ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದೆಲ್ಲೆಡೆ ವಿದ್ಯುತ್‌ ಕಣ್ಣಾಮುಚ್ಚಾಲೆ

Published 13 ಜೂನ್ 2023, 19:46 IST
Last Updated 13 ಜೂನ್ 2023, 19:46 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯೂ ಸೇರಿದಂತೆ ರಾಜ್ಯದ ಬಹುತೇಕ ನಗರಗಳು ಮತ್ತು ಎಲ್ಲ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆ ನಿರಂತರ ವ್ಯತ್ಯಯವಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೂ ಸಮರ್ಪಕವಾಗಿ ವಿದ್ಯುತ್‌ ಸರಬರಾಜು ಆಗುತ್ತಿಲ್ಲ.‘ಲೋಡ್‌ ಶೆಡ್ಡಿಂಗ್‌ ಇಲ್ಲ’ ಎಂದು ಎಸ್ಕಾಂ ಅಧಿಕಾರಿಗಳು ಸ್ಪಷ್ಟನೆ ನೀಡುತ್ತಿದ್ದಾರಾದರೂ ವಿದ್ಯುತ್‌ ಕಣ್ಣಾಮುಚ್ಚಾಲೆ ಮಾತ್ರ ಮುಂದುವರಿದಿದೆ.

ಮುಂಗಾರು ವಿಳಂಬವಾಗಿ ತಾಪಮಾನ ಹೆಚ್ಚಾಗಿರುವುದರಿಂದ ವಿದ್ಯುತ್‌ಗೆ ಸಹಜವಾಗಿಯೇ ಬೇಡಿಕೆ ಹೆಚ್ಚಾಗಿದೆ. ಆದರೆ, ಪೂರೈಕೆ ಅನಿಯಮಿತವಾಗಿ ಸ್ಥಗಿತಗೊಳ್ಳುತ್ತಿರುವ ಕಾರಣ ಜನ ಬೇಸತ್ತಿದ್ದಾರೆ. ‘ಉತ್ಪಾದನೆಯಲ್ಲಿ ಏನೂ ಕುಸಿತವಾಗಿಲ್ಲ. ಬೇಡಿಕೆಯಷ್ಟು ಪೂರೈಸುತ್ತಿದ್ದೇವೆ. ದುರಸ್ತಿ ಕಾರ್ಯ ಮತ್ತು ನಿರ್ವಹಣೆಗಾಗಿ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿರಬಹುದು’ ಎಂದು ಕೆಪಿಟಿಸಿಎಲ್‌ ಅಧಿಕಾರಿಗಳು ಹೇಳುತ್ತಾರೆ.  

ಬೆಂಗಳೂರಿನಲ್ಲೇ ಯಾವುದೇ ಮುನ್ಸೂಚನೆಯಿಲ್ಲದೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ. ಹೀಗೆ ಬೇಕಾಬಿಟ್ಟಿ ವಿದ್ಯುತ್‌ ಕಡಿತದ ಕುರಿತು ನಗರದ ಹಲವು ಪ್ರದೇಶಗಳ ಜನ ದೂರುತ್ತಿದ್ದಾರೆ. ಆದರೆ, ಅಘೋಷಿತ ಲೋಡ್‌ ಶೆಡ್ಡಿಂಗ್‌ ಆಗುತ್ತಿದೆ ಎಂಬುದನ್ನು ಒಪ್ಪಲು ಬೆಸ್ಕಾಂ ಅಧಿಕಾರಿಗಳು ಸಿದ್ಧರಿಲ್ಲ.

‘ಲೋಡ್‌ ಶೆಡ್ಡಿಂಗ್‌ ಮಾಡಿಲ್ಲ. ಅಂತಹ ಪರಿಸ್ಥಿತಿಯೂ ಇಲ್ಲ. ಚುನಾವಣೆ, ಪರೀಕ್ಷೆ ಕಾರಣಗಳಿಗೆ ನಿರ್ವಹಣೆ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಹಲವೆಡೆ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಂಡಿದ್ದರಿಂದ ವಿದ್ಯುತ್‌ ವ್ಯತ್ಯಯವಾಗುತ್ತಿದೆ. ಮಳೆ ಆರಂಭವಾದರೆ ಕೃಷಿ ಪಂಪ್‌ಸೆಟ್‌ ಸೇರಿದಂತೆ ಗೃಹ ಬಳಕೆಯ ವಿದ್ಯುತ್‌ ಕಡಿಮೆಯಾಗುತ್ತದೆ. ಇದರಿಂದ ಸಹಜವಾಗಿಯೇ ಬೇಡಿಕೆ ಕುಸಿಯುತ್ತದೆ’ ಎಂದು ಬೆಸ್ಕಾಂ ಅಧಿಕಾರಿಗಳು ವಿವರಿಸುತ್ತಾರೆ.

ಈ ಬಾರಿ ಬೇಸಿಗೆ ಬಿಸಿಲು ಹೆಚ್ಚಿದ್ದು, ಸೆಕೆಯಿಂದ ಮಲೆನಾಡ ಜನರೂ ತತ್ತರಿಸಿದ್ದಾರೆ. ಅದರ ನಡುವೆ ವಿದ್ಯುತ್ ಕಡಿತ ಅಸಹನೀಯವಾಗಿಸಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹಗಲು ಹೊತ್ತು, ಸಂಜೆ, ತಡರಾತ್ರಿ ಹೀಗೆ ಯಾವುದೇ ಮುನ್ಸೂಚನೆ ಇಲ್ಲದೇ ವಿದ್ಯುತ್ ಕಡಿತಗೊಳ್ಳುತ್ತಿದೆ.  

ಬಯಲುಸೀಮೆಯ ಚಿತ್ರದುರ್ಗ ಜಿಲ್ಲೆಯಾದ್ಯಂತ ಕಳೆದ 15 ದಿನಗಳಿಂದ ಅನಿಯಮಿತ, ಅಘೋಷಿತ ಲೋಡ್‌ ಶೆಡ್ಡಿಂಗ್‌ ಮಾಡಲಾಗುತ್ತಿದೆ. ಬೆಳಿಗ್ಗೆ 6 ರಿಂದ 9 ಗಂಟೆ ಹಾಗೂ ಸಂಜೆ 5ರಿಂದ ರಾತ್ರಿ 10ರವರೆಗೂ ವಿದ್ಯುತ್‌ ವ್ಯತ್ಯಯ ಸಾಮಾನ್ಯವಾಗಿದೆ.

ಶಾಲೆ–ಕಾಲೇಜು ಆರಂಭ ಆಗಿರುವುದರಿಂದ ಸಕಾಲಕ್ಕೆ ಮಕ್ಕಳಿಗೆ ಉಪಾಹಾರ ಸಿದ್ಧಗೊಳಿಸಲು ಗೃಹಿಣಿಯರಿಗೆ ಸಾಧ್ಯವಾಗುತ್ತಿಲ್ಲ. ಜೆರಾಕ್ಸ್, ಕಂಪ್ಯೂಟರ್‌ ಸೆಂಟರ್‌ಗಳ ಮಾಲೀಕರು ಅನಿವಾರ್ಯವಾಗಿ ಜನರೇಟರ್‌ ಮೊರೆ ಹೋಗುವಂತಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ವರ್ತಕರು ಎಲೆಕ್ಟ್ರಾನಿಕ್‌ ತೂಕದ ಯಂತ್ರ ಬಳಸುತ್ತಿರುವ ಕಾರಣ ಕೆಲಸದಲ್ಲಿ ವಿಳಂಬವಾಗುತ್ತಿದ್ದು, ರೈತರು ಸಮಸ್ಯೆಗೆ ತುತ್ತಾಗಿದ್ದಾರೆ.

ನಿರ್ವಹಣೆ ಕಾರಣಕ್ಕೆ ಹಲವು ಬಾರಿ ಮಾಹಿತಿ ನೀಡದೆಯೇ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ (ಜೆಸ್ಕಾಂ) ಬೇಕಾಬಿಟ್ಟಿ ವಿದ್ಯುತ್ ಕಡಿತ ಮಾಡುತ್ತಿರುವ ದೂರುಗಳೂ ಕೇಳಿ ಬಂದಿವೆ.

ಕಲ್ಯಾಣ ಕರ್ನಾಟಕದಲ್ಲಿ ಇನ್ನೂ ಮುಂಗಾರು ಮಳೆ ಆರಂಭವಾಗಿಲ್ಲ. ಕೆಂಡದಂತಹ ಬಿಸಿಲು ಹಾಗೂ ಸೆಕೆ ಇದೆ. ಹೀಗಾಗಿ, ಐದು ನಿಮಿಷ ವಿದ್ಯುತ್ ಇಲ್ಲದಿದ್ದರೆ ಫ್ಯಾನ್, ಕೂಲರ್, ಎ.ಸಿಗಳು ಬಂದ್ ಆಗಿ ಬೆವರು ಹರಿಯಲು ಶುರುವಾಗುತ್ತದೆ. ಇತ್ತೀಚೆಗೆ ಕಲಬುರಗಿಯ ಐವಾನ್ ಇ ಶಾಹಿ ಬಡಾವಣೆ ಪ್ರದೇಶದಲ್ಲಿ ಸಂಜೆ ಸುಮಾರು ಒಂದು ಗಂಟೆ ವಿದ್ಯುತ್ ಕಡಿತ ಮಾಡಲಾಗಿತ್ತು. ಈ ಬಗ್ಗೆ ಜೆಸ್ಕಾಂ ಯಾವುದೇ ಮುನ್ಸೂಚನೆಯನ್ನೂ ನೀಡಿರಲಿಲ್ಲ.

ಕಲಬುರಗಿ ಅಷ್ಟೇ ಅಲ್ಲದೇ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿಯೂ ವಿದ್ಯುತ್ ಕೈ ಕೊಡುವುದು ಸಾಮಾನ್ಯವಾಗಿದೆ.

ಮಂಗಳೂರು ಭಾಗದಲ್ಲಿ ಯಾವುದೇ ಮುನ್ಸೂಚನೆ ನೀಡದೆಯೇ ವಿದ್ಯುತ್‌ ಪೂರೈಕೆ ಸ್ಥಗಿತಗೊಳ್ಳುವ ಪ್ರಮಾಣ ಕೆಲ ದಿನಗಳಿಂದ ಈಚೆಗೆ ಹೆಚ್ಚುತ್ತಿದೆ. ಕೆಲವೊಮ್ಮೆ ವಿದ್ಯುತ್‌ ಇಲ್ಲದೇ ಗಂಟೆಗಟ್ಟಲೆ ಕಳೆಯಬೇಕಾದ ಸ್ಥಿತಿ ಇದೆ.

ಕೊಡಗು ಜಿಲ್ಲೆಯ ವಿವಿಧೆಡೆ ಮಳೆ–ಗಾಳಿಗೆ ಮರದ ಕೊಂಬೆಗಳು ವಿದ್ಯುತ್ ಲೇನ್‌ನ ಮೇಲೆ ಬೀಳುವುದು ಸಾಮಾನ್ಯ. ಸಿಬ್ಬಂದಿ ಸ್ಥಳ ತಲುಪಿ ಸರಿಪಡಿಸುವವರೆಗೂ ಆ ಮುಂದಿನ ಎಲ್ಲ ಪ್ರದೇಶಗಳಿಗೆ ವಿದ್ಯುತ್ ಸಂಪರ್ಕವೇ ಇರುವುದಿಲ್ಲ. ಕೈಗಾರಿಕಾ ಜಿಲ್ಲೆಯಾಗದ ಕಾರಣ ವಿದ್ಯುತ್‌ ಬಳಕೆ ಪ್ರಮಾಣ ಇತರ ಜಿಲ್ಲೆಗಳಂತೆ ಇಲ್ಲ. ಹೀಗಿದ್ದೂ ಈ ಭಾಗದಲ್ಲಿ ಸಹ ವಿದ್ಯುತ್‌ ಪೂರೈಕೆ ವ್ಯತ್ಯಯಗೊಳ್ಳುತ್ತಿರುವುದು ಸಾಮಾನ್ಯವಾಗಿದೆ.

ಎಲ್ಲೆಲ್ಲಿ ಸಮಸ್ಯೆ?

ಬೆಸ್ಕಾಂ - ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ

ಮೆಸ್ಕಾಂ - ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ

ಜೆಸ್ಕಾಂ – ಬೀದರ್‌, ಕಲಬುರಗಿ, ಕೊಪ್ಪಳ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ

ಎಲ್ಲೆಲ್ಲಿ ಕಡಿಮೆ ಸಮಸ್ಯೆ?

ಹೆಸ್ಕಾಂ– ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, 

ಸೆಸ್ಕ್‌ - ಮೈಸೂರು, ಕೊಡಗು, ಮಂಡ್ಯ, ಹಾಸನ, ಚಾಮರಾಜನಗರ 

ಪ್ರತಿದಿನ ಒಂದರಿಂದ ಒಂದೂವರೆ ಗಂಟೆ ವಿದ್ಯುತ್‌ ಕಡಿತ ಸಾಮಾನ್ಯ. ಈ ಬಗ್ಗೆ ಮುಂಚಿತವಾಗಿ ಮಾಹಿತಿಯನ್ನು ಸಹ ನೀಡುವುದಿಲ್ಲ. ವೋಲ್ಟೇಜ್‌ ಸಮಸ್ಯೆಯೂ ಇದೆ. ದಿಢೀರ್‌ ವಿದ್ಯುತ್‌ ಕಡಿತದಿಂದ ಕಾರ್ಖಾನೆಯಲ್ಲಿ ಉತ್ಪಾದನೆಯ ಅಂತಿಮ ಹಂತದಲ್ಲಿರುವ ವಿವಿಧ ಉತ್ಪನ್ನಗಳ ತಯಾರಿಕೆಗೆ ತೊಡಕಾಗುತ್ತಿದೆ
ಕೆ.ಎನ್. ನರಸಿಂಹಮೂರ್ತಿ, ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಂಘದ (ಕಾಸಿಯಾ) ಅಧ್ಯಕ್ಷ
ಕೆಲವು ವರ್ಷಗಳಿಂದ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್‌ ಪೂರೈಕೆಯನ್ನು ಅನಿಯಮಿತವಾಗಿ ಕಡಿತಗೊಳಿಸುವುದು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆಯಾಗಿತ್ತು. ಆದರೆ, ಈ ಸಲ ವಿದ್ಯುತ್‌ ಕೈಕೊಡುತ್ತಿದೆ. ಮುನ್ಸೂಚನೆ ಇಲ್ಲದೆಯೇ ಕೆಲವೊಮ್ಮೆ ವಿದ್ಯುತ್‌ ಪೂರೈಕೆ ನಿಲ್ಲಿಸಲಾಗುತ್ತಿದೆ
ರಾಜೇಶ್‌, ಗ್ರಾಹಕ ಮಂಗಳೂರು
ಜೆಸ್ಕಾಂ ವ್ಯಾಪ್ತಿಯಲ್ಲಿ ಎಲ್ಲಿಯೂ ಲೋಡ್ ಶೆಡ್ಡಿಂಗ್ ಮಾಡುತ್ತಿಲ್ಲ. ನಮ್ಮ ಬಳಿ ಸಾಕಷ್ಟು ವಿದ್ಯುತ್ ಸಂಗ್ರಹವಿದೆ. ಕೊಪ್ಪಳ ಹಾಗೂ ಗಂಗಾವತಿ ತಾಲ್ಲೂಕುಗಳಲ್ಲಿ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದರಿಂದ ಅಲ್ಲಿ ದುರಸ್ತಿ ಸಂದರ್ಭದಲ್ಲಿ ಕೆಲಕಾಲ ವಿದ್ಯುತ್ ಕಡಿತ ಮಾಡಿದ್ದೆವು
ರಾಹುಲ್ ಪಾಂಡ್ವೆ, ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT