ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜ್ವಲ್‌ ವಿರುದ್ಧ ಯುಎ‍ಪಿಎ: ಪ್ರಗತಿಪರರ ಆಗ್ರಹ

Published 16 ಮೇ 2024, 0:46 IST
Last Updated 16 ಮೇ 2024, 0:46 IST
ಅಕ್ಷರ ಗಾತ್ರ

ಬೆಂಗಳೂರು: ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕು. ಯುಎ‍ಪಿಎ ಕಾಯ್ದೆಯ ಅಡಿಯೂ ಪ್ರಕರಣ ದಾಖಲಿಸಬೇಕು ಎಂದು 100ಕ್ಕೂ ಹೆಚ್ಚು ಮಂದಿ ಪ್ರಗತಿಪರ ಚಿಂತಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ಪ್ರಜ್ವಲ್‌ ವಿರುದ್ಧ ಆರೋಪ ಕೇಳಿ ಬಂದ ತಕ್ಷಣ ಅವರ ಚಲನವಲನಗಳ ಮೇಲೆ ನಿಗಾ ವಹಿಸದೇ ಸರ್ಕಾರ ನಿರ್ಲಕ್ಷ್ಯ ಮಾಡಿದ್ದು ಸರಿಯಲ್ಲ. ಸರಣಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯನ್ನು ವಿದೇಶಕ್ಕೆ ಪಲಾಯನ ಮಾಡಲು ಅವಕಾಶ ನೀಡಿದ್ದೇ ತಪ್ಪು. ಇದರಿಂದ ಮಹಿಳೆಯರು ಸರ್ಕಾರದ ಮೇಲೆ ಇಟ್ಟ ವಿಶ್ವಾಸಕ್ಕೆ ಚ್ಯುತಿಯಾಗಿದೆ. ಹಾಸನ ಕ್ಷೇತ್ರದ ಚುನಾವಣೆಯನ್ನು ಸ್ಥಗಿತಗೊಳಿಸದೆ ಆರೋಪಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಒದಗಿಸಿದ್ದು ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಮಾಡಿದ ಅಪಚಾರ’ ಎಂದು ಕುಂ.ವೀರಭದ್ರಪ್ಪ, ಜಿ. ರಾಮಕೃಷ್ಣ, ವಸುಂಧರ ಭೂಪತಿ, ಕೆ. ಶರೀಫಾ, ಮೀನಾಕ್ಷಿ ಬಾಳಿ, ಎಂ.ಆರ್. ಕಮಲಾ, ಕೆ. ಫಣಿರಾಜ್‌, ನಾಗೇಶ ಹೆಗಡೆ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ರತಿರಾವ್ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂತಹ ಪ್ರಕರಣದಲ್ಲಿ ರಾಜಕೀಯ ನಾಯಕರು ಜಾತಿ ಆಧಾರಿತ, ಲಿಂಗತ್ವ ಸೂಕ್ಷ್ಮತೆ ಇಲ್ಲದ ಹೇಳಿಕೆ ನೀಡುತ್ತಿದ್ದಾರೆ. ಸಮೂಹ ಮಾಧ್ಯಮಗಳು ಸಂತ್ರಸ್ತೆಯರನ್ನೇ ಅಪರಾಧಿಗಳಂತೆ ಬಿಂಬಿಸುತ್ತಿವೆ. ಅವರ ಮಾನಸಿಕ ನೆಮ್ಮದಿ ಹಾಳುಮಾಡಿವೆ. ಸಂತ್ರಸ್ತೆಯರ ಘನತೆಯನ್ನು ಕುಂದಿಸುತ್ತಿವೆ. ಗುರುತು ಬಯಲಾದ ಕುಟುಂಬಗಳು ತೀವ್ರ ಮಾನಸಿಕ ಯಾತನೆಗೆ ಗುರಿಯಾಗಿವೆ. ಇಂತಹ ಕುಟುಂಬಗಳ ಸದಸ್ಯರು ಮತ್ತು ಮಕ್ಕಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಕೆಲವರು ಆತ್ಮಹತ್ಯೆಗೂ ಪ್ರಯತ್ನಿಸಿದ್ದಾರೆ. ಸಂತ್ರಸ್ತರು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದು, ದೂರು ಕೊಡುವುದಕ್ಕೆ ಹಿಂಜರಿಯುತ್ತಿದ್ದಾರೆ. ಇಂತಹ ಸಮಯದಲ್ಲಿ ಸರ್ಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಶಾಸಕ ಎಚ್.ಡಿ.ರೇವಣ್ಣ ಲೈಂಗಿಕ ದೌರ್ಜನ್ಯ, ಸಂತ್ರಸ್ತ ಮಹಿಳೆ ಅಪಹರಣದ ಆರೋಪ ಹೊತ್ತಿದ್ದಾರೆ. ತನಿಖೆ ಪೂರ್ಣಗೊಳ್ಳುವವರೆಗೂ ಅವರ ವಿಧಾನಸಭಾ ಸದಸ್ಯತ್ವ ಅಮಾನತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT