ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಜಾತಿ ಪ್ರಮಾಣ ಪತ್ರ ಪ್ರಶ್ನಿಸಲು ಕಾಲಮಿತಿ ಬೇಕಿಲ್ಲ: ಹೈಕೋರ್ಟ್‌

Published 13 ಏಪ್ರಿಲ್ 2024, 19:56 IST
Last Updated 13 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಕಲಿ ಜಾತಿ ಪ್ರಮಾಣಪತ್ರದಿಂದ ಪಡೆದಿರುವ ಪ್ರಯೋಜನಗಳನ್ನು ಪ್ರಶ್ನಿಸುವುದಕ್ಕೆ ಯಾವುದೇ ಕಾಲಮಿತಿಯ ಅವಶ್ಯಕತೆ ಇಲ್ಲ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಈ ಸಂಬಂಧ ಮೈಸೂರಿನ ಸರ್ಕಾರಿ ಆಯುರ್ವೇದಿಕ್‌ ವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಗುಡ್ಡದೇವ ಬಿನ್‌ ಗೊಲ್ಲಾಳಪ್ಪ ಯಡ್ರಾಮಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

‘ಡಾ.ಗುಡ್ಡದೇವ ಅವರು ನಕಲಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಪಂಗಡಗಳ (ಎಸ್‌ಟಿ) ಕಲ್ಯಾಣ ಮತ್ತು ಮೇಲ್ಮನವಿ ನ್ಯಾಯಮಂಡಳಿಯು, ಅವರ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗುಡ್ಡದೇವ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಈ ರಿಟ್‌ ಅರ್ಜಿ ವಿಚಾರಣೆ ನಡೆಸಿದ ಕಲಬುರಗಿ ಪೀಠದಲ್ಲಿದ್ದ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು, ‘ಅರ್ಜಿದಾರರು ನ್ಯಾಯಮಂಡಳಿಯ ಆದೇಶವನ್ನು ಅನೂರ್ಜಿತಗೊಳಿಸಬೇಕು ಮತ್ತು ನನ್ನನ್ನು ಪುನಃ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲು ಆದೇಶಿಸಬೇಕು ಎಂದು ಕೋರಿದ್ದಾರೆ. ಆದರೆ ಅವರು, ವಿಜಯಪುರದಲ್ಲಿ ಕಾಲೇಜಿಗೆ ಸೇರುವಾಗ ಭರ್ತಿ ಮಾಡಿದ್ದ ಅರ್ಜಿ ನಮೂನೆಯಲ್ಲಿ ಹಿಂದೂ (ಕುರುಬ), ಹಿಂದುಳಿದ ವರ್ಗಕ್ಕೆ ಸೇರಿದವನು ಎಂದು ಉಲ್ಲೇಖಿಸಿದ್ದಾರೆ. ಆದರೆ, ಉದ್ಯೋಗದ ವೇಳೆಗೆ ಅವರು ಗೊಂಡ ಜಾತಿಯ ಪರಿಶಿಷ್ಟ ಪಂಗಡಕ್ಕೆ ಸೇರಿದವನು ಎಂದು ಬದಲಾಗಲು ಹೇಗೆ ಸಾಧ್ಯವಾಯಿತು’ ಎಂದು ಪ್ರಶ್ನಿಸಿದ್ದಾರೆ.

‘ಗುಡ್ಡದೇವ ವಾಸ್ತವವಾಗಿ ಎಸ್‌ಟಿ ವರ್ಗಕ್ಕೆ ಸೇರಿದವರೇ ಆಗಿದ್ದರೆ 1975ರಲ್ಲಿ ಕಾಲೇಜಿಗೆ ಸೇರುವಾಗ ಹಿಂದೂ ಕುರುಬ ಜಾತಿ ಎಂದು ಉಲ್ಲೇಖಿಸುತ್ತಿರಲಿಲ್ಲ. ನೇಮಕ ಪ್ರಾಧಿಕಾರದ ಮುಂದೆ ನಕಲಿ ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಅದರಿಂದ ಉದ್ಯೋಗ ಪಡೆದು ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ತಮ್ಮ ಪರವಾಗಿ ಆದೇಶ ಪಡೆಯಲು ಹಲವು ನಿಜಸಂಗತಿಗಳನ್ನು ಮುಚ್ಚಿಟ್ಟಿದ್ದಾರೆ. ಹೀಗಾಗಿ, ಈ ರಿಟ್‌ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ಸರ್ಕಾರದ ಪರ ವಿಶೇಷ ವಕೀಲ ಸಿ.ಜಗದೀಶ್‌ ವಾದ ಮಂಡಿಸಿದ್ದರು.

ಪ್ರಕರಣವೇನು?: ಅರ್ಜಿದಾರ ಗುಡ್ಡದೇವ ಎಸ್‌ಟಿಗೆ ಮೀಸಲಾಗಿದ್ದ ಆಯುಷ್ ವೈದ್ಯಾಧಿಕಾರಿ ಹುದ್ದೆಗೆ 1995ರ ಏಪ್ರಿಲ್ 9ರಂದು ನೇಮಕಗೊಂಡಿದ್ದರು. ನೇಮಕಾತಿ ವೇಳೆಯಲ್ಲಿ ಎಸ್‌ಟಿ ವರ್ಗಕ್ಕೆ ಸೇರಿದ ‘ಗೊಂಡ’ ಜಾತಿಯ ಪ್ರಮಾಣಪತ್ರ ನೀಡಿದ್ದರು. ಸೇವೆ ಕಾಯಂಗೊಂಡು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದರು.

‘ಗುಡ್ಡದೇವ ನಕಲಿ ಜಾತಿ ಪ್ರಮಾಣಪತ್ರ ಪಡೆದು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ’ ಎಂದು ಆರೋಪಿಸಿ, ಅರಸೀಕೆರೆ ತಾಲ್ಲೂಕು ಹಾರನಹಳ್ಳಿಯ ಕೃಷ್ಣಮೂರ್ತಿ ನಾಯಕ್ ಮತ್ತು ಹಾಸನ ಜಿಲ್ಲೆಯ ಆಯುರ್ವೇದಿಕ್‌ ಮತ್ತು ಹೋಮಿಯೋಪಥಿ ಆಸ್ಪತ್ರೆಯ ಜಿಲ್ಲಾ ಆಯುಷ್‌ ಅಧಿಕಾರಿಯಾಗಿದ್ದ ಸಿ.ವಿ.ನಂಜರಾಜು ದೂರು ನೀಡಿದ್ದರು. ದೂರನ್ನು ಆಧರಿಸಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ವಿಚಾರಣೆ ನಡೆಸಿದಾಗ ಗುಡ್ಡದೇವ ನಕಲಿ ಜಾತಿ ಪ್ರಮಾಣಪತ್ರ ಪಡೆದಿರುವುದು ಸಾಬೀತಾಗಿ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ವಜಾ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿ ವಿ.ಶ್ರೀಶಾನಂದ
ನ್ಯಾಯಮೂರ್ತಿ ವಿ.ಶ್ರೀಶಾನಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT