ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ: ಜಿಲ್ಲಾ ಸಮಿತಿಗಳಿಗೆ ಹೊಣೆ

ಒಂದು ಕೋಟಿ ಪ್ರವಾಸಿಗರ ಆಕರ್ಷಿಸಲು ಹೊಸ ಪ್ರವಾಸೋದ್ಯಮ ನೀತಿಯ ಗುರಿ
Last Updated 28 ಸೆಪ್ಟೆಂಬರ್ 2022, 22:37 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವಾಸಿ ತಾಣಗಳ ತ್ವರಿತ ಅಭಿವೃದ್ಧಿಗೆ ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಆದ್ಯತೆ ನೀಡಿರುವ ಸರ್ಕಾರ, ಮೂಲ ಸೌಕರ್ಯಗಳೂ ಸೇರಿದಂತೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು
ಜಿಲ್ಲಾ ಪ್ರವಾಸೋದ್ಯಮ ಸಮಿತಿಗೆ ನೀಡಿದೆ.

‘ಕರ್ನಾಟಕ ಪ್ರವಾಸೋದ್ಯಮ ನೀತಿ 2020–26’ ಅನ್ನು ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.

ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಸಮಿತಿಯು ಪ್ರವಾಸಿ ತಾಣಗಳಲ್ಲಿ ₹ 5 ಕೋಟಿ ಒಳಗಿನ ಮೂಲ ಸೌಕರ್ಯ ಕಾರ್ಯಗಳ ಅನುಷ್ಠಾನ, ಉತ್ತೇಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸ್ಥಳೀಯ ವ್ಯಾಪಾರ ವೃದ್ಧಿ, ಉದ್ಯೋಗ ಸೃಷ್ಟಿಸುವುದು, ಮೇಲ್ವಿಚಾರಣೆಯ ಅಧಿಕಾರವನ್ನು ನೋಡಿಕೊಳ್ಳಲಿದೆ. ಯೋಜನೆಯ ಅನುಷ್ಠಾನದಲ್ಲಿ ಎದುರಾಗುವ ತೊಡಕುಗಳನ್ನು ನಿವಾರಿಸಿ, ತ್ವರಿತ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವ ಹೊಣೆಗಾರಿಕೆಯನ್ನೂ ಸಮಿತಿಗೆ ನೀಡಲಾಗಿದೆ. ₹ 5 ಕೋಟಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಪ್ರವಾಸೋದ್ಯಮ ಸಚಿವರ ಅಧ್ಯಕ್ಷತೆಯ ಪ್ರವಾಸೋದ್ಯಮ ಸಬಲೀಕರಣ ಸಮಿತಿಯ ಅನುಮೋದನೆ ಕಡ್ಡಾಯ.

ಪ್ರಸ್ತುತ ರಾಜ್ಯದ ಪ್ರವಾಸಿ ತಾಣಗಳಿಗೆ ಪ್ರತಿ ವರ್ಷ 30 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, ಮುಂದಿನ ಮೂರು ವರ್ಷದಲ್ಲಿ ವಾರ್ಷಿಕ ಒಂದು ಕೋಟಿಗೆ ಮುಟ್ಟಿಸಲು, ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಅನುಸರಿಸಬೇಕಾಗದ ಕಾರ್ಯತಂತ್ರ
ಗಳನ್ನು ಹೊಸ ನೀತಿಯಲ್ಲಿ ವಿವರಿಸಲಾಗಿದೆ. ಪ್ರವಾಸೋದ್ಯಮಕ್ಕೆ ಸೂಕ್ತವಾಗಿರುವ ಕಲಬುರಗಿ, ಬೀದರ್ ಕೋಟೆಗಳು, ಜೋಗ ಜಲಪಾತ, ಕರಾವಳಿ ತೀರಗಳೂ ಒಳಗೊಂಡ 18 ಜಿಲ್ಲೆಗಳನ್ನು ಆದ್ಯತಾ ವಲಯವಾಗಿ
ಪರಿಗಣಿಸಲಾಗಿದೆ.

ಕೇಂದ್ರ ಸರ್ಕಾರದ ಪರ್ವತ ಮಾಲಾ ಯೋಜನೆಯಡಿ ರಾಜ್ಯದ 15 ಪ್ರವಾಸಿ ತಾಣಗಳಲ್ಲಿ ರೋಪ್ ವೇ ಅಳವಡಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿ
ನಂದಿಬೆಟ್ಟ, ಅಂಜನಾದ್ರಿಯಲ್ಲಿ ಈಗಾಗಲೇ ರೋಪ್-ವೇ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಉಳಿದ ಸ್ಥಳಗಳ ಆಯ್ಕೆ ಅಂತಿಮಗೊಳಿಸುವ ಗುರಿ ಹೊಂದಲಾಗಿದೆ.

ಭೂ ಪರಿವರ್ತನೆ ಉಚಿತ

ಪ್ರವಾಸೋದ್ಯಮ ಯೋಜನೆಗಳು, ವಿಸ್ತರಣಾ ಯೋಜನೆಗಳ ಅಭಿವೃದ್ಧಿಗಾಗಿ ಭೂ ಪರಿರ್ತನೆ ಮಾಡಿಕೊಳ್ಳುವ ಖಾಸಗಿ ವ್ಯಕ್ತಿ, ಸಂಸ್ಥೆಗಳಿಗೆ ಭೂ ಪರಿರ್ತನಾ ಶುಲ್ಕದಲ್ಲಿ ಶೇ 100ರಷ್ಟು ರಿಯಾಯಿತಿ ನೀಡಲಾಗಿದೆ. ಮುದ್ರಾಂಕ ಹಾಗೂ ನೋಂದಣಿ ಶುಲ್ಕವನ್ನೂ ಕಟ್ಟಬೇಕಿಲ್ಲ. ಆದರೆ, ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯ ಪ್ರವಾಸೋದ್ಯಮ ಯೋಜನೆಗಳ ಅಭಿವೃದ್ಧಿಗೆ ಈ ನಿಯಮ ಅನ್ವಯಿಸುವುದಿಲ್ಲ. ₹ 25 ಲಕ್ಷದವರೆಗಿನ ಸಾಲಕ್ಕೆ ವಾರ್ಷಿಕ ಶೇ 5ರ ಬಡ್ಡಿ ಸಹಾಯಧನ ನೀಡಲು ಸರ್ಕಾರ ಸಮ್ಮತಿಸಿದೆ.

ಅಂತರರಾಷ್ಟ್ರೀಯ ನಕ್ಷೆಯಲ್ಲಿ ರಾಜ್ಯ: ಸಿ.ಎಂ

ಬೆಂಗಳೂರು: ಬರುವ ಕೆಲವೇ ತಿಂಗಳಲ್ಲಿ ಕರ್ನಾಟಕ ಪ್ರವಾಸೋದ್ಯಮ ಅಂತರರಾಷ್ಟ್ರೀಯ ನಕ್ಷೆಯಲ್ಲಿ ಸೇರ್ಪಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನಸೌಧದಲ್ಲಿ ಬುಧವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ನೊಂದಾಯಿತ ರಾಜ್ಯದ ಪ್ರವಾಸಿ ಮಾರ್ಗದರ್ಶಿಗಳಿಗೆ ಪ್ರೋತ್ಸಾಹಧನ ವಿತರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಎರಡು ಪ್ರವಾಸೋದ್ಯಮ ಸರ್ಕಿಟ್‌ಗಳನ್ನು ಎರಡು ತಿಂಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಬೇಲೂರು ಹಳೇಬೀಡು, ಸೋಮನಾಥಪುರ ಸುತ್ತಮುತ್ತಲ ಪ್ರವಾಸಿತಾಣ ಒಳಗೊಂಡ ಮೈಸೂರು ಸರ್ಕಿಟ್ ಹಾಗೂ ವಿಜಯಪುರ, ಬಾದಾಮಿ, ಪಟ್ಟದಕಲ್ಲು, ಹಂಪಿ ಒಳಗೊಂಡ ಹಂಪಿ ಸರ್ಕೀಟ್‍ಗಳನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಪ್ರವಾಸಿಗರು ವೆಬ್‍ಸೈಟ್ ಮೂಲಕ ತಮ್ಮ ಪ್ರವಾಸದ ಸಂಪೂರ್ಣ ವ್ಯವಸ್ಥೆಯನ್ನು ಮಾಡಿಕೊಳ್ಳುವ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ವಿವರ ನೀಡಿದರು.

ಕರಾವಳಿ ಪ್ರವಾಸಕ್ಕೆ ಸಿಆರ್‌ಝೆಡ್ ಸಮ್ಮತಿ

ಕರಾವಳಿ ನಿಯಂತ್ರಣ ವಲಯದ (ಸಿಆರ್‌ಝೆಡ್) ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ನೆರೆ ರಾಜ್ಯಗಳ ಮಾದರಿಯಲ್ಲಿ ರಾಜ್ಯದ ಕರಾವಳಿ ಪ್ರವಾಸೋದ್ಯಮಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್ ಮಾಹಿತಿ ನೀಡಿದರು.

ಸಿಆರ್‌ಝೆಡ್‌ ಅನುಮೋದನೆ ಪಡೆದ ದೇಶದ ಎರಡನೇ ಹಾಗೂ ದಕ್ಷಿಣ ಭಾರತದ ಮೊದಲ ರಾಜ್ಯ ಕರ್ನಾಟಕ. ರಾಜ್ಯದ ಕಡಲ ತೀರ ಪ್ರದೇಶದ ಪ್ರವಾಸಿ, ವಾಣಿಜ್ಯೋದ್ಯಮದ ಚಟುವಟಿಕೆಗಳು ಗರಿಗೆದರಲಿವೆ ಎಂದರು.

ಪ್ರವಾಸಿಗರಿಗಾಗಿ ನೂತನ ಕ್ಯಾರಾವಾನ್ ವಾಹನ ಪರಿಚಯಿಸಲಾಗಿದೆ. ಮನೆಯ ವಾತಾವರಣ ಸೃಷ್ಟಿಸಲಾಗಿದ್ದು, ಅಡುಗೆ ಮನೆ, ಬೆಡ್ ರೂಂ, ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ಈ ಕ್ಯಾರಾವ್ಯಾನ್ ಬಳಕೆ ಮಾಡುವ ಪ್ರವಾಸಿಗರು ಪ್ರವಾಸಿ ತಾಣಕ್ಕೆ ಭೇಟಿ ನೀಡಿ, ರಾತ್ರಿ ವ್ಯಾನ್‌ನಲ್ಲೇ ತಂಗಬಹುದು ಎಂದು ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT