ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮುಖ್ಯಮಂತ್ರಿ ಕುರ್ಚಿ ವಿಷಯ ಚರ್ಚೆ ಆಗುವಂಥದ್ದೇ ಅಲ್ಲ: ದಿನೇಶ್ ಗುಂಡೂರಾವ್

Published : 10 ಸೆಪ್ಟೆಂಬರ್ 2024, 21:05 IST
Last Updated : 10 ಸೆಪ್ಟೆಂಬರ್ 2024, 21:05 IST
ಫಾಲೋ ಮಾಡಿ
Comments

ಬೆಂಗಳೂರು: ‘ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎನ್ನುವುದು ಗೊತ್ತಿದ್ದೂ, ಈ ವಿಷಯದಲ್ಲಿ ಅನಗತ್ಯ ಚರ್ಚೆ ನಡೆಯುತ್ತಿದೆ.‌ ಸಮಸ್ಯೆಗಳಿದ್ದರೆ ಸಚಿವರು ಹೈಕಮಾಂಡ್ ಗಮನಕ್ಕೆ ತರಲಿ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆ ಆಗಿಲ್ಲ’ ಎಂದರು.

‘ಮುಖ್ಯಮಂತ್ರಿ ಕುರ್ಚಿ ವಿಷಯ ಚರ್ಚೆ ಆಗುವಂಥದ್ದೇ ಅಲ್ಲ. ಸಿದ್ದರಾಮಯ್ಯ ಗಟ್ಟಿಯಾಗಿದ್ದಾರೆ. ಮುಖ್ಯಮಂತ್ರಿ ಇದ್ದಾಗ ಈ ಚರ್ಚೆ ಅನಗತ್ಯ’ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

‘ಅರ್ಹತೆ, ಜನಪ್ರಿಯತೆ ಆಧಾರದಲ್ಲಿ ಮುಖ್ಯಮಂತ್ರಿ ಸ್ಥಾನ ಸಿಗಲಿದೆ. ಒಬ್ಬ ಅನುಭವಿ, ದಕ್ಷ ಆಡಳಿತಗಾರ, ಜನಪ್ರಿಯ ನಾಯಕರಾಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ’ ಎಂದರು.

ಆಸೆ ತಪ್ಪೇನಲ್ಲ: ‘ಮುಖ್ಯಮಂತ್ರಿ ಸ್ಥಾನದ ಆಸೆ ಇರುವುದು ತಪ್ಪೇನಲ್ಲ. 30-40 ವರ್ಷಗಳಿಂದ ಕೆಲಸ ಮಾಡಿರುವ ಕೆಲವು ನಾಯಕರು ಮುಖ್ಯಮಂತ್ರಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ’ ಎಂದು ಕಾಂಗ್ರೆಸ್‌ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

‘ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ತೆಗೆಯಲು ಯಾರಿಂದಲೂ ಸಾಧ್ಯವಿಲ್ಲ. ಮುಂದೆ ಪಕ್ಷ ಅಧಿಕಾರಕ್ಕೆ ಬಂದ ನಂತರ ಯಾರು ಬೇಕಾದರೂ ಮುಖ್ಯಮಂತ್ರಿ ಆಗಲಿ. ಬೇಡ ಅಂದವರು ಯಾರು? ಡಿ.ಕೆ. ಶಿವಕುಮಾರ್ ಅವರಿಗೂ ಮುಖ್ಯಮಂತ್ರಿಯಾಗುವ ಆಸೆ ಇದೆ. ಮುಂದಿನ ಅವಧಿಗೆ ಸರ್ಕಾರ ತಂದು ಅವರು ಮುಖ್ಯಮಂತ್ರಿ ಆಗುತ್ತಾರೆ. ಆ ತಾಕತ್ತು ಅವರಿಗಿದೆ’ ಎಂದರು.

‘ಸಚಿವರು ಇಲ್ಲಸಲ್ಲದ ವಿಚಾರಗಳ ಕುರಿತು ಚರ್ಚಿಸಿ ವಿರೋಧ ಪಕ್ಷಕ್ಕೆ ಆಹಾರ ಆಗಬಾರದು’ ಎಂದು ಕಾಂಗ್ರೆಸ್ ಶಾಸಕ ಡಾ.ಎಚ್‌.ಡಿ. ರಂಗನಾಥ್ ಹೇಳಿದರು.

ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ಈ ವಿಷಯ ಗೊತ್ತಿದ್ದೂ ಆ ಸ್ಥಾನದ ಬಗ್ಗೆ ಕೆಲವರು ಬಹಿರಂಗವಾಗಿ ಚರ್ಚೆ ಮಾಡುತ್ತಿರುವುದು ಹಾಸ್ಯಾಸ್ಪದ.
–ದಿನೇಶ್‌ ಗುಂಡೂರಾವ್‌, ಆರೋಗ್ಯ ಸಚಿವ
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ತೆಗೆದು ಆ ಸ್ಥಾನವನ್ನು ತಮಗೆ ಕೊಡಿ ಎಂದು ಯಾರೂ ಕೇಳುತ್ತಿಲ್ಲ. ಐದೂ ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿರುತ್ತಾರೆ.
–ಕೆ.ಎಂ. ಶಿವಲಿಂಗೇಗೌಡ, ಕಾಂಗ್ರೆಸ್‌ ಶಾಸಕ
ಸಚಿವರಿಗೆ ಎಚ್ಚರಿಕೆ ನೀಡಿ– ಹೈಕಮಾಂಡ್‌ಗೆ ಪತ್ರ

‘ಮುಖ್ಯಮಂತ್ರಿ ಹುದ್ದೆಯ ಕುರಿತು ಹೇಳಿಕೆಗಳನ್ನು ನೀಡದಂತೆ ಸಚಿವರಿಗೆ ಎಚ್ಚರಿಕೆ ನೀಡಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್ ಮಾಜಿ ಸಚಿವರು, ಸಂಸದರು, ವಿಧಾನ ಪರಿಷತ್‌ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಗೆ ಪತ್ರ ಬರೆದಿದ್ದಾರೆ.

ಇಂತಹ ಹೇಳಿಕೆಗಳು ಪಕ್ಷದ ವರ್ಚಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಕಾರ್ಯಕರ್ತರು ಭ್ರಮನಿರಸನಗೊಳ್ಳುವಂತಾಗಿದೆ. ಹೀಗಾಗಿ, ಈ ರೀತಿಯ ಹೇಳಿಕೆಗಳನ್ನು ನೀಡದಂತೆ ತಕ್ಷಣ ಕಡಿವಾಣ ಹಾಕಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.    

ಬಿ.ಎಲ್‌. ಶಂಕರ್‌, ವಿ.ಎಸ್‌. ಉಗ್ರಪ್ಪ, ಎಚ್‌.ಎಂ. ರೇವಣ್ಣ, ವಿ.ಆರ್‌. ಸುದರ್ಶನ್‌, ಎಲ್‌. ಹನುಮಂತಯ್ಯ, ಬಿ.ಎನ್‌. ಚಂದ್ರಪ್ಪ, ಪ್ರಕಾಶ್ ರಾಥೋಡ್‌, ಪಿ.ಆರ್‌. ರಮೇಶ್‌, ಸಿ.ಎಸ್‌. ದ್ವಾರಕನಾಥ್, ಎಚ್‌.ಎಸ್‌. ಚಂದ್ರಮೌಳಿ ಸೇರಿದಂತೆ 13 ಮಂದಿ ಈ ಪತ್ರಕ್ಕೆ ಸಹಿ ಹಾಕಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT