ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯನ ಮೊದಲ ಪೂರ್ಣ ಚಿತ್ರ ಸೆರೆಹಿಡಿದ ‘ಆದಿತ್ಯ-ಎಲ್‌1’ ನೌಕೆಯ ಟೆಲಿಸ್ಕೋಪ್

Published 8 ಡಿಸೆಂಬರ್ 2023, 18:47 IST
Last Updated 8 ಡಿಸೆಂಬರ್ 2023, 18:47 IST
ಅಕ್ಷರ ಗಾತ್ರ

ಬೆಂಗಳೂರು: ಸೂರ್ಯನ ಬಾಹ್ಯ ವಾತಾವರಣದ ಅಧ್ಯಯನ ನಡೆಸುತ್ತಿರುವ ‘ಆದಿತ್ಯ-ಎಲ್‌1’ ಬಾಹ್ಯಾಕಾಶ ನೌಕೆಯಲ್ಲಿ ಅಳವಡಿಸಿರುವ ಸೌರ ನೇರಳಾತೀತ ಇಮೇಜಿಂಗ್ ಟೆಲಿಸ್ಕೋಪ್ (ಎಸ್‌ಯುಐಟಿ) ಉಪಕರಣವು 200ರಿಂದ 400ರವರೆಗಿನ ಎನ್‌ಎಂ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ಮೊದಲ ಪೂರ್ಣ ವೃತ್ತದ ಚಿತ್ರಗಳನ್ನು ಯಶಸ್ವಿಯಾಗಿ ಸೆರೆಹಿಡಿದಿದೆ.

ವಿವಿಧ ವೈಜ್ಞಾನಿಕ ಶೋಧಕಗಳನ್ನು ಬಳಸಿಕೊಂಡು ಈ ತರಂಗಾಂತರ ವ್ಯಾಪ್ತಿಯಲ್ಲಿ ಸೂರ್ಯನ ದ್ಯುತಿಗೋಳ ಮತ್ತು ವರ್ಣಗೋಳದ ಚಿತ್ರಗಳನ್ನು ಎಸ್‌ಯುಐಟಿ ಉಪಕರಣವು ಸೆರೆಹಿಡಿದಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಶುಕ್ರವಾರ ‘ಎಕ್ಸ್‌’ನಲ್ಲಿ ತಿಳಿಸಿದೆ.

2023ರ ನವೆಂಬರ್ 20ರಂದು ಎಸ್‌ಯುಐಟಿ ಪೇಲೋಡ್ ಅನ್ನು ಚಾಲನೆಗೊಳಿಸಲಾಗಿತ್ತು. ಯಶಸ್ವಿಯಾಗಿ ಚಾಲನೆಯಾದ ನಂತರ ದೂರದರ್ಶಕವು ತನ್ನ ಮೊದಲ ಬೆಳಕಿನ ವಿಜ್ಞಾನ ಚಿತ್ರಗಳನ್ನು ಇದೇ 6ರಂದು ಸೆರೆಹಿಡಿದಿದೆ. ಹನ್ನೊಂದು ವಿಭಿನ್ನ ಫಿಲ್ಟರ್‌ಗಳನ್ನು ಬಳಸಿ ತೆಗೆದ ಈ ಅಭೂತಪೂರ್ವ ಚಿತ್ರಗಳು, ಮೊದಲ ಬಾರಿಗೆ ಪೂರ್ಣ ವೃತ್ತವನ್ನು ಹೊಂದಿವೆ ಎಂದು ಇಸ್ರೊ ತಿಳಿಸಿದೆ.

ಈ ಉಪಕರಣವು ನಡೆಸಿರುವ ಅವಲೋಕನಗಳು ವಿಜ್ಞಾನಿಗಳಿಗೆ ಸೂರ್ಯನ ಕಾಂತೀಯ ಸೌರ ವಾತಾವರಣದ ಡೈನಾಮಿಕ್ ಜೋಡಣೆಯ ಅಧ್ಯಯನಕ್ಕೆ ನೆರವಾಗಲಿದೆ. ಭೂಮಿಯ ಹವಾಮಾನದ ಮೇಲೆ ಸೌರ ವಿಕಿರಣದ ಪರಿಣಾಮಗಳ ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎಂದು ಇಸ್ರೊ ಹೇಳಿದೆ.

ಎಸ್‌ಯುಐಟಿ ಉಪಕರಣವನ್ನು ಇಸ್ರೊ ಮತ್ತು ಪುಣೆಯ ಖಗೋಳವಿಜ್ಞಾನ ಮತ್ತು ಖಗೋಳ ಭೌತವಿಜ್ಞಾನದ ಅಂತರ-ವಿಶ್ವವಿದ್ಯಾಲಯದ ಕೇಂದ್ರ (ಐಯುಸಿಎಎ) ನೇತೃತ್ವದಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಂಎಎಚ್‌ಇ), ಕೋಲ್ಕತ್ತದ ಐಐಎಸ್‌ಇಆರ್‌– ಸೆಂಟರ್ ಫಾರ್ ಎಕ್ಸಲೆನ್ಸ್ ಇನ್ ಸ್ಪೇಸ್ ಸೈನ್ಸ್ ಇಂಡಿಯನ್ (ಸಿಇಎಸ್‌ಎಸ್‌ಐ), ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್, ಉದಯಪುರದ ಸೌರ ವೀಕ್ಷಣಾಲಯ (ಯುಎಸ್‌ಒ–‍ಪಿಆರ್‌ಎಲ್‌) ಮತ್ತು ಅಸ್ಸಾಂನ ತೇಜ್‌ಪುರ ವಿಶ್ವವಿದ್ಯಾಲಯ ಇವುಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT