, ಪುತ್ರಿ, ವಿಧಾನಪರಿಷತ್‌ ಸದಸ್ಯೆ ಕೆ.ಕವಿತಾ ರಾವ್‌, ಸೋದರಳಿಯ ಹರೀಶ್‌ ರಾವ್‌ ಎನ್ನುವಂತಾಗಿತ್ತು. ಸ್ವಜನಪಕ್ಷಪಾತ ಎಲ್ಲೆ ಮೀರಿತ್ತು. ಜನರ ತಾಳ್ಮೆಯೂ ಕೂಡ.

ಆಡಳಿತ ಪಕ್ಷದ ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದರು. ಸರ್ಕಾರದ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ‘ಕಮಿಷನ್‌’ ಪಡೆದ ಆರೋಪ ಜೋರಾಗಿಯೇ ಕೇಳಿಬಂದಿತ್ತು. ಕನಿಷ್ಠ 30 ಶಾಸಕರ ಮೇಲೆ ಜನರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಆದರೆ, ಕೆಸಿಆರ್‌ ಅವುಗಳನ್ನು ಗಣನೆಗೇ ತೆಗೆದುಕೊಳ್ಳದೆ ಟಿಕೆಟ್‌ ಕೊಟ್ಟು ದೊಡ್ಡ ತಪ್ಪು ಮಾಡಿದರು.

ತೆಲಂಗಾಣ ರಾಜ್ಯ ಲೋಕಸೇವಾ ಆಯೋಗದ ಮೂಲಕ ಗ್ರೂಪ್‌ 1 ಮತ್ತು ಗ್ರೂಪ್‌ 2 ಹುದ್ದೆಗಳ ನೇಮಕಾತಿ ವಿಷಯದಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಯಿತು. ಹತ್ತು ವರ್ಷಗಳಿಂದ ಉದ್ಯೋಗದ ಕನಸು ಕಾಣುತ್ತಿದ್ದ ಲಕ್ಷಾಂತರ ಉದ್ಯೋಗಾಂಕಾಕ್ಷಿಗಳು ಹತಾಶೆಗೆ ಜಾರಿದ್ದರು. ಇದು ಸಿಟ್ಟಾಗಿ ಪರಿವರ್ತನೆಗೊಂಡಿತು.

ಹತ್ತು ವರ್ಷಗಳಿಂದ ನೆಲಕಚ್ಚಿ ಮಲಗಿದ್ದ ತೆಲಂಗಾಣ ಕಾಂಗ್ರೆಸ್‌ಗೆ ಪಕ್ಕದ ಕರ್ನಾಟಕದಲ್ಲಿನ ಗೆಲುವು ಮೈಕೊಡವಿಕೊಂಡು ಮೇಲೆದ್ದು ಕೂರುವಂತೆ ಮಾಡಿತು. ಕೇವಲ ಮೂರು ತಿಂಗಳಲ್ಲಿ ‘ಪವಾಡ’ ಎನ್ನುವಂತೆ ಕಾಂಗ್ರೆಸ್‌ ಎದ್ದುನಿಂತಿತು. ಆಡಳಿತ ಪಕ್ಷಕ್ಕಿಂತ ಮೊದಲೇ ‘ಚುನಾವಣಾ ಕಣ’ವನ್ನು ಹದಮಾಡಿಕೊಂಡಿತ್ತು. ರಣತಂತ್ರಗಳನ್ನು ಹೆಣೆಯ ತೊಡಗಿತ್ತು. ಆರು ಗ್ಯಾರಂಟಿಗಳನ್ನು ಘೋಷಣೆ ಮಾಡಿತು. ಅವುಗಳ ಬಗೆಗೆ ಜನರು ಒಲವು ತೋರಲು ಆರಂಭಿಸಿದರು. ಕಾಂಗ್ರೆಸ್‌ ಇಡೀ ತಂಡವಾಗಿ ಕೆಲಸ ಮಾಡಲು ಆರಂಭಿಸಿತು. ನಾಯಕ ರಾಹುಲ್‌ ಗಾಂಧಿ ಸಾರಥಿಯಂತೆ ನಿಂತರು. ಪ್ರಜೆಗಳಿಗೆ ‘ಪ್ರಭುತ್ವ’ ಕುರಿತಾಗಿ ಇದ್ದ ದೊಡ್ಡ ಪ್ರಮಾಣದ ಆಕ್ರೋಶವನ್ನು ಗುರುತಿಸುವಲ್ಲಿ ಸಫಲರಾದರು. ಅದನ್ನು ಬಡಿದೆಬ್ಬಿಸಿದರು. ರಾಜ್ಯದ ಮೂಲೆ ಮೂಲೆಯಲ್ಲೂ ರೈತರು, ಯುವಕರು, ಮಹಿಳೆಯರು, ಹಿಂದುಳಿದವರು, ಅಲ್ಪಸಂಖ್ಯಾತರು, ನೌಕರರು ಸರ್ಕಾರವನ್ನು ಬದಲಿಸುವ ಮಾತುಗಳನ್ನು ಆಡತೊಡಗಿದರು. 

ತೆಲಂಗಾಣ ರೈತರ ದಶಕಗಳ ಕನಸು ಕಾಳೇಶ್ವರ ಏತ ನೀರಾವರಿ ಯೋಜನೆ. ಇದಕ್ಕೆ ಸುಮಾರು ₹ 1 ಲಕ್ಷಕ್ಕೂ ಅಧಿಕ ಕೋಟಿ ಖರ್ಚಾಗಿದೆ. ಇದು ರಾಜ್ಯದ ಮಹತ್ವಾಕಾಂಕ್ಷೆ ಯೋಜನೆ. ಇದರಲ್ಲಿ ಕೆಸಿಆರ್‌ ಭಾರೀ ಭ್ರಷ್ಟಾಚಾರ ಮಾಡಿದ್ದಾರೆ ಎನ್ನುವ ಆರೋಪವನ್ನು ಕಾಂಗ್ರೆಸ್‌, ಬಿಜೆಪಿ ಮಾಡುತ್ತಲೇ ಬಂದಿದ್ದವು, ಜನರು ನಂಬಿರಲಿಲ್ಲ. ತಿಂಗಳ ಹಿಂದೆಯಷ್ಟೇ ಮೇಡಿಗಡ್ಡ ಬ್ಯಾರೇಜ್‌ನ ‘ಮೂರು ಪಿಲ್ಲರ್‌’ಗಳು ಕುಸಿದವು. ಇದನ್ನು ಕಾಂಗ್ರೆಸ್‌ ಚುನಾವಣೆ ವಿಷಯವನ್ನಾಗಿ ಮಾಡಿತು. ಆಕ್ರಮಣಕಾರಿ ಪ್ರಚಾರವೂ ಸೇರಿದಂತೆ ಇವುಗಳೆಲ್ಲೂ ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿದವು.

ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೋರೇಷನ್‌ ಚುನಾವಣೆಯಲ್ಲಿ 48 ಸ್ಥಾನ ಗೆದ್ದು  ಬಿಜೆಪಿ ಅದ್ಭುತ ಪ್ರದರ್ಶನ ನೀಡಿತು. ಇದು ಬಿಆರ್‌ಎಸ್‌ಗೆ ಬಿಜೆಪಿ ‘ಪರ್ಯಾಯ’ ಎನ್ನುವಂತೆ ಜನರು ಆಸೆಗಣ್ಣಿನಿಂದ ನೋಡುತ್ತಿದ್ದರು. ಆದರೆ, ದೆಹಲಿ ಅಬಕಾರಿ ಹಗರಣದಲ್ಲಿ ಕೆಸಿಆರ್‌ ಪುತ್ರಿ ಕೆ.ಕವಿತಾ ರಾವ್‌ ಅವರನ್ನು ಇ.ಡಿ ಬಂಧಿಸಲಿಲ್ಲ. ಇದರ ಹಿಂದೆ ಬಿಜೆಪಿ, ಬಿಆರ್‌ಎಸ್ ಒಳಒಪ್ಪಂದವಾಗಿದೆ ಎನ್ನುವ ಭಾವನೆ ಜನರಲ್ಲಿ ಬಲವಾಯಿತು. ಬಿಜೆಪಿ ಸೊಗಸಾದ ಅವಕಾಶವನ್ನು ಕೈ ಚೆಲ್ಲಿತು.

ಈ ಚುನಾವಣೆಯಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳುವ ತವಕದಲ್ಲಿದ್ದ ಬಿಜೆಪಿ ಹಿಂದುಳಿದ ವರ್ಗಕ್ಕೆ ಮುಖ್ಯಮಂತ್ರಿ ಸ್ಥಾನ ನೀಡುವುದಾಗಿ ಘೋಷಿಸಿತು. ಹಿಂದುತ್ವದ ಪ್ರಯೋಗ ಶಾಲೆಯನ್ನಾಗಿಸಿಕೊಂಡಿರುವ ಉತ್ತರ ತೆಲಂಗಾಣದ ಆದಿಲಾಬಾದ್‌ ಮತ್ತು ನಿಜಾಮಾಬಾದ್‌  ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಭರ್ಜರಿ ಪ್ರಚಾರ ನಡೆಸಿದರು. ಇದರ ಪರಿಣಾಮವಾಗಿ ಎಂಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಸಮಾಧಾನಪಟ್ಟುಕೊಂಡಿದೆ. 

ಅಸಾದುದ್ದೀನ್‌ ಓವೈಸಿಯ ಎಐಎಂಐಎಂ ಪಕ್ಷ ತನ್ನ ಏಳು ಸೀಟುಗಳನ್ನು ಪಕ್ಕಾ ಮಾಡಿಕೊಂಡಿದೆ. ತಮ್ಮ ಸಾಮರ್ಥ್ಯ ಮತ್ತು ಮಿತಿಯನ್ನು ಚೆನ್ನಾಗಿ ಅರಿತಿರುವ ಓವೈಸಿ, ತಮ್ಮ ಶಕ್ತಿ ಇರುವಲ್ಲಿ ಮಾತ್ರ ಅಖಾಡಕ್ಕೆ ಇಳಿದು ಬೇಕಾದ ಫಲಿತಾಂಶವನ್ನು ಪಡೆದರು.

ಇವೆಲ್ಲಾ ಕಾರಣದಿಂದ ಕಾಂಗ್ರೆಸ್‌ ಪಕ್ಷ ತೆಲಂಗಾಣ ರಾಜ್ಯ ಉದಯವಾದ ಹತ್ತು ವರ್ಷಗಳ ನಂತರದಲ್ಲಿ ‘ಫೀನಿಕ್ಸ್‌ ಹಕ್ಕಿ’ಯಂತೆ ಬೂದಿಯಿಂದ ಮೇಲೆದ್ದು ಮರುಹುಟ್ಟು ಪಡೆದು ಅಧಿಕಾರದ ಗದ್ದುಗೆ ಏರಿದೆ.

ಕಾಂಗ್ರೆಸ್‌ ನಾಯಕ ರೇವಂತ್‌ ರೆಡ್ಡಿ

ಕಾಂಗ್ರೆಸ್‌ ನಾಯಕ ರೇವಂತ್‌ ರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT