ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಂಜಲ್‌ಗೆ ಪರಿಹಾರ: ಸಿದ್ದರಾಮಯ್ಯ–ತೇಜಸ್ವಿಸೂರ್ಯ ‘ಟ್ವೀಟ್‌’ ಸಮರ

Published 5 ಡಿಸೆಂಬರ್ 2023, 16:11 IST
Last Updated 5 ಡಿಸೆಂಬರ್ 2023, 16:11 IST
ಅಕ್ಷರ ಗಾತ್ರ

ಬೆಂಗಳೂರು: ಜಮ್ಮು-ಕಾಶ್ಮೀರದ ರಜೌರಿಯಲ್ಲಿ ಉಗ್ರರ ಜೊತೆಗಿನ ಹೋರಾಟದಲ್ಲಿ ಹುತಾತ್ಮರಾಗಿದ್ದ  ಯೋಧ ಕ್ಯಾಪ್ಟನ್ ಪ್ರಾಂಜಲ್ ಅವರಿಗೆ ಪರಿಹಾರಧನ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಸದ ತೇಜಸ್ವಿ ಸೂರ್ಯ ನಡುವೆ ‘ಟ್ವೀಟ್‌ ಸಮರ’ ನಡೆದಿದೆ.

ಪ್ರಾಂಜಲ್ ಕುಟುಂಬಕ್ಕೆ ರಾಜ್ಯ ಸರ್ಕಾರ ₹ 50 ಲಕ್ಷ ಪರಿಹಾರ ಧನದ ಚೆಕ್ ನೀಡಿರುವುದನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿರುವ ತೇಜಸ್ವಿ ಸೂರ್ಯ, ‘ಹುತಾತ್ಮ ಯೋಧ ಕ್ಯಾ. ಪ್ರಾಂಜಲ್ ಕುಟುಂಬಕ್ಕೆ ಸರ್ಕಾರದ ವತಿಯಿಂದ ಘೋಷಣೆ ಮಾಡಿರುವ ಪರಿಹಾರದ ಕುರಿತಾಗಿ ಪತ್ರಕರ್ತರು ಭಾನುವಾರ ಪ್ರಶ್ನೆ ಕೇಳಿದಾಗ ‘ಪ್ರಾಂಜಲ್ ಯಾರು?’ ಎಂಬ ಉಡಾಫೆಯ ಮಾತುಗಳನ್ನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ಕುಟುಂಬಕ್ಕೆ ₹ 50 ಲಕ್ಷ  ಪರಿಹಾರವನ್ನು ಇಷ್ಟೆಲ್ಲ ಅವಾಂತರಗಳ ನಂತರ ತಡವಾಗಿಯಾದರೂ ಘೋಷಿಸಿರುವುದನ್ನು ನಾನು ಸ್ವಾಗತಿಸುತ್ತೇನೆ’ ಎಂದಿದ್ದಾರೆ.

ಇದಕ್ಕೆ ಟ್ವೀಟ್ ಮೂಲಕವೇ ತಿರುಗೇಟು ನೀಡಿರುವ ಮುಖ್ಯಮಂತ್ರಿ, ‘ತೇಜಸ್ವಿ ಸೂರ್ಯ ಎಂಬ ಬಿಜೆಪಿ ಸಂಸದ, ತಪ್ಪು ಅರ್ಥ ಬರುವಂತೆ ನನ್ನ ಹೇಳಿಕೆಯನ್ನು ತುಂಡರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿರುವುದು ನನ್ನ ಗಮನಕ್ಕೆ ಬಂತು. ಗದ್ದಲದ ಕಾರಣದಿಂದಾಗಿ ವರದಿಗಾರರ ಪ್ರಶ್ನೆ ಆರಂಭದಲ್ಲಿ ಸರಿಯಾಗಿ ಕೇಳಿರಲಿಲ್ಲ. ಪತ್ರಕರ್ತರ ಪ್ರಶ್ನೆ ಹುತಾತ್ಮರಾದ ವೀರಯೋಧ ಪ್ರಾಂಜಲ್ ಅವರ ಕುರಿತಾಗಿರುವುದು ಎಂದು ಗೊತ್ತಾದ ನಂತರ ರಾಜ್ಯ ಸರ್ಕಾರ ಪರಿಹಾರ ನೀಡಲು ಬದ್ಧವಾಗಿರುವುದನ್ನು ತಿಳಿಸಿದ್ದೇನೆ’ ಎಂದಿದ್ದಾರೆ.

‘ರಾಜಕೀಯ ದುರುದ್ದೇಶದಿಂದ ವಿಡಿಯೊವನ್ನು ತಿರುಚಿ ಹಂಚಿಕೊಂಡಿರುವ ತೇಜಸ್ವಿ ಸೂರ್ಯ,  ಹುತಾತ್ಮ ಪ್ರಾಂಜಲ್ ಮತ್ತು ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ ಸಮಸ್ತ ಯೋಧ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಈ ಸಂಸದನಲ್ಲಿ ಕಿಂಚಿತ್ತು ಮಾನ - ಮರ್ಯಾದೆ ಏನಾದರೂ ಉಳಿದುಕೊಂಡಿದ್ದರೆ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು’ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಯ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ‘ಯೋಧರೊಬ್ಬರು ತೀರಿಕೊಂಡು 12 ದಿವಸಗಳಾದರೂ ನಿಮ್ಮ ಸರ್ಕಾರದ ಯಾವೊಬ್ಬ ಅಧಿಕಾರಿಯೂ ಸಂಪರ್ಕಿಸದೇ ಇದ್ದಿದ್ದು ಸತ್ಯ. ನಾನು ನಿಮಗೆ ಪತ್ರ ಬರೆದು ಜ್ಞಾಪಿಸುವವರೆಗೂ ಪರಿಹಾರ ನೀಡಲು ತಾವುಗಳು ಮೀನಮೇಷ ಎಣಿಸಿದ್ದು ಕೂಡ ಸತ್ಯ. ಮಾಧ್ಯಮದ ಸ್ನೇಹಿತರು ತಮ್ಮನ್ನು ಪ್ರಶ್ನಿಸಿದಾಗ, ಸರಿಯೋ ತಪ್ಪೋ ನೀವು ಪರಿಹಾರವನ್ನೇ ಘೋಷಿಸಿಲ್ಲ ಎಂದು ಹೇಳಿರುವುದೂ ಸತ್ಯ. ಒತ್ತಡದ ನಂತರವೇ ತಾವು ಪರಿಹಾರ ಘೋಷಿಸಿದ್ದು ಕೂಡ ಸತ್ಯ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT