ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ತೂಬಿಗೆ ತಾತ್ಕಾಲಿಕ ಗೇಟ್ ಅಳವಡಿಕೆ ಪ್ರಯತ್ನ ಶುಕ್ರವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅರಂಭಗೊಂಡಿದ್ದು, ಕೆಲಸ ಬಹಳ ನಿಧಾನವಾಗಿ ನಡೆಯುತ್ತಿರುವಂತೆ ಕಾಣಿಸುತ್ತಿದೆ. ಕ್ರಸ್ಟ್ ಗೇಟ್ ನಂಬರ್ ಹಾಕಿದ ಬೃಹತ್ ಬ್ಯಾಲೆನ್ಸಿಂಗ್ ತೊಲೆಯನ್ನು ಸದ್ಯ ಕಳಚಿ ಇಡಲಾಗಿದೆ.
ಮಾಧ್ಯಮ ಕಂಡರೆ ಕೆಂಡ:
ಮಾಧ್ಯಮದವರು ದೂರದಲ್ಲೂ ಇರಕೂಡದು, ಅವರು ಇದ್ದಾರೆ ಎಂದರೆ ಕೆಲಸ ಮಾಡಿವುದಿಲ್ಲ ಎಂದು ಮುಖ್ಯ ಸಲಹೆಗಾರ ಕನ್ನಯ್ಯ ನಾಯ್ಡು ಖಡಾಖಂಡಿತವಾಗಿ ಹೇಳಿದ್ದಾರೆ. ಹೀಗಾಗಿ ಅಣೆಕಟ್ಟೆ ಕೆಳಭಾಗದ ನಡುಗಡ್ಡೆಯಲ್ಲಿ ನಿಂತು ವರದಿ ಮಾಡುತ್ತಿದ್ದ ಮಾಧ್ಯಮದವರನ್ನು ಹೊರಗೆ ಕಳುಹಿಸಲಾಗುತ್ತಿದೆ ಹಾಗೂ ನಡುಗಡ್ಡೆ ಪ್ರದೇಶಕ್ಕೆ ಇತರ ಮಾಧ್ಯಮದವರನ್ನು ತೆರಳದಂತೆ ತಡೆಹಿಡಿಯಲಾಗಿದೆ.
ಧುಮ್ಮುಕ್ಕಿ ಹರಿಯುತ್ರಿರುವ ಅಣೆಕಟ್ಟೆಯ ತೂಬಿನಲ್ಲಿ ಗೇಟ್ ಅಳವಡಿಸುವುದು ದೇಶದ ಇತಿಹಾಸದಲ್ಲೇ ಪ್ರಮುಖ ಘಟನೆ, ಇದರಲ್ಲಿ ಸ್ವಲ್ಪ ಹೆಚ್ಚುಕಮ್ಮಿ ಆದುದು ವರದಿಯಾಗಿಬಿಟ್ಟರೆ ಬಹಳ ದೊಡ್ಡ ಮುಜುಗರದ ಸ್ಥಿತಿಯಾಗುತ್ತದೆ, ಮೇಲಾಗಿ ಇದು ಹಕ್ಕು ಸ್ವಾಮ್ಯದ ವಿಚಾರವೂ ಆಗಿರುತ್ತದೆ, ಹೀಗಾಗಿ ವಿಡಿಯೊ ಮಾಡುವುದನ್ನು ಸಹ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
'ಇದೊಂದು ಬಹಳ ಮುಖ್ಯ ಕೆಲಸ. ಮಾಧ್ಯಮದವರು ದೂರದಲ್ಲೂ ಸಹ ಇರಕೂಡದು ಎಂಬ ಸ್ಪಷ್ಟ ಸೂಚನೆಯನ್ನು ಕನ್ನಯ್ಯ ನಾಯ್ಡು ಅವರು ತುಂಗಭದ್ರಾ ಮಂಡಳಿಯವರಿಗೆ ತಿಳಿಸಿದ್ದಾರೆ, ಮಾಧ್ಯಮದವರು ಇರುವಷ್ಟು ಹೊತ್ತು ಕೆಲಸ ಮಾಡುವುದಿಲ್ಲ ಎಂದೂ ಹೇಳಿದ್ದಾರೆ, ಹೀಗಾಗಿ ಕಟ್ಟುನಿಟ್ಟು ಜಾಸ್ತಿಯಾಗಿ ಮಾಡಲಾಗಿದೆ' ಎಂದು ಮುನಿರಾಬಾದ್ ನ ಪೊಲೀಸ್ ಅಧಿಕಾರಿಯೊಬ್ಬರು 'ಪ್ರಜಾವಾಣಿ'ಗೆ ತಿಳಿಸಿದರು.
ಸ್ಕೈವಾಕ್ ತೆಗೆಯಲು ಬೇಕು ಇನ್ನೂ 2 ಗಂಟೆ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ತೂಬಿನ ಮೇಲ್ಭಾಗದಲ್ಲಿ ಇರುವ ಸ್ಕೈವಾಕ್ ಕ್ರೇನ್‌ಗಳ ಚಲನೆಗೆ ಅಡ್ಡಿ ಆಗುತ್ತಿದೆ, ಹೀಗಾಗಿ ಅದನ್ನು ತೆಗೆಯುವ ಕೆಲಸ ನಡೆಯುತ್ತಿದೆ ಎಂದು ಅಣೆಕಟ್ಟೆ ಸಮೀಪದಿಂದ ಕೆಲವು ಮೂಲಗಳು ತಿಳಿಸಿವೆ.
ಸ್ಕೈವಾಕ್ ತೆಗೆಯಲು ಇನ್ನೂ ಎರಡು ಗಂಟೆ ಹಿಡಿಯಬಹುದು, ಬಳಿಕವಷ್ಟೇ ಗೇಟ್ ಅಳವಡಿಸಲಾಗುತ್ತದೆ, ಹೀಗಾಗಿ ಸಂಜೆ 6 ಗಂಟೆ ಸುಮಾರಿಗೆ ಒಂದು ಗೇಟ್ ಕೂರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ
ತುಂಗಭದ್ರಾ ಅಣೆಕಟ್ಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.