ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಆರೋಪ: ಮೂವರ ಬಂಧನ

Published 4 ಮಾರ್ಚ್ 2024, 12:56 IST
Last Updated 4 ಮಾರ್ಚ್ 2024, 12:56 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ’ ಎಂದು ಆರೋಪಿಸಲಾದ ಪ್ರಕರಣದಲ್ಲಿ ಮೂವರನ್ನು ವಿಧಾನಸೌಧ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ದೆಹಲಿ ಕಿಶನ್‌ಗಂಝ್‌ನ ಮೊಹಮ್ಮದ್ ಇಲ್ತಾಜ್, ಹಾವೇರಿ ಜಿಲ್ಲೆಯ ಬ್ಯಾಡಗಿಯ ಮೊಹಮ್ಮದ್ ನಾಶಿಪುಡಿ, ಬೆಂಗಳೂರು ಜಯಮಹಲ್‌ನ ಮುನಾವರ್ ಅಹ್ಮದ್ ಬಂಧಿತ ಆರೋಪಿಗಳು.

‘ಫೆ. 27ರಂದು ವಿಧಾನಸೌಧದಲ್ಲಿ ರಾಜ್ಯಸಭೆ ಚುನಾವಣೆಯ ಮತದಾನ ನಡೆದಿತ್ತು. ಫಲಿತಾಂಶ ಬಂದ ಬಳಿಕ, ಸಂಭ್ರಮಾಚರಣೆ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ, ಸಾಂದರ್ಭಿಕ ಸಾಕ್ಷ್ಯಗಳು, ಸ್ಥಳದಲ್ಲಿದ್ದ ಸಾಕ್ಷಿಗಳ ಹೇಳಿಕೆ ಹಾಗೂ ಲಭ್ಯವಿರುವ ಸಾಕ್ಷ್ಯಗಳ ಆಧಾರದಲ್ಲಿ ಮೂವರನ್ನು ಬಂಧಿಸಲಾಗಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಾಸ್ ಪಡೆದಿದ್ದ ಆರೋಪಿಗಳು: ‘ಮೊಹಮ್ಮದ್ ನಾಶಿಪುಡಿ, ಮೆಣಸಿನಕಾಯಿ ವ್ಯಾಪಾರಿ. ಈತ, ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿದ್ದಾನೆ. ಮುನಾವರ್ ಸಹ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತ. ಇಲ್ತಾಜ್, ಚುನಾವಣೆಗಾಗಿಯೇ ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರಾಜ್ಯಸಭಾ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್‌ನ ಸೈಯ್ಯದ್ ನಾಸಿರ್‌ ಹುಸೇನ್‌ ಅವರ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳು, ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದರೆಂಬ ಆರೋಪವಿತ್ತು. ‘ನಾಸಿರ್ ಸಾಬ್ ಜಿಂದಾಬಾದ್’ ಎಂದಿರುವುದಾಗಿ ಕೆಲವರು ಹೇಳುತ್ತಿದ್ದರು.’

‘ಘೋಷಣೆ ಕೂಗಿದ್ದ ದೃಶ್ಯ ಸುದ್ದಿವಾಹಿನಿಗಳ ಕ್ಯಾಮೆರಾದಲ್ಲಿ ಸೆರೆ ಆಗಿತ್ತು. ಸ್ಥಳದಲ್ಲಿದ್ದವರು ಸಹ ವಿಡಿಯೊ ಚಿತ್ರೀಕರಿಸಿದ್ದರು. ಎಲ್ಲ ವಿಡಿಯೊಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದು ನಿಜವೆಂಬುದು ಪ್ರಯೋಗಾಲಯದ ವರದಿಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರೋಪಿಗಳ ಧ್ವನಿ ಮಾದರಿ ಸಹ ಸಂಗ್ರಹಿಸಲಾಗಿತ್ತು. ವಿಡಿಯೊದಲ್ಲಿರುವ ಧ್ವನಿಗೂ ಆರೋಪಿಗಳ ಧ್ವನಿಗೂ ಹೋಲಿಕೆ ಇರುವುದಾಗಿ ಪ್ರಯೋಗಾಲಯದ ವರದಿ ಬಂದಿದೆ. ಹೀಗಾಗಿ, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಮೂಲಗಳು ಹೇಳಿವೆ.

‘ಪಾಕಿಸ್ತಾನ್‌ ಘೋಷಣೆಗೆ ಇನ್ನಿಬ್ಬರ ‘ಜಿಂದಾಬಾದ್’

‘ಬಂಧಿತ ಆರೋಪಿಗಳ ಪೈಕಿ ಒಬ್ಬ ‘ಪಾಕಿಸ್ತಾನ್‌’ ಎಂದು ಕೂಗಿದ್ದ. ಇನ್ನಿಬ್ಬರು ‘ಜಿಂದಾಬಾದ್’ ಎಂದು ಧ್ವನಿಗೂಡಿಸಿದ್ದರು. ಈ ಅಂಶ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT