ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಪೊಲೀಸರ ಹೆಸರಲ್ಲಿ ಹರಿದಾಡುತ್ತಿರುವ ಈ ಸಂದೇಶ ನಿಜವೇ?

Last Updated 8 ಡಿಸೆಂಬರ್ 2019, 7:46 IST
ಅಕ್ಷರ ಗಾತ್ರ

ಬೆಂಗಳೂರು: ‌‘ಬೆಂಗಳೂರು ನಗರ ಪೊಲೀಸರು ಒಂದೊಳ್ಳೆ ಸೇವೆ ನೀಡುತ್ತಿದ್ದಾರೆ. ಮಹಿಳೆಯರಿಗಾಗಿಯೇ ಹೊಸ ಹೆಲ್ಪ್‌ಲೈನ್‌ ಅನ್ನು ಆರಂಭಿಸಿದ್ದಾರೆ. ಮಹಿಳೆಯರು ಕ್ಯಾಬ್‌, ಆಟೋಗಳನ್ನು ಏರುವುದಕ್ಕೂ ಮೊದಲು ವಾಹನದ ಸಂಖ್ಯೆಯನ್ನು 9969777888ಗೆ ಎಸ್‌ಎಂಎಸ್‌ ಮಾಡಿ. ಎಸ್‌ಎಸ್‌ಎಸ್‌ ಮಾಡುತ್ತಲೇ ಆತ್ತ ಕಡೆಯಿಂದ ಮತ್ತೊಂದು ಸಂದೇಶ ಬರುತ್ತದೆ. ನೀವಿರುವ ವಾಹನವನ್ನು ಪೊಲೀಸರು ಜಿಪಿಆರ್‌ಎಸ್‌ ಮೂಲಕ ನಿಗಾ ವಹಿಸುತ್ತಾರೆ,‌’ ಎಂಬ ಸಂದೇಶವೊಂದು ಬೆಂಗಳೂರು ಪೊಲೀಸರ ಹೆಸರಲ್ಲಿ ಹರಿದಾಡುತ್ತಿದೆ.

ಹೈದರಾಬಾದ್‌ನಲ್ಲಿ ಇತ್ತೀಚೆಗೆ ಪಶುವೈದ್ಯೆಯೊಬ್ಬರನ್ನು ಅತ್ಯಾಚಾರ ಮಾಡಿ ಸುಟ್ಟು ಹಾಕಿದ ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೇ ಆತಂಕದಲ್ಲಿರುವ ನಾಗರಿಕರು ಸದ್ಯ ವಾಟ್ಸ್ ಆ್ಯಪ್‌ಗಳಲ್ಲಿ ಹರಿದಾಡುತ್ತಿರುವ ಈ ಸಂದೇಶದ ನೈಜತೆ ಪರಿಶೀಲಿಸದೇ ಎಲ್ಲರಿಗೂ ಫಾರ್ವರ್ಡ್‌ ಮಾಡುತ್ತಿದ್ಧಾರೆ.

ಫ್ಯಾಕ್ಟ್‌ ಚೆಕ್‌

ಸಂದೇಶದಲ್ಲಿರುವ ಸಂಖ್ಯೆಯು ಅಸ್ತಿತ್ವದಲ್ಲಿ ಇದೆಯೇ ಇಲ್ಲವೇ ಎಂಬುದನ್ನು ಪತ್ತೆ ಹಚ್ಚಲು ಕರೆ ಮಾಡಿದಾಗ, ಆ ಸಂಖ್ಯೆ ಅಸ್ತಿತ್ವದಲ್ಲೇ ಇರಲಿಲ್ಲ. ಸಂಖ್ಯೆ ಚಾಲ್ತಿಯಲ್ಲಿ ಇಲ್ಲದಿರುವ ಬಗ್ಗೆ ಮರಾಠಿ ಭಾಷೆಯಲ್ಲಿ ಮೊಬೈಲ್‌ ಕಂಪನಿಯ ಸ್ಪಷ್ಟನೆ ಕೇಳಿ ಬರುತ್ತಿದೆ. ಅಲ್ಲದೆ, ಮುಂಬೈ ಪೊಲೀಸರು ಮಹಿಳಾ ಸುರಕ್ಷತೆಗಾಗಿ 2014ರಲ್ಲಿ ಈ ಸಂಖ್ಯೆಯಲ್ಲಿ ಸಹಾಯವಾಣಿ ಆರಂಭಿಸಿದ್ದರಾದರೂ, ಕಾಲಾಂತರದಲ್ಲಿ ಅದನ್ನು ರದ್ದುಗೊಳಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮಹಿಳೆಯರು ಈ ಸಂಖ್ಯೆಗೆ ತುರ್ತು ಸಂದರ್ಭದಲ್ಲಿ ಸಂದೇಶ ರವಾನಿಸುವುದು, ಸಹಾಯಕ್ಕಾಗಿ ಕರೆ ಮಾಡುವುದು ವ್ಯರ್ಥ.

ಇನ್ನು ಇದೇ ಸಂಖ್ಯೆಯಲ್ಲಿ, ಇದೇ ಮಾದರಿಯ ಸಂದೇಶವೊಂದು ದೆಹಲಿಯಲ್ಲಿ 2016ರಲ್ಲಿ ಸಂದೇಶವೊಂದು ವೈರಲ್‌ ಆಗಿತ್ತು. ಆಗ ದೆಹಲಿ ಪೊಲೀಸರು ಸ್ಪಷ್ಟನೆ ನೀಡಿ, ಈ ಸಂಖ್ಯೆಯಲ್ಲಿ ಇಂಥ ಯಾವುದೇ ಸೇವೆಯನ್ನು ನಾವು ಆರಂಭಿಸಿಲ್ಲ ಎಂದು ಹೇಳಿದ್ದರು.

ಸದ್ಯ ಬೆಂಗಳೂರು ಪೊಲೀಸರೂ ಟ್ವೀಟ್‌ ಮಾಡಿ ಸ್ಪಷ್ಟನೆ ನೀಡಿದ್ದಾರೆ. ಈ ಸಂಖ್ಯೆ ಬೆಂಗಳೂರು ಪೊಲೀಸರದ್ದಲ್ಲ. ಈ ಸುಳ್ಳು ಸಂದೇಶವನ್ನು ಯಾರಿಗೂ ಹಂಚಬೇಡಿ. ಈ ಸಂದೇಶವನ್ನು ಸೃಷ್ಟಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

ಸುರಕ್ಷಾ ಆ್ಯಪ್‌ ಆರಂಭಿಸಿದ್ದಾರೆ ಬೆಂಗಳೂರು ಪೊಲೀಸರು.

ಮಹಿಳೆಯರ ಸುರಕ್ಷತೆಗಾಗಿ ತುರ್ತು ಸಂದರ್ಭದ ನೆರವಿಗಾಗಿಬೆಂಗಳೂರು ನಗರ ಪೊಲೀಸರು "ಸುರಕ್ಷಾ" App ಅನ್ನು ಪರಿಚಯಿಸಿದ್ದಾರೆ. ಇದನ್ನು(play store)ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರ ಮೂಲಕ ತುರ್ತು ಸಂದರ್ಭದಲ್ಲಿ ಮಹಿಳೆಯರು ಪೊಲೀಸರ ಸಹಾಯ ಪಡೆಯಬಹುದು.

ತುರ್ತು ಸಂದರ್ಭದಲ್ಲಿ ಮಹಿಳೆಯರು ಮಾಡಬೇಕಾದ್ದೇನು?

ತುರ್ತು ಸಂದರ್ಭದಲ್ಲಿ ಮಹಿಳೆಯರು 1091 ಎಂಬ ಸಂಖ್ಯೆಗೆ ಕರೆ ಮಾಡಬಹುದು. ಇದಲ್ಲದೆ ತುರ್ತು ಸೇವೆಗಳಿಗೆ112ಕರೆಮಾಡುವ ವ್ಯವಸ್ಥೆ ಇತ್ತೀಚೆಗೆ ಜಾರಿಗೆ ಬಂದಿದೆ. ದೂರವಾಣಿ ಸಂಖ್ಯೆ ‘112’ ಡಯಲ್ ಮಾಡುವ ಮೂಲಕ ಪೊಲೀಸ್‌ (100), ಅಗ್ನಿಶಾಮಕ ದಳ (101), ಆರೋಗ್ಯ (108) ಮತ್ತಿತರ ತುರ್ತುಸೇವೆಗಳನ್ನು ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT